Rain Alert: ಜಿಲ್ಲೆಯಲ್ಲಿ ನಿರಂತರ ಮಳೆ: ಶಾಲಾ ಕಾಲೇಜುಗಳಿಗೆ ನಾಳೆ ಜು.26ರಂದು ರಜೆ ಘೋಷಣೆ
ಧಾರವಾಡ, ಜುಲೈ 25: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳೆದ ಎರಡು ವಾರಗಳಿಂದ ನಿರಂತರ ಮಳೆಯಾಗುತ್ತಿದೆ. ವಾತಾವರಣ ಶೀತಮಯವಾಗಿದ್ದು, ಎಲ್ಲೆಡೆ ಅನಾರೋಗ್ಯದ ಆತಂಕ ಎದುರಾಗಿದೆ. ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ.
ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ತಂಪು (ಶೀತ) ಗಾಳಿ ಬೀಸುತ್ತಿರುವದರಿಂದ ಇಂದಿನಿಂದ (ಜುಲೈ 25 ಮತ್ತು 26 ರಂದು) ಎರಡು ದಿನ ರಜೆ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲ ಅಂಗನವಾಡಿ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಬಹುತೇಕ ಕಡೆಗೆ ನಿರಂತರವಾಗಿ ಮಳೆ ಆಗುತ್ತಿದೆ. ಮತ್ತು ತಂಪುಗಾಳಿ ಬಿಸುತ್ತಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪೂರ್ವ ಪ್ರಾಥಮಿಕ ಶಾಲೆ, ಖಾಸಗಿ, ಅನುದಾನಿತ, ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.
ಈ ರಜಾ ದಿನಗಳನ್ನು ಮುಂದಿನ ಸಾರ್ವಜನಿಕ ರಜಾ ದಿನಗಳಂದು ಹೆಚ್ಚುವರಿ ವರ್ಗಗಳನ್ನು ನಡೆಸುವ ಮೂಲಕ ಹೊಂದಾಣೆಕೆ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಸೇರಿದಂತೆ ಸತತವಾಗಿ ಸುರಿಯುತ್ತಿರುವ ಪುಷ್ಯ ಮಳೆಯಿಂದ ಕೃಷ್ಣಾ, ದೂಧಗಂಗಾ, ವೇದಗಂಗಾ, ತುಂಗಭದ್ರಾ, ವರದಾ ನದಿಗಳು ಅಪಾಯದ ಮಟ್ಟ ಮೀರಿ ಆರ್ಭಟಿಸುತ್ತಿವೆ. ಮುಂಜಾಗ್ರತೆ ಕ್ರಮವಾಗಿ ನದಿ ತೀರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ.
ಜಿಲ್ಲೆ ವ್ಯಾಪ್ತಿಯಲ್ಲಿ ಮಳೆ ಅವಾಂತರ: ಸಾವು ನೋವು
ಈಗಾಗಲೇ ಈ ಭಾಗದಲ್ಲಿ ಮಳೆ ಅನಾಹುತಕ್ಕೆ ಮೂವರು ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಯಲ್ಲಾಪುರ ತಾಲೂಕಿನ ಕಬ್ಬಿನಗದ್ದೆಯ ವಿನಯ ಮಂಜುನಾಥ ಗಾಡಿಗ (25) ಮರ ಬಿದ್ದು ಮೃತಪಟ್ಟಿದ್ದಾರೆ. ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಡ್ಯಾಂನಲ್ಲಿ ಈಜಲು ಹೋಗಿದ್ದ ಮುಡಸಾಲಿ ಗ್ರಾಮದ ಶ್ರೀಕಾಂತ ಹರಿಜನ (20) ನೀರು ಪಾಲಾಗಿದ್ದರೆ ಮುದ್ದೇಬಿಹಾಳ ತಾಲೂಕಿನ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಕಾಲು ಜಾರಿ ಬಿದ್ದಿದ್ದ ಕುರಿಗಾಹಿ ಮಂಜುನಾಥ ಮಾದರ (28) ಮೃತದೇಹ ಯಾದಗಿರಿ ಜಿಲ್ಲೆ ಹೊರಟ್ಟಿ ಗ್ರಾಮದ ಕಾಲುವೆಯಲ್ಲಿ ಬುಧವಾರ ದೊರಕಿದೆ. ಹೀಗೆ ಜಿಲ್ಲೆ ವ್ಯಾಪ್ತಿಯಲ್ಲಿ ನಾನಾ ಅವಾಂತರಗಳು ಕಳೆದ ಕೆಲವೇ ವಾರಗಳಲ್ಲಿ ಸಂಭವಿಸಿವೆ.












Click it and Unblock the Notifications