ಹೃದಯಾಘಾತದಿಂದ ಕಾಳಗ ಕಲಿ ಕಮಲಾಪುರದ ಜಂಗ್ಲಿ ಸಾವು: ಅಭಿಮಾನಿಗಳ ಕಣ್ಣೀರ ಕೋಡಿ

ಧಾರವಾಡ, ಜುಲೈ 03: ಅದು ಕಾಲು ಕೆದರಿ ಕಾಳಗಕ್ಕೆ ನಿಂತರೆ ಎದುರಾಳಿಗಳ ಎದೆಯಲ್ಲಿ ನಡುಕ. ಕಣದಲ್ಲಿ ಕಮಲಾಪುರದ ಜಂಗ್ಲಿ ಕಾಳಗಕ್ಕೆ ಇಳಿಯುತ್ತಾನೆ ಎಂದರೆ ಇಡೀ ಕಣವೇ ಜನರಿಂದ ಕಿಕ್ಕಿರಿದು ತುಂಬಿರುತ್ತಿತ್ತು. ಏಳು ವರ್ಷದ ಹರೆಯದ ಕಮಲಾಪುರದ ಜಂಗ್ಲಿ ಇನ್ನಿಲ್ಲ ಎಂಬುದು ಅದರ ಅಭಿಮಾನಿಗಳಿಗೆ ಬರ ಸಿಡಿಲು ಬಡಿದಂತಾಗಿದೆ.

ಸಾಲು ಸಾಲು ಮೆಡಲ್‌ಗಳು, ಮನೆ ಮುಂದೆ ಜಮಾಯಿಸಿರುವ ಜಂಗ್ಲಿ ಅಭಿಮಾನಿಗಳು, ಮನೆಯ ಮಗನನ್ನೇ ಕಳೆದುಕೊಂಡವರಂತೆ ಕಣ್ಣೀರಿಡುತ್ತಿರುವ ಕುಟುಂಬ ಈ ಎಲ್ಲ ಮನಮಿಡಿಯುವ ದೃಶ್ಯಗಳು ಕಂಡು ಬಂದದ್ದು ಧಾರವಾಡದ ಕಮಲಾಪುರದಲ್ಲಿ.

 Fighter Sheep Kamalapur Junglee Is No More

ಕಳೆದ ಏಳು ವರ್ಷಗಳ ಹಿಂದೆ ಕಮಲಾಪುರದ ಮಂಜುನಾಥ ಅಮ್ಮಿನಭಾವಿ ಕುಟುಂಬದವರು ಟಗರಿನ ಮರಿ ತಂದು ಜೋಪಾನ ಮಾಡಿದ್ದರು. ಮನೆಯವರ ಪ್ರೀತಿ ಹಾಗೂ ಸಾತ್ವಿಕ ಆಹಾರ ತಿಂದು ಕಟ್ಟುಮಸ್ತಾಗಿ ಬೆಳೆದ ಟಗರಿಗೆ ಪ್ರೀತಿಯಿಂದ ಕಮಲಾಪುರದ ಜಂಗ್ಲಿ ಎಂದು ಹೆಸರಿಟ್ಟಿದ್ದರು.

ಕಳೆದ ಏಳು ವರ್ಷಗಳ ಅವಧಿಯಲ್ಲಿ ನಾನಾ ಊರುಗಳಲ್ಲಿ ಏರ್ಪಡಿಸಿದ್ದ ಟಗರಿನ ಕಾಳಗದಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದಿತ್ತು. ಸ್ಪರ್ಧೆಗೆ ಜಂಗ್ಲಿ ಬರುತ್ತದೆ ಎಂದರೆ ಎಲ್ಲರೂ ಅದರ ಕಾಳಗ ನೋಡಲು ತುದಿಗಾಲ ಮೇಲೆ ಬಂದು ನಿಲ್ಲುತ್ತಿದ್ದರು. ಸ್ವಂತ ತಮ್ಮ ಮನೆಯ ಮಗನಂತೆಯೇ ಈ ಟಗರು ಮರಿಯನ್ನು ಇವರು ಜೋಪಾನ ಮಾಡಿದ್ದರು. ಏಳು ವರ್ಷಗಳಲ್ಲಿ ಸಾಕಷ್ಟು ಹವಾ ಸೃಷ್ಟಿ ಮಾಡಿದ್ದ ಜಂಗ್ಲಿ ಇದೀಗ ಹೃದಯಾಘಾತಕ್ಕೊಳಗಾಗಿ ಅಕಾಲಿಕ ಮರಣ ಹೊಂದಿದೆ.

 Fighter Sheep Kamalapur Junglee Is No More

ತಮ್ಮ ಕೈತುತ್ತು ತಿನ್ನಿಸಿ ಬೆಳೆಸಿದ್ದ ಟಗರಿನ ಮರಿ ಇದೀಗ ಕಣ್ಮರೆಯಾಗಿದ್ದಕ್ಕೆ ಮನೆಯ ಸದಸ್ಯರು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಅಲ್ಲಿ ಸೇರಿದ್ದವರ ಕಣ್ಣುಗಳನ್ನೂ ಒದ್ದೆ ಮಾಡಿದ್ದವು. ನಿನ್ನೆ ರಾತ್ರಿ ಹೃದಾಯಾಘಾತಕ್ಕೊಳಗಾದ ಜಂಗ್ಲಿಯನ್ನು ಇಂದು ಸಂಪ್ರದಾಯ ಬದ್ಧವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ. ಮನೆಯ ಮಗನನ್ನೇ ಕಳೆದುಕೊಂಡವರಂತೆ ಶೋಕಸಾಗರದಲ್ಲಿ ಮುಳುಗಿದ್ದ ಆ ಕುಟುಂಬ ಮನೆಯಲ್ಲಿ ಟಗರಿನ ಅಂತಿಮ ದರ್ಶನಕ್ಕಿಟ್ಟಿದ್ದರು. ಆನಂತರ ಪೂಜೆ ಪುನಸ್ಕಾರದ ನಂತರ ಅವರದ್ದೇ ಆದ ಭೈರಿದೇವರಕೊಪ್ಪದ ಹೊಲದಲ್ಲಿ ಅದರ ಅಂತ್ಯಸಂಸ್ಕಾರ ಮಾಡಿದ್ದಾರೆ.

ಒಟ್ಟಾರೆ ಕಮಲಾಪುರದ ಜಂಗ್ಲಿಗೆ ಇಂದು ಭಾವಪೂರ್ಣ ವಿದಾಯ ಹೇಳಲಾಗಿದೆ. ಕಮಲಾಪುರದ ಜನ ಜಂಗ್ಲಿ ಇಲ್ಲದ ಟಗರಿನ ಕಾಳಗವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾದಂತಾಗಿದೆ. ಮನೆಯ ಮಗನಂತೆ ಕಂಡಿದ್ದ ಕರಿಚೆಂಡು ಹಾಗೂ ಜಂಗ್ಲಿ ಎಂಬ ಹೆಸರಿನಿಂದ ಕರೆಯಿಸಿಕೊಳ್ಳುತ್ತಿದ್ದ ಟಗರಿನ ಮರಿ ಅಕಾಲಿಕವಾಗಿ ಮರಣ ಹೊಂದಿದ್ದರಿಂದ ಇಡೀ ಕಮಲಾಪುರದ ಜನ ಶೋಕ ಸಾಗರದಲ್ಲಿ ಮುಳುಗಿದ್ದಂತೂ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+