ಸದಾನಂದ ಗೌಡರನ್ನು ಸಂಪುಟದಿಂದ ಕೈಬಿಡಿ : ಹಿರೇಮಠ್
ಧಾರವಾಡ, ಜೂ.11 : ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಒತ್ತಾಯಿಸಿದ್ದಾರೆ. ಯಡಿಯೂರಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವುದಕ್ಕೆ ಅವರು ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಧಾರವಾಡದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಎಸ್.ಆರ್.ಹಿರೇಮಠ, ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪ ಹೊತ್ತಿರುವ ಕೇಂದ್ರ ರೈಲ್ವೇ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದ ಪ್ರಕರಣ ಸದಾನಂದ ಗೌಡರ ವಿರುದ್ಧವಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು, ಈಗಾಗಲೇ ಕರ್ನಾಟಕ ಹೈಕೋರ್ಟ್ ಸದಾನಂದ ಗೌಡರು ದೋಷಿ ಎಂದು ತೀರ್ಪು ನೀಡಿದೆ ಎಂದರು.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ನರೇಂದ್ರ ಮೋದಿ ಅವರು ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಗೆಯೇ ಅಧಿಕಾರ ದುರುಪಯೋಗ ಆರೋಪವಿರುವ ಸದಾನಂದ ಗೌಡರನ್ನು ಸಂಪುಟದಿಂದ ಕೈಬಿಡಲಿ ಎಂದು ಹಿರೇಮಠ್ ಒತ್ತಾಯಿಸಿದರು.
ಏನಿದು ಪ್ರಕರಣ : ಬೆಂಗಳೂರಿನ ಹೆಚ್‌ಎಸ್‌ಆರ್ ಲೇ ಔಟ್‌ನಲ್ಲಿ ಬಿಡಿಎ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಸದಾನಂದ ಗೌಡ, ಶಾಸಕ ಜೀವರಾಜ್ ರವರಿಗೆ ಸೇರಿದ ಜಂಟಿ ನಿವೇಶನಗಳನ್ನು ಸೇರಿಸಿಕೊಂಡು ಕಮರ್ಷಿಯಲ್ ಕಟ್ಟಡ ನಿರ್ಮಿಸುತ್ತಿದ್ದಾರೆಂದು ನಾಗಲಕ್ಷ್ಮೀ ಬಾಯಿ ಎಂಬವರು ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.












Click it and Unblock the Notifications