ಅಭಿವೃದ್ಧಿ ಹೆಸರಲ್ಲಿ ಮೂಲಸೌಕರ್ಯ ಕಸಿದ ಅಧಿಕಾರಿಗಳು: ಸಂಕಷ್ಟದಲ್ಲಿ ಹಾಳಕುಸುಗಲ್ ಗ್ರಾಮ
ಹುಬ್ಬಳ್ಳಿ, ಆಗಸ್ಟ್ 11: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಳಕುಸುಗಲ್ ಗ್ರಾಮದಲ್ಲಿ ಮಳೆಗೆ ಸಂಪೂರ್ಣ ರಸ್ತೆ ಹಾಳಾಗಿದ್ದು ಇಡೀ ಗ್ರಾಮದಲ್ಲಿ ರಸ್ತೆ ಗುಂಡಿಗಳು ಬಿದ್ದು ಶಾಲೆಗೆ ಹೋಗಲು ಆಗುತ್ತಿಲ್ಲ ಎಂದು ಶಾಲಾ ಮಕ್ಕಳು ಗ್ರಾಮದ ರಸ್ತೆ ನಡುವೆ ಮುಳ್ಳುಗಳಿಗೆ ಬೆಂಕಿ ಹಚ್ಚಿ ಇಡೀ ದಿನ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ಗುಂಡಿಗಳು ಇವೆಯೇ ಅಥವಾ ಗುಂಡಿಗಳಲ್ಲಿ ರಸ್ತೆಗಳು ಇವೆಯಾ ಎನ್ನುವ ಭಾವನೆ ರಸ್ತೆಗಳನ್ನು ನೋಡಿದರೆ ಆಗುತ್ತದೆ.

ಐತಿಹಾಸಿಕ ಹಿನ್ನೆಲೆಯ ಈ ಊರಿನಲ್ಲಿ ನೀವು ಒಂದು ಸಲ ಹೋಗಿ ಬರಬೇಕಾದರೆ ಖಂಡಿತವಾಗಿಯೂ ಸಾವಿರ ಸಲ ವಿಚಾರ ಮಾಡಬೇಕು. ಅಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟಿದ್ದು, ಮಹಿಳೆಯರು, ಮಕ್ಕಳು ವಯೋವೃದ್ಧರು ಪ್ರತಿನಿತ್ಯ ಪರದಾಡುತ್ತಿದ್ದಾರೆ.
ಹುಬ್ಬಳ್ಳಿಯ ಗ್ರಾಮೀಣ ಪ್ರದೇಶಕ್ಕೆ ಸಾವಿರಾರು ಕೋಟಿ ಅನುದಾನದಿಂದ ಅಭಿವೃದ್ಧಿಯಾಗಿದೆ. ಯಾವುದೇ ಗ್ರಾಮೀಣ ರೈತರ ಸಾರ್ವಜನಿಕರಿಗೆ ಮೂಲ ಸೌಕರ್ಯಗಳಿಗೆ ಹಾಗೂ ಕಚ್ಚಾ ರಸ್ತೆಗಳಿಗೆ ರಾಜ್ಯದಲ್ಲಿ ಹೆಚ್ಚಿನ ಅನುದಾನ ಬಂದಿರುವ ಕ್ಷೇತ್ರವಾಗಿದೆ ಎಂದು ಜನಪ್ರತಿನಿಧಿಗಳು ಹೇಳಿದರೆ ತಾಲೂಕಿನ ಹಾಳಕುಸುಗಲ್ಲ ಗ್ರಾಮ ಮಾತ್ರ ಮೂಲ ಸೌಕರ್ಯಗಳಿಂದ ನಲುಕುತ್ತಿದೆ. ಈ ಭಾಗದ ಜನರು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಮಕ್ಕಳು ಹಾಕುತ್ತಿರುವುದು ಸಹಜವಾಗಿದೆ.
