ಕಾಂಗ್ರೆಸ್‌ನವರು ದೇಶ ಮಾರಲು ಹಿಂದೆ ಮುಂದೆ ನೋಡಲ್ಲ: ಬಿಜೆಪಿ ನಾಯಕ ಆರೋಪ
ಧಾರವಾಡ, ಫೆಬ್ರವರಿ 02: ಅಖಂಡ ಭಾರತದ ವಿಭಜನೆಯ ಕುರಿತು ಕಾಂಗ್ರೆಸ್ ಸಂಸದರು ಮಾತನಾಡಿದ್ದಾರೆ. ತಮ್ಮ ಮತಕ್ಕಾಗಿ ಯಾವುದೇ ಹಂತಕ್ಕೂ ಇಳಿಯಲು ತಯಾರಿದ್ದವರು. ಕಾಂಗ್ರೆಸ್‌ನವರು ಮತದ ಆಸೆಗೆ ದೇಶ ಬೇರ್ಪಡಿಸುವ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಕುಟುಕಿದರು.
ಧಾರವಾಡದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅರವಿಂದ್ ಬೆಲ್ಲದ್ ಅವರು, ಮತಕ್ಕಾಗಿ ದೇಶವನ್ನೂ ಮಾರಲು ಹಿಂದೆ ಮುಂದೆ ನೋಡದವರು ಕಾಂಗ್ರೆಸ್ ನವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶ ವಿಭಜನೆಯ ಬಗ್ಗೆ ಲೋಕಸಭಾ ಸದಸ್ಯ ಡಿಕೆ ಸುರೇಶ್ ಅವರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ಕೊಟ್ಟ ಅವರು ತಮ್ಮ ಮತಕ್ಕಾಗಿ ಯಾವುದೇ ಹಂತಕ್ಕೂ ಇಳಿಯಲು ತಯಾರಿದ್ದಾರೆ. ಪುರಾಣ ಕಾಲದಿಂದಲೂ ನಮ್ಮ ದೇಶವಿದ್ದು ಮೊದಲಿನಿಂದಲೂ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಇದೆ ಎಂದರು.
ದಕ್ಷಿಣ ರಾಜ್ಯಗಳೂ ಅಭಿವೃದ್ಧಿ ಕಂಡಿವೆ
ಭಾರತ ದೇಶದಲ್ಲಿ ಹೆಚ್ಚು ಬೆಳವಣಿಗೆ ಆಗಿದ್ದು ದಕ್ಷಿಣದ ರಾಜ್ಯಗಳು. ಕರ್ನಾಟಕ ಮತ್ತು ತಮಿಳನಾಡು ರಾಜ್ಯಗಳಿಂದ ಅತ್ಯಧಿಕಜಿಎಸ್‌ಟಿ ಸಂಗ್ರಹವಾಗುವ ಜೊತೆಗೆ ಹೆಚ್ಚಿನ ಸುಶಿಕ್ಷಿತರ ಪ್ರಮಾಣ ಕೇರದಲ್ಲಿದೆ. ವೇಗವಾಗಿ ಅಭಿವೃದ್ಧಿಯಾದ ರಾಜ್ಯಗಳಲ್ಲಿ ತೆಲಂಗಾಣವು ಇದೆ. ದಕ್ಷಿಣ ರಾಜ್ಯಗಳು ಅಭಿವೃದ್ಧಿ ಬಹಳ ಆಗಿದೆ ಜನರನ್ನು ದಾರಿ ತಪ್ಪಿಸುವ ಹೇಳಿಕೆ ಡಿಕೆ ಸುರೇಶರಿಂದ ಅಪೇಕ್ಷಿಸಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇಂತಹ ಕೆಲಸ ಮಾಡಿದ್ದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮತಕ್ಕಾಗಿ ದೇಶವನ್ನೇ ಮಾರಲು ಹಿಂದೆ ಸರಿಯಲ್ಲ
ಮೆಟ್ರೋದಲ್ಲಿ ಇಂಗ್ಲಿಷ್ ನಡೆಯುತ್ತದೆ ಆದರೆ ಹಿಂದಿ ಬೋರ್ಡ್ ವಿರೋಧಿಸಿದ್ದರು. ಹಿಂದಿ ಹೇರಿಕೆ ಎಂದೆಲ್ಲ ಗದ್ದಲ ಎಬ್ಬಿಸಿದರು. ನಂದಿನಿ, ಅಮೂಲ್ ವಿಷಯ ಪ್ರಸ್ತಾಪಿಸಿದ್ದರು. ಮತಕ್ಕಾಗಿ ದೇಶ ಮಾರುವುದಕ್ಕೂ ಹೇಸಿಗೆ ಪಡದವರು ಕಾಂಗ್ರೆಸ್‌ಗರು. ಸಂಸದ ಡಿಕೆ ಸುರೇಶ ತಮ್ಮ ತಪ್ಪು ಒಪ್ಪಿಕೊಳ್ಳಬೇಕು. ಒಪ್ಪಿಕೊಂಡು ಹೇಳಿಕೆ ವಾಪಸ್ ಪಡೆಯಬೇಕು. ದೇಶದ ದೃಷ್ಟಿಯಿಂದ ಇಂತಹ ಹೇಳಿಕೆಗಳು ಸರಿಯಲ್ಲ ಎಂದು ಅವರು ಆಗ್ರಹಿಸಿದರು.

ಜವಾಬ್ದಾರಿ ಸ್ಥಾನದಲ್ಲಿದ್ದವರು ಇಂತಹ ಹೇಳಿಕೆ ನೀಡಬಾರದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಸಂಸದ ಡಿ.ಕೆ.ಸುರೇಶ್ ಅವರ ದೇಶ ವಿಭಜನೆ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವೇ ಮಲ್ಲಿಕಾರ್ಜುನ ಖರ್ಗೆಯವರೇ ಅವರ ಹೇಳಿಕೆ ತಪ್ಪು ಎಂದು ಪ್ರತಿಕ್ರಿಯಸಬೇಕು ಎಂದು ಬೆಲ್ಲದ್ ಒತ್ತಾಯಿಸಿದರು.
ಕೆಲವು ಕಾಂಗ್ರೆಸ್ ನಾಯಕರು ಡಿಕೆ ಸುರೇಶ್ ಅವರ ದೇಶ ವಿಭಜನೆಯ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ಸಮರ್ಥನೆ ವಿಚಾರ ಸರಿಯಲ್ಲ. ಹಿರಿಯಕ್ಕನ ಛಾಳಿ ಮನೆ ಮಂದಿಗೆಲ್ಲ ಎನ್ನುವಂತಾಗಿದೆ. ಒಬ್ಬರು ಮಾಡಿದ್ದು, ಇನ್ನೊಬ್ಬರು ಮಾಡುತ್ತ ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಕಾಲೆಳೆದರು.












Click it and Unblock the Notifications