ಉತ್ತರ ಕರ್ನಾಟಕದಿಂದ ಕೈ ಜಾರಿದ ಹೆಲ್ತ್ ಸಿಟಿ ಯೋಜನೆ, ದೇವನಹಳ್ಳಿಗೆ ಶಿಫ್ಟ್
ಧಾರವಾಡ, ನವೆಂಬರ್ 25: ಉತ್ತರ ಕರ್ನಾಟಕದ ನೂರಾರು ಜನರಿಗೆ ಆರೋಗ್ಯ ಸೇವೆ ನೀಡಬೇಕಾದ ಹೆಲ್ತ್ ಸಿಟಿ ಯೋಜನೆ ಇದೀಗ ಬೆಂಗಳೂರಿನ ದೇವನಹಳ್ಳಿ ಪಾಲಾಗಿದೆ. ಧಾರವಾಡದಲ್ಲಿ ಹೆಲ್ತ್ ಸಿಟಿ ಸ್ಥಾಪನೆ ಪ್ರಸ್ತಾಪವಿದ್ದು, ಹಿಂದಿನ ಸಮ್ಮಿಶ್ರ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸದೇ, ಪ್ರಭಾವ ಬಳಸಿ ಬೆಂಗಳೂರಿನ ಸಮೀಪದ ದೇವನಹಳ್ಳಿಗೆ ಅದನ್ನು ವರ್ಗಾಯಿಸಿದ್ದಾರೆ ಎಂಬುದು ಜನರ ಆರೋಪ.
ಈಗಾಗಲೇ ದೇಶದಲ್ಲಿ ವಿವಿಧ ಕಡೆ ಹೆಲ್ತ್ ಸಿಟಿ ಯೋಜನೆಯ ಕಾಮಗಾರಿ ಆರಂಭವಾಗಿದೆ. ಹೆಲ್ತ್ ಸಿಟಿ ಯೋಜನೆ ಆರಂಭವಾಗಿದ್ದು ಯಾವಾಗ? ಅದು ಧಾರವಾಡದ ಕೈ ತಪ್ಪಲು ಕಾರಣ ಏನಿರಬಹುದು?

ಏನಿದು ಹೆಲ್ತ್ ಸಿಟಿ ಯೋಜನೆ
ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಇಂಗ್ಲೆಂಡ್ ಪ್ರಧಾನಿಯಾಗಿದ್ದ ಡೇವಿಡ್ ಕೆಮನೂರ್ ಜತೆ ಚರ್ಚೆ ನಡೆಸಿ ಭಾರತದಲ್ಲಿ ಹೂಡಿಕೆಗೆ ಆಹ್ವಾನ ನೀಡಿದ್ದರು. ಅದರ ಫಲವಾಗಿ ಇಂಗ್ಲೆಂಡ್ ಯುಕೆ ಗ್ಲೋಬಲ್ ಹೆಲ್ತ್ ಕೇರ್ ಕಂಪನಿಯಿಂದ ಇಂಡೋ-ಯುಕೆ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ಗ್ರೂಪ್ (ಐಯುಐಎಚ್ ) ಅಸ್ತಿತ್ವಕ್ಕೆ ಬಂದಿದ್ದು, ದೇಶಾದ್ಯಂತ ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಸೇರಿದಂತೆ 11 ಕಡೆ ಬೃಹತ್ ಆಸ್ಪತ್ರೆ ನಿರ್ಮಾಣ ಮಾಡುವ ಯೋಜನೆಯನ್ನು ಹೊಂದಿತ್ತು.

ಧಾರವಾಡ ಜಿಲ್ಲೆಯ ಬೇಲೂರು ಬಳಿ ಜಾಗ ಗುರುತು
ಈ ಯೋಜನೆಯಡಿಯಲ್ಲಿ ಅಂದು ರಾಜ್ಯಕ್ಕೆ ಒಂದು ಆಸ್ಪತ್ರೆ ಲಭ್ಯವಾಗಿದ್ದು, ಧಾರವಾಡ ಜಿಲ್ಲೆ ಬೇಲೂರು ಬಳಿ 253 ಎಕರೆ ಕೆಐಎಡಿಬಿ ಜಮೀನು ಜಾಗವನ್ನು ಗುರುತಿಸಲಾಗಿತ್ತು. ಸಾವಿರ ಕೋಟಿ ವೆಚ್ಚದಲ್ಲಿ ಸಾವಿರ ಹಾಸಿಗೆ ಸಾಮರ್ಥ್ಯದ ಬೃಹತ್ ಆಸ್ಪತ್ರೆ, ವೈದ್ಯರು ಹಾಗೂ ನರ್ಸ್, ತರಬೇತಿ ಕೇಂದ್ರ ಹಾಗೂ ಸಂಶೋಧನಾ ಕೇಂದ್ರದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರಗಳನ್ನು ಅಳವಡಿಸಲು ಸೂಕ್ತ ಜಾಗವನ್ನು ನಿರ್ಧಾರ ಮಾಡಲಾಗಿತ್ತು.

ಧಾರವಾಡ ಜಿಲ್ಲೆಯಿಂದ ಕೈ ತಪ್ಪಿದ್ದು ಹೇಗೆ?
ಕೇಂದ್ರ ಆರೋಗ್ಯ ಇಲಾಖೆ ಸಹಕಾರದಲ್ಲಿ ಜಾರಿಯಾಗಲಿರುವ ಈ ಯೋಜನೆ ಸಂಬಂಧಿಸಿದಂತೆ ದೆಹಲಿ ಮಟ್ಟದಲ್ಲಿ ಸಭೆ ಕರೆದಾಗ ಹಿಂದಿನ ಸಮ್ಮಿಶ್ರ ಸರ್ಕಾರ ಹೆಚ್ಚು ಆಸಕ್ತಿ ತೊರದೆ, ಹೆಚ್ಚಿನ ಪ್ರಭಾವ ನಡೆಸಿ ಧಾರವಾಡದ ಆಸ್ಪತ್ರೆ ಪ್ರಸ್ತಾಪವನ್ನು ಬೆಂಗಳೂರು ಸಮೀಪದ ದೇವನಹಳ್ಳಿಯ 536 ಎಕರೆ ಕೆಐಎಡಿಬಿ ಜಾಗಕ್ಕೆ ವರ್ಗಾಯಿಸಲಾಗಿದೆ. ಬೆಂಗಳೂರು ಭಾಗದಲ್ಲಿ ಹೆಚ್ಚಿನ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆಗಳು ಇದ್ದರೂ ಯಾಕೆ ಹಿಂದಿನ ಸರ್ಕಾರ ದೇವನಹಳ್ಳಿ ಭಾಗಕ್ಕೆ ಪ್ರಾಶಸ್ತ್ಯ ನೀಡಿದೆ ಎನ್ನುವುದು ಈ ಭಾಗದ ಜನರ ಪ್ರಶ್ನೆ.

ಜಗದೀಶ್ ಶೆಟ್ಟರ್ ಭರವಸೆ
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ವಿವಿಧ ಉಪಕರಣ ಪಡೆದು ಹೈಟೆಕ್ ಚಿಕಿತ್ಸೆ ನೀಡಬೇಕಾದ ಹಾಗೂ ಸಾವಿರಾರು ಜನರಿಗೆ ಉದ್ಯೋಗ ನೀಡಬೇಕಾದ ಆಸ್ಪತ್ರೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೈ ತಪ್ಪಿದೆ ಎನ್ನುವುದು ಈ ಭಾಗದ ಹೋರಾಟಗಾರರ ಆರೋಪ. ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಹೆಲ್ತ್ ಸಿಟಿ ಯೋಜನೆ ಕೈ ತಪ್ಪಿ ಹೋಗದಂತೆ ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತದೆ ಎನ್ನುವುದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತು.












Click it and Unblock the Notifications