Rabi Season: ಶೇ.98 ರಷ್ಟು ಬಿತ್ತನೆ ಪೂರ್ಣ: ಹಿಂಗಾರು ಬೆಳೆಯ ಮೇಲೆ ರೈತರ ಅಪಾರ ನಿರೀಕ್ಷೆ
ಹುಬ್ಬಳ್ಳಿ, ನವೆಂಬರ್ 25: ಕರ್ನಾಟಕದಲ್ಲಿ ಈ ಬಾರಿಯ ಮುಂಗಾರಿನಲ್ಲಿ ಬಿದ್ದ ವ್ಯಾಪಕ ಮಳೆಗೆ ಬೆಳೆ ಕಳೆದುಕೊಂಡಿದ್ದ ರೈತರು ಹಿಂಗಾರು ಮಳೆ, ಬೆಳೆ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ರೈತರಿಗೆ ಮುಂಗಾರು ಬೆಳೆ ಕೈಗೆ ಸಿಗದೇ ನಷ್ಟ ಎದುರಿಸುವಂತಾಗಿದೆ. ಪ್ರಸಕ್ತ ವರ್ಷ ಉತ್ತರ ಕರ್ನಾಟಕದಲ್ಲಿ ಹಿಂಗಾರು ಮಳೆ ನೆಚ್ಚಿ ಕಾರ್ಯ ಪೂರ್ಣಗೊಳಿಸಿದ್ದಾರೆ.
ಅತಿಯಾಗಿ ಮಳೆ ಸುರಿಸುವ ಮುಂಗಾರು ಬೆಲೆ ಮೇಲೆ ರೈತರಿಗೆ ಆಶಾವಾದವೇ ಇಲ್ಲದಂತಾಗಿದೆ. ಸದ್ಯ ಹಿಂಗಾರು ಬಿತ್ತನೆಗೆ ಹದ ಇದ್ದದ್ದು ಕಂಡು ಧಾರವಾಡ ಜಿಲ್ಲೆಯ ಕುಂದಗೋಳ, ಕಲಘಟಗಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಬಿತ್ತನೆ ಪೂರ್ಣವಾಗಿದೆ. ಉತ್ತರ ಕರ್ನಾಟಕದ ಬಹುತೇಕ ಕುಟುಂಬಗಳ ಕೃಷಿಯನ್ನೇ ನೆಚ್ಚಿಕೊಂಡು ಬದುಕು ನಡೆಸಿಕೊಂಡು ಬರುತ್ತಿದ್ದಾರೆ.

ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗಿದ್ದು, ಎಲ್ಲ ತಾಲೂಕುಗಳಲ್ಲಿ ಬಿತ್ತನೆಗೆ ಚುರುಕು ನೀಡಿತು. ಶೇಕಡಾ 99 ರಷ್ಟು ಹಿಂಗಾರು ಬಿತ್ತನೆ ಆಗಿದೆ. ಧಾರವಾಡ ಜಿಲ್ಲೆಯಲ್ಲಿ 12,3003 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಗುರಿ ಹೊಂದಲಾಗಿತ್ತು. ಅದರಲ್ಲಿ ಶೇ. 98 ರಷ್ಟು ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಕೆ ಮೂಲಗಳು ಮಾಹಿತಿ ನೀಡಿವೆ.
ಬಿತ್ತನೆಯಲ್ಲಿ ಈ ಬಾರಿ ಕಡಲೆಗೆ ಅಗ್ರಸ್ಥಾನ
ಕೃಷಿ ಇಲಾಖೆ ಅಂಕಿಅಂಶಗಳ ಪ್ರಕಾರ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ 18,800 ಹೆಕ್ಟೇರ್ ಕಡಲೆ, 1,800 ಹೆಕ್ಟೇರ್ ಗೋಧಿ, 4,520 ಹೆಕ್ಟೇರ್ ಜೋಳ, 800 ಹೆಕ್ಟೇರ್ ಕುಸುಬೆ ಬಿತ್ತನೆ ಆಗಿದೆ. ಈ ವರ್ಷ ಕಡಲೆ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ.
ನವಲಗುಂದ ತಾಲೂಕಿನಲ್ಲಿ 40,500 ಹೆಕ್ಟೇರ್ ಕಡಲೆ, 3,800 ಹೆಕ್ಟೇರ್ ಗೋಧಿ, 3,520 ಹೆಕ್ಟೇರ್ ಜೋಳ, 1000 ಹೆಕ್ಟೇರ್ ಕುಸುಬೆ ಬಿತ್ತನೆಯಾಗಿದೆ.
ಹುಬ್ಬಳ್ಳಿತಾಲೂಕಿನಲ್ಲಿ 15,800 ಹೆಕ್ಟೇರ್ ಕಡಲೆ, 1,800 ಹೆಕ್ಟೇರ್ ಗೋಧಿ, 1520 ಹೆಕ್ಟೇರ್ ಜೋಳ, 300 ಹೆಕ್ಟೇರ್ ಕುಸುಬೆ ಬೀಜವನ್ನು ರೈತರು ಬಿತ್ತಿದ್ದಾರೆ. ಚಳಿಗಾಲ ವಾದ್ದರಿಂದ ಇವೆಲ್ಲ ಬೆಳೆಗಳು ಬೆಳಗಿನ ಜಾವ ಬೀಳುವ ಚಳಿ, ಮಂಜಿನ ತಂಪಿಗೆ ಬೆಳೆಯುತ್ತವೆ.
ನಷ್ಟ ಅನುಭವಿಸಿದ ರೈತರಿಗೆ ಹಿಂಗಾರು ಬೆಳೆಯೇ ಆಧಾರ
ದೀಪಾವಳಿ ಹಬ್ಬದವರೆಗೂ ಸುರಿದ ಮಳೆಗೆ ಬಿತ್ತಿದ ಕಡಲೆ ಹಾಳಾಗಿ, ಬಹುತೇಕ ರೈತರು ಮತ್ತೆ ಖರ್ಚು ಮಾಡಿ ಕಡಲೆ ಮರು ಬಿತ್ತನೆ ಮಾಡಿದ್ದಾರೆ. ಹಿಂಗಾರು ಬೆಳೆ ಬಿತ್ತನೆ ತಡವಾಗಿದ್ದು ಫಸಲು ಬರುವ ಹೊತ್ತಿಗೆ ಮಳೆಗೆ ಬೆಳೆ ಸಿಗದಿರಲಿ ಎಂದು ರೈತರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
'ಮುಂಗಾರು ಮಳೆ ಅತೀಯಾಗಿ ದಾಖಲಾಯಿತು. ಬೆಳೆ ಕೈ ಕೊಟ್ಟು, ನಷ್ಟವಾಯಿತು. ಸದ್ಯ ಹಿಂಗಾರು ನಂಬಿ ಬಿತ್ತಿದ್ದೇವೆ. ಉತ್ತಮ ಬೆಳೆ ಬಂದರೆ ದನಕರುಗಳಿಗೆ ಮೇವು ಆಗುತ್ತದೆ. ಕಷ್ಟದಲ್ಲಿರುವ ರೈತನಿಗೆ ಆಸರೆಯಾಗುತ್ತದೆ. ಜೋಳ, ಗೋಧಿ ಬಿತ್ತಿದ್ದು, ಬೆಳೆ ಪರಿಹಾರ ನೀಡಲು ಸರ್ಕಾರ ಮನಸ್ಸು ಮಾಡಬೇಕಿದೆ ಎಂದು ಹುಬ್ಬಳ್ಳಿ ತಾಲೂಕಿನ ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications