ಧಾರವಾಡ-ಹಳಿಯಾಳ ಹೆದ್ದಾರಿ; ಸ್ಥಳೀಯರ ಬೇಡಿಕೆಗೆ ಒಪ್ಪಿದ ಸಚಿವರು
ಧಾರವಾಡ, ಅಕ್ಟೋಬರ್ 18: ಸ್ಥಳೀಯರ ಅಹವಾಲಿನಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಧಾರವಾಡ-ಹಳಿಯಾಳ ರಾಜ್ಯ ಹೆದ್ದಾರಿಯ ಪರಿಶೀಲನೆ ನಡೆಸಿದರು. ರಸ್ತೆ ತಿರುವು ದುರಸ್ತಿ ಮತ್ತು ಸೇತುವೆಯ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಚಿವ ಸಂತೋಷ್ ಲಾಡ್, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಅವರೊಂದಿಗೆ ಧಾರವಾಡ-ಹಳಿಯಾಳ ರಾಜ್ಯ ಹೆದ್ದಾರಿಯನ್ನು ಉನ್ನತ ಶಿಕ್ಷಣ ಅಕಾಡೆಮಿ ಹತ್ತಿರ ಪರಿಶೀಲನೆ ನಡೆಸಿದರು.

ಸ್ಥಳೀಯರು ಹೆದ್ದಾರಿ ಸೇತುವೆ ಕೆಳಗಿನ ರಸ್ತೆ ತಿರುವಿನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿರುವ ಕುರಿತು ದೂರು ನೀಡಿದ್ದರು. ಆದ್ದರಿಂದ ಸಚಿವರು ಸ್ಥಳ ಪರಿಶೀಲನೆ ನಡೆಸಿ ರಸ್ತೆ ತಿರುವನ್ನು ನೇರವಾಗಿಸಲು, ಸೇತುವೆಯ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
6 ಪಥದ ರಸ್ತೆ ಕಾಮಗಾರಿ; ಗಬ್ಬೂರು-ನರೇಂದ್ರ ರಾಷ್ಟ್ರೀಯ ಹೆದ್ದಾರಿಯು ಸದ್ಯ ದ್ವಿಪಥ ಇದ್ದು, ಷಟ್ಪಥ (6 ಲೇನ್) ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಕೆಳಗಿನ ರಸ್ತೆ ತಿರುವು ದುರಸ್ತಿ ಮಾಡಿ ಸೇತುವೆಯ ಕಾಮಗಾರಿಯನ್ನು ಸಹ ಕೈಗೊಳ್ಳುವಂತೆ ಸಂತೋಷ್ ಲಾಡ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಭುವನೇಶ್‌ಗೆ ಸೂಚಿಸಿದರು.
6 ಲೇನ್ ಕಾಮಗಾರಿ ಯೋಜನೆಯಲ್ಲಿಯೇ ಧಾರವಾಡ-ಹಳಿಯಾಳ ರಸ್ತೆ ತಿರುವು ನೇರವಾಗಿಸಿ, ಸೇತುವೆ ದುರಸ್ತಿ ಸಹ ಕೈಗೊಂಡಲ್ಲಿ ಅಪಘಾತಗಳನ್ನು ತಡೆಯಬಹುದಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಯೋಜನೆ ಅನುಷ್ಠಾನದಲ್ಲಿ ಸದರಿ ರಸ್ತೆ ತಿರುವನ್ನು ಪರಿಗಣಿಸಲು ಜಿಲ್ಲಾಡಳಿತದಿಂದ ಎಲ್ಲ ಒಪ್ಪಿಗೆ ನೀಡುವುದಾಗಿ ತಿಳಿಸಿದರು.
ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್ ತನಕ ಇರುವ ಬೈಪಾಸ್ 29.04 ಕಿ. ಮೀ. ಉದ್ದವಿದೆ. ಇದು ಸಾವಿನ ಹೆದ್ದಾರಿ ಎಂದೇ ಖ್ಯಾತಿ ಪಡೆದಿದೆ. ಅಷ್ಟು ಅಪಘಾತಗಳು ಈ ಹೆದ್ದಾರಿಯಲ್ಲಿ ನಡೆದಿವೆ. ಈಗ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥದಿಂದ 6 ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ.
ಸುಮಾರು 1200 ಕೋಟಿ ರೂ.ಗಳ ವೆಚ್ಚದಲ್ಲಿ 6 ಪಥದ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಗೆ 2022ರಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಚಾಲನೆ ಕೊಟ್ಟಿದ್ದರು. ಈ ಬೈಪಾಸ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ ಘಟನೆ ದೇಶದ ಗಮನ ಸೆಳೆದಿತ್ತು.
ಈಗ 6 ಪಥದ ರಸ್ತೆ ಕಾಮಗಾರಿ ನಡೆಯುತ್ತಿದೆ. ಹುಬ್ಬಳ್ಳಿಯ ಗಬ್ಬೂರು ಎನ್. ಎಚ್. 4 ರಸ್ತೆಯ 402.6 ಕಿ. ಮೀ. ಇಂದ ಧಾರವಾಡದ ನರೇಂದ್ರ ಕ್ರಾಸ್‌ನ 433.2 ಕಿ. ಮೀ. ವರೆಗೆ 6 ಪಥದ ರಸ್ತೆ ನಿರ್ಮಾಣವಾಗಲಿದೆ. ರಸ್ತೆ ನಿರ್ಮಾಣಕ್ಕೆ 800 ಕೋಟಿ ಮತ್ತು ಭೂ ಸ್ವಾಧೀನ, ಡಿಪಿಆರ್ ತಯಾರಿಕೆ ಸೇರಿದಂತೆ ಇತರ ಕಾರ್ಯಗಳಿಗೆ 400 ಕೋಟಿಯನ್ನು ಕೇಂದ್ರ ಸರ್ಕಾರ ನೀಡಿದೆ.
ಈ ರಸ್ತೆ ನಿರ್ಮಾಣಕ್ಕೆ ಇಪಿಸಿ ಮಾದರಿಯಲ್ಲಿ ಟೆಂಡರ್ ನೀಡಲಾಗಿದೆ. ರಸ್ತೆ ನಿರ್ಮಾಣವಾದ ಬಳಿಕ ನಂತರದ 5 ವರ್ಷದ ನಿರ್ವಹಣೆಯನ್ನೂ ಗುತ್ತಿಗೆದಾರರೇ ಮಾಡುತ್ತಾರೆ. ಕಾಮಗಾರಿ ಪೂರ್ಣಗೊಂಡ ಬಳಿಕ ಬೈಪಾಸ್‍ನಲ್ಲಿ ಸದ್ಯ ಇರುವ ಎಲ್ಲಾ ಟೋಲ್ ತೆಗೆದು ಕೇವಲ ಒಂದು ಟೋಲ್ ಪ್ಲಾಜಾ ಮಾತ್ರ ಇಡಲಾಗುತ್ತದೆ.












Click it and Unblock the Notifications