Heavy Rain: ಭಾರೀ ಮಳೆಯಿಂದ ಧಾರವಾಡ ಜಿಲ್ಲೆಯ ಹಲವೆಡೆ ಅಪಾರ ಹಾನಿ, ಇಲ್ಲಿದೆ ವಿವರ
ಧಾರವಾಡ, ಜುಲೈ, 24: ಭಾನುವಾರ (ಜುಲೈ 23) ಭಾರೀ ಮಳೆ ಸುರಿದ ಹಿನ್ನೆಲೆ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿನ ಸುಮಾರು 24 ಮನೆಗಳಿಗೆ ಹಾನಿ ಆಗಿದ್ದು, ಮತ್ತೊಂದೆಡೆ ಗೊಡೆ ಕುಸಿದು 1 ಜಾನುವಾರು ಜೀವ ಹಾನಿ ಆಗಿದೆ ಎಂದು ಜಿಲ್ಲಾಡಳಿತದ ಮಾಹಿತಿ ನೀಡಿದೆ.
ನಿರಂತರ ಮಳೆಯಿಂದಾಗಿ ಧಾರವಾಡ ತಾಲೂಕಿನಲ್ಲಿ 2, ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 1, ಅಳ್ನಾವರ ತಾಲೂಕಿನಲ್ಲಿ 2, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 2, ಕುಂದಗೋಳ ತಾಲೂಕಿನಲ್ಲಿ 6, ಅಣ್ಣಿಗೇರಿ ತಾಲೂಕಿನಲ್ಲಿ 5, ನವಲಗುಂದ ತಾಲೂಕಿನಲ್ಲಿ 3 ಮತ್ತು ಕಲಘಟಗಿ ತಾಲೂಕಿನಲ್ಲಿ 1 ತೀವ್ರತರ ಹಾಗೂ 2 ಭಾಗಶಃ ಸೇರಿದಂತೆ ಒಟ್ಟು 5 ಮನೆಗಳು ಒಳಗೊಂಡಂತೆ ಜಿಲ್ಲೆಯ 8 ತಾಲೂಕುಗಳಲ್ಲಿ 24 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ತಿಳಿದುಬಂದಿದೆ.

ನಿರಂತರವಾಗಿ ಸುರಿದ ಮಳೆಯಿಂದಾಗಿ ಅಳ್ನಾವರ ತಾಲೂಕಿನ ಹೊನ್ನಾಪುರ ಗಾಮದ ಸಿದ್ದಪ್ಪ ಭೀಮಪ್ಪ ನಾಯ್ಕ ಅವರ ದನದ ಕೊಟ್ಟಿಗೆ ಕುಸಿದು, 1 ಎಮ್ಮೆಗೆ ಹಾನಿಯಾಗಿದೆ. ಈ ಎಲ್ಲ ಪ್ರಕರಣಗಳ ಕುರಿತು ಗ್ರಾಮ ಅಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ತಹಶೀಲ್ದಾರರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ತನಿಖಾ ತಂಡದಿಂದ ಪರಿಶೀಲನೆ ಕಾರ್ಯ ಜರುಗಿಸಿ, ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ನಿಯಮಾವಳಿಗಳಂತೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹೋಬಳಿಗಳಲ್ಲಿ ಇವತ್ತಿನವರೆಗೂ ಸರಾಸರಿಗಿಂತ ಹೆಚ್ಚು ಮಳೆ ಆಗಿದ್ದು, ಕಳೆದ 8-10 ದಿನಗಳಿಂದ ನಿರಂತರವಾಗಿ ಮಳೆ ಆಗುತ್ತಿದ್ದು, ಅಲ್ಲಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಜುಲೈ 23 ರಂದು ದಾಖಲಾಗಿರುವಂತೆ ಧಾರವಾಡ ತಾಲೂಕು ವಾಡಿಕೆ ಮಳೆ 3.6 ಮೀ.ಮಿ ಆಗಿದ್ದು, ವಾಸ್ತವಿಕವಾಗಿ 19.6 ಮಿ.ಮೀ. ಆಗಿದೆ. ಹುಬ್ಬಳ್ಳಿ ತಾಲೂಕು ವಾಡಿಕೆ ಮಳೆ 4.6 ಮಿ.ಮೀ ಆಗಿದ್ದು, ವಾಸ್ತವಿಕವಾಗಿ 15.8 ಮೀ.ಮಿ. ಆಗಿದೆ. ಕಲಘಟಗಿ ತಾಲೂಕು ವಾಡಿಕೆ ಮಳೆ 6.2 ಮಿ.ಮೀ ಆಗಿದ್ದು, ವಾಸ್ತವಿಕವಾಗಿ 42.1 ಮಿ.ಮೀ. ಆಗಿದೆ. ಕುಂದಗೋಳ ತಾಲೂಕು ವಾಡಿಕೆ ಮಳೆ 4.4 ಮಿ.ಮೀ ಆಗಿದ್ದು, ವಾಸ್ತವಿಕವಾಗಿ 17.3 ಮಿ.ಮೀ. ಆಗಿದೆ.
ನವಲಗುಂದ ತಾಲೂಕಿನಲ್ಲಿ ವಾಡಿಕೆ ಮಳೆ 1.4 ಮಿ.ಮೀ ಆಗಿದ್ದು, ವಾಸ್ತವಿಕವಾಗಿ 5.3 ಮಿ.ಮೀಟರ್ ಆಗಿದೆ. ಹುಬ್ಬಳ್ಳಿ ಶಹರ ತಾಲೂಕು ವಾಡಿಕೆ ಮಳೆ 3.5 ಮಿ.ಮೀ ಆಗಿದ್ದು, ವಾಸ್ತವಿಕವಾಗಿ 16.3 ಮಿ.ಮೀ. ಆಗಿದೆ. ಅಳ್ನಾವರ ತಾಲೂಕು ವಾಡಿಕೆ ಮಳೆ 11.5 ಮಿ.ಮೀ. ಆಗಿದ್ದು, ವಾಸ್ತವಿಕವಾಗಿ 47.7 ಮಿ.ಮೀ. ಆಗಿದೆ. ಅಣ್ಣಿಗೇರಿ ತಾಲೂಕಿನಲ್ಲಿ ವಾಡಿಕೆ ಮಳೆ 1.6 ಮಿ.ಮೀಟರ್ ಆಗಿದ್ದು, ವಾಸ್ತವಿಕವಾಗಿ 5.8 ಮಿ.ಮೀ. ಆಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಜೂನ್ 128.4 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ ವಾಸ್ತವವಾಗಿ 42.9 ಮಿ.ಮೀನಷ್ಟು ಮಳೆ ಆಗಿದ್ದು, ಶೇಕಡಾ 64 ರಷ್ಟು ಮಳೆ ಕೊರತೆ ಆಗಿದೆ. ಅದರಂತೆ ಜುಲೈ ತಿಂಗಳಲ್ಲಿ ಈವರೆಗೆ ವಾಡಿಕೆಯಂತೆ 121 ಮಿಲಿ.ಮೀಟರ್ ಮಳೆ ಆಗಬೇಕಿತ್ತು. ಆದರೆ ವಾಸ್ತವವಾಗಿ 184 ಮಿ.ಮೀ. ಮಳೆ ಆಗಿದ್ದು, ಶೇಕಡಾ 60ರಷ್ಟು ಹೆಚ್ಚುವರಿ ಮಳೆ ಆಗಿದೆ.
ಹಾಗೆಯೇ ಇನ್ನೂ ಮೂರ್ನಾಲ್ಕು ದಿನ ಜಿಲ್ಲೆಯಲ್ಲಿ ಮಳೆ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರ ಸುರಕ್ಷತೆ ಬಗ್ಗೆ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್‌ನಿಂದ ಇಲ್ಲಿಯವರೆಗೆ ಜನ, ಜಾನುವಾರು, ಮನೆ ಹಾನಿ
ಕಳೆದ ಏಪ್ರಿಲ್ 2023ರಿಂದ ಜುಲೈ 23ರವೆಗೆ ಜಿಲ್ಲೆಯಲ್ಲಿ 1 ಮಾನವ ಜೀವ ಹಾನಿ ಹಾಗೂ 23 ಜಾನುವಾರು ಜೀವ ಹಾನಿಯಾದ ವರದಿ ಆಗಿದೆ. ಇದರಲ್ಲಿನ 1 ಮಾನವ ಜೀವ ಹಾನಿ ಹಾಗೂ 17 ಜಾನುವಾರು ಹಾನಿಗೆ ಸರ್ಕಾರದ ನಿಯಮಾನುಸಾರ ಈಗಾಗಲೇ ಪರಿಹಾರ ನೀಡಲಾಗಿದೆ.
ಉಳಿದಂತೆ ಹುಬ್ಬಳ್ಳಿ ತಾಲೂಕಿನ ಕಟ್ನೂರದಲ್ಲಿ 5 ಕುರಿಮರಿಗಳು ಮತ್ತು ಹೊನ್ನಾಪುರ ಗ್ರಾಮದಲ್ಲಿ 1 ಎಮ್ಮೆ ಜಾನುವಾರು ಜೀವ ಹಾನಿ ಆಗಿದ್ದು, ನಿಯಮಾನುಸಾರ ಪರಿಶೀಲಿಸಿ ಶೀಘ್ರವಾಗಿ ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಹಾಗೂ ನಗರಗಳಲ್ಲಿ ಮಳೆಯಿಂದಾಗಿ ಏಪ್ರಿಲ್‌ದಿಂದ ಇಲ್ಲಿವರೆಗೆ 83 ಮನೆಗಳಿಗೆ ಭಾಗಶಃ ಹಾಗೂ 6 ಮನೆಗಳಿಗೆ ತೀವ್ರತರವಾಗಿ ಹಾನಿಯಾಗಿದೆ. ಈ ಕುರಿತು ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳು ವರದಿ ಸಲ್ಲಿಸಿದ ನಂತರ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.












Click it and Unblock the Notifications