ಯಡಿಯೂರಪ್ಪಗೆ ಹುಬ್ಬಳ್ಳಿಯಲ್ಲಿ ಧೈರ್ಯ ತುಂಬಿದ ಎಚ್ಡಿಕೆ
ಹುಬ್ಬಳ್ಳಿ, ಜೂ.23 : 'ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರಿಗೆ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ' ಎಂದು ಸೋಮವಾರ ಕುಮಾರಸ್ವಾಮಿ ಅವರು ಬಿಎಸ್‌ವೈ ಪರವಾಗಿ ಮಾತನಾಡಿದ್ದರು. ಇಂದು ಉಭಯ ನಾಯಕರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಇಬ್ಬರು ನಾಯಕರ ನಡುವೆ ಮಹತ್ವದ ಮಾತುಕತೆ ನಡೆಯುತ್ತಿದೆ ಎಂಬ ಗುಸುಗುಸು ಆರಂಭವಾಗಿದೆ.
ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಒಂದು ಕಾಲದ ರಾಜಕೀಯ ಮಿತ್ರರಾದ ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿದ್ದರು. ಸುಮಾರು 20 ನಿಮಿಷಗಳ ಕಾಲ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. [ಯಡಿಯೂರಪ್ಪಗೆ ಸಿದ್ದರಾಮಯ್ಯ ತೊಂದರೆ ಕೊಡುತ್ತಿದ್ದಾರೆ]

ಸೋಮವಾರ ಹುಬ್ಬಳ್ಳಿ ಪ್ರವಾಸಿಮಂದಿರದಲ್ಲಿ ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ಜೆಡಿಎಸ್ ನಾಯಕರಾದ ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶೆಂಪುರ ಅವರ ಸಮ್ಮುಖದಲ್ಲಿ ಬಿಎಸ್‌ವೈ, ಎಚ್ಡಿಕೆ ಒಂದೇ ಸೋಫಾ ಮೇಲೆ ಕುಳಿತು ಮಾತುಕತೆ ನಡೆಸಿದ್ದಾರೆ. [ಬೆಳಗಾವಿ ಅಧಿವೇಶನಕ್ಕೂ ಮುನ್ನ ಜೆಡಿಎಸ್ ಪಾದಯಾತ್ರೆ]
ಇದು ಸೌಹಾರ್ದಯುತ ಭೇಟಿ : ಯಡಿಯೂರಪ್ಪ ಭೇಟಿ ಮಾಡಿದ ಬಳಿಕ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು 'ಇದೊಂದು ಸೌಹಾರ್ದಯುತ ಭೇಟಿ. ಯಡಿಯೂರಪ್ಪ ಅವರ ಆರೋಗ್ಯ ವಿಚಾರಿಸಿದ್ದೇನೆ. ಲೋಕಾಯುಕ್ತದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದೆ, ಅವರಿಗೆ ಧೈರ್ಯತುಂಬಿದ್ದೇನೆ' ಎಂದು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಜಂಟಿ ಹೋರಾಟ : ಜೂನ್ 29ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಕಬ್ಬು ಬೆಳೆಗಾರರ ಸಮಸ್ಯೆ ಬಗಹರಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಧಾರವಾಡದಿಂದ ಬೆಳಗಾವಿ ತನಕ ಪಾದಯಾತ್ರೆ ಹಮ್ಮಿಕೊಂಡಿದೆ. ಜೂನ್ 25ರಿಂದ 28ರ ತನಕ ಪಾದಯಾತ್ರೆ ನಡೆಯಲಿದೆ.

ಬಿಜೆಪಿ ಕೆಲವು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾದ ರೈತ ಗುರುನಾಥ ಮಲ್ಲಪ್ಪ ಚಾಪಗಾವಿ ಅವರ ಗ್ರಾಮವಾದ ಬೆಳಗಾವಿ ಜಿಲ್ಲೆಯ ಬಡಾಲ ಅಂಕಲಗಿಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿದೆ. ಬೆಳಗಾವಿಯ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ಮಾಡುವ ಕುರಿತು ಉಭಯ ನಾಯಕರು ಚರ್ಚೆ ನಡೆಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications