ತವರು ಮನೆಯ ಸನ್ಮಾನ ಶ್ರೇಷ್ಠವಾದದ್ದು : ಚಂದ್ರಶೇಖರ್ ಕಂಬಾರ
ಧಾರವಾಡ, ಜನವರಿ 04 : 'ಹೊರರಾಜ್ಯಗಳ ಸನ್ಮಾನ, ಗೌರವಗಳು ಸಾಕಷ್ಟು ಸಿಕ್ಕರೂ ತವರು ಮನೆಯ ಸನ್ಮಾನ ಶ್ರೇಷ್ಠವಾದ್ದು' ಎಂದು ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಚಂದ್ರಶೇಖರ್ ಕಂಬಾರ ಅಭಿಮಾನದಿಂದ ಹೇಳಿದರು.
ಧಾರವಾಡದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಧಾರವಾಡಕ್ಕೆ ಪತ್ನಿ ಸತ್ಯಭಾಮಾ ಕಂಬಾರ ಅವರ ಜೊತೆ ಆಗಮಿಸಿದ ಚಂದ್ರಶೇಖರ್ ಕಂಬಾರ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಸನ್ಮಾನ ಸ್ವೀಕರಿಸಿ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಮಾತನಾಡಿದ ಅವರು, 'ಕನ್ನಡ ನಾಡಿನ ಈ ಹಬ್ಬ ರಾಜ್ಯ, ಹೊರ ರಾಜ್ಯಗಳಲ್ಲಿ ಹಬ್ಬಿರುವ ಕನ್ನಡಿಗರ ಕಳ್ಳುಬಳ್ಳಿಯನ್ನು ಕೂಡಿಸುತ್ತದೆ' ಎಂದರು.
ಡಾ.ಚಂದ್ರಶೇಖರ್ ಕಂಬಾರ ಹಾಗೂ ಅವರ ಕುಟುಂಬ ಸದಸ್ಯರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ನಿವಾಸಕ್ಕೆ ಭೇಟಿ ನೀಡಿ ಗೌರವ ಸ್ವೀಕರಿಸಿದರು ಮತ್ತು ಈ ಸಂದರ್ಭದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮರನ್ನು ಬಂಧಿಸಿ ಇಟ್ಟಿದ್ದ ಕೋಣೆಗೆ ಭೇಟಿ ನೀಡಿದರು...

ಧಾರವಾಡ ನನ್ನ ಕರ್ಮಭೂಮಿ
'ಧಾರವಾಡ ನನ್ನ ಕರ್ಮಭೂಮಿ. ಶಿಕ್ಷಣ ಸೇರಿದಂತೆ ನನ್ನ ಜೀವನದ ಅನೇಕ ಕನಸುಗಳನ್ನು ಕಟ್ಟಿದ್ದು ಈ ನೆಲದಲ್ಲಿ. ಇದು ಪುಣ್ಯಭೂಮಿ, ತಪೋಭೂಮಿ. ಇಲ್ಲಿ ಕಳೆಯುವ ಮುಂದಿನ ಮೂರು ದಿನಗಳೂ ನನ್ನ ಜೀವನದ ಅಪರೂಪದ, ಅಪ್ರತಿಮ ಕ್ಷಣಗಳಾಗಿವೆ' ಎಂದು ಕಂಬಾರರು ಬಣ್ಣಿಸಿದರು.

ಗೌರವಗಳಿಗೆ ಚಿರಋಣಿ
'ಈ ಪ್ರೀತಿ, ಗೌರವ ಆದರಗಳಿಗೆ ನಾನು ಚಿರಋಣಿಯಾಗಿದ್ದೇನೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡುವ ಭಾಷಾ ನೀತಿಯನ್ನು ವಿಮರ್ಶಿಸಿ ಭಾಷೆಗಳಿಗೆ ಸರಿಯಾದ ಚೌಕಟ್ಟನ್ನು ರೂಪಿಸುವ ಜವಾಬ್ದಾರಿ ಇದೆ. ಈ ಕುರಿತು ಸಮ್ಮೇಳನದಲ್ಲಿ ತಜ್ಞರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ಅವು ನಮ್ಮ ಮುಂದಿನ ದಾರಿಗೆ ಮಾರ್ಗಸೂಚಿಗಳಾಗಲಿವೆ' ಎಂದು ಕಂಬಾರರು ಹೇಳಿದರು.

ಸಂಘಟಕನಾಗಿದ್ದೆ
ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡ ಡಾ. ಚಂದ್ರಶೇಖರ್ ಕಂಬಾರ ಅವರು, 'ರಾಷ್ಟ್ರಕವಿ ಕುವೆಂಪು ಅವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ನಡೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಸಂಘಟಕನಾಗಿ ತೊಡಗಿಸಿಕೊಂಡಿದ್ದೆ. ಇಂದು ಇದೇ ನೆಲದಲ್ಲಿ ನಾನು ಸಮ್ಮೇಳನಾಧ್ಯಕ್ಷನಾಗಿ ಗೌರವ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯ, ನನ್ನ ಪುಣ್ಯ' ಎಂದರು.

ಸನ್ಮಾನ ಸ್ವೀಕಾರ
ಡಾ.ಚಂದ್ರಶೇಖರ್ ಕಂಬಾರ ಹಾಗೂ ಅವರ ಕುಟುಂಬ ಸದಸ್ಯರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮರನ್ನು ಬಂಧಿಸಿ ಇಟ್ಟಿದ್ದ ಕೋಣೆಗೆ ಭೇಟಿ ನೀಡಿದರು.

11 ಗಂಟೆಗೆ ಸಮ್ಮೇಳನ ಉದ್ಘಾಟನೆ
ಮೂರು ದಿನಗಳ ಕಾಲ ನಡೆಯುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬಳಿಕ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ್ ಕಂಬಾರ ಅವರು ಭಾಷಣ ಮಾಡಲಿದ್ದಾರೆ.












Click it and Unblock the Notifications