ಇಂತಹ ಸಾಕಷ್ಟು ಸಮಸ್ಯೆಗಳ ಸುರಿಮಾಲೆಯನ್ನು ಹೊತ್ತಿರುವ ಈ ಗ್ರಾಮದಲ್ಲಿ ಈ ಹಿಂದೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಮಾಡಿದರು ಏನು ಪ್ರಯೋಜನ ಆಗಿಲ್ಲ. ಈ ಗ್ರಾಮದಲ್ಲಿ ಒಂದಲ್ಲಾ ಎರಡಲ್ಲ ಎಲ್ಲಿ ನೋಡಿದರಲ್ಲಿ ರಸ್ತೆಗಳ ಸ್ಥಿತಿ ಚಿಂತಾಚಿನಕವಾಗಿವೆ. ಪಟ್ಟಣದಿಂದ ಹಾಳಕುಸುಗಲ್ಲ ಗ್ರಾಮಕ್ಕೆ ಬರುವಂತಹ ಮುಖ್ಯರಸ್ತೆ ಕಾಂಕ್ರಿಟ್ ಕಾಮಗಾರಿಗೆ ಚರಂಡಿ ಕೆಲಸಕ್ಕೆಂದು ತೆಗೆದಿರುವಂತಹ ತಗ್ಗಿನಿಂದ ಗ್ರಾಮಕ್ಕೆ ಹೋಗಲು ಸಹ ರಸ್ತೆ ಇಲ್ಲದಂತಾಗಿದೆ. ಇನ್ನೇನು ಮುಖ್ಯರಸ್ತೆಯ ಸಮಸ್ಯೆ ಬಿಟ್ಟು ಗ್ರಾಮದ ಒಳರಸ್ತೆಗಳ ಸ್ಥಿತಿಯಂತೂ ನಡೆದುಕೊಂಡು ಹೋಗಲು ಸಾಧ್ಯವೇ ಇಲ್ಲದಂತಾಗಿದೆ.

ರೈತರ ಚಕ್ಕಡಿ, ಟ್ರ್ಯಾಕ್ಟರ್‍ಗಳು ಮಣ್ಣಿನ ರಾಡಿಯಲ್ಲಿ ಸಿಲುಕಿಕೊಳ್ಳುತ್ತವೆ. ಇನ್ನು ರೈತರು ತಮ್ಮ ಮನೆಗಳಿಗೆ ಹೋಗಬೇಕೆಂದರೆ ಹರಸಾಹಸವೇ ಪಡಬೇಕು. ಸತತ ಮಳೆಯಿಂದ ರಸ್ತೆಗಳು ಹಾಳಾಗಿಲ್ಲ. ಆದರೆ ಗ್ರಾಮ ಅಭಿವೃದ್ದಿ ಹೆಸರಿನಲ್ಲಿ ಹಾಳಾಗಿರುವುದು ಸತ್ಯ. ರಸ್ತೆ, ನೀರು ಇತರೆ ಸರ್ಕಾರದ ಯೋಜನೆಗಳು ಸರಿಯಾಗಿ ಗ್ರಾಮಕ್ಕೆ ತಲುಪಬೇಕಾಗಿದೆ. ಹೆಸರಿಗೆ ಮಾತ್ರ ಅಭಿವೃದ್ದಿ ಜಪವಾಗಿದೆ ಎಂದು ಸ್ಥಳೀಯರಾದ ಪ್ರಕಾಶ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಗಳ ಸ್ಥಿತಿ ಒಂದು ಕಡೆಯಾದರೆ ಗ್ರಾಮದ ಅಂಗನವಾಡಿ ಕೇಂದ್ರ ಬೀಳುವ ಸ್ಥಿತಿಯಲ್ಲಿದೆ. ಇದರಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಪಾಠವನ್ನು ಮಾಡುತ್ತಿದ್ದಾರೆ. ಆದರೆ ಅದೇ ಆವರಣದಲ್ಲಿರುವ ಶಾಲಾ ಕೊಠಡಿಯಲ್ಲಿ ರಸ್ತೆ ಕಾಮಗಾರಿಗೆ ಬಂದಂತಹ ಗುತ್ತಿಗೆದಾರರಿಗೆ ಉತ್ತಮ ಕೊಠಡಿ ನೀಡಿ, ಅಂಗನವಾಡಿಯಲ್ಲಿ ಕಲಿಯುತ್ತಿರುವ ಮಕ್ಕಳ ಹಿತ ಕಾಪಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮೂಲ ಸೌಕರ್ಯಗಳಿಂದ ವಂಚಿತವಾದ ಹಾಳಕುಸುಗಲ್ಲ ಗ್ರಾಮಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಬರಬೇಕಾಗಿದೆ. ಇದರ ವಾಸ್ತವಿಕ ಪರಿಸ್ಥಿತಿ ನೋಡಬೇಕಾಗಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications