ಸಾವರ್ಕರ್ ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್‌ನವರು ಮನುಷ್ಯರಾ?: ಆರಗ ಜ್ಞಾನೇಂದ್ರ ಪ್ರಶ್ನೆ
ಧಾರವಾಡ, ಡಿಸೆಂಬರ್, 19: ವೀರ ಸಾವರ್ಕರ್ ಅವರನ್ನು ಹೀಯಾಳಿಸುವ ಕಾಂಗ್ರೆಸ್‌ನವರು ಮನುಷ್ಯರಾ? ಎಂದು ಪ್ರಶ್ನಿಸುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಧಾರವಾಡದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಸುವರ್ಣಸೌಧದಲ್ಲಿ ಸಾವರ್ಕರ್ ಭಾವಚಿತ್ರ ಹಾಕಲು ಕಾಂಗ್ರೆಸ್‌ನವರು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರ ಹಣೆಬರಹವೇ ಇಷ್ಟು. ಒಂದು ಜನಾಂಗವನ್ನು ತೃಪ್ತಿಪಡಿಸಿದರೆ ನಾವು ಶಾಶ್ವತವಾಗಿ ಅಧಿಕಾರದಲ್ಲಿರಬಹುದು ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್‌ನವರಿದ್ದಾರೆ. ಅದಕ್ಕಾಗಿ ಅವರು ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ವಿರುದ್ಧ ಆರಗ ಜ್ಞಾನೇಂದ್ರ ಆಕ್ರೋಶ
ಸಾವರ್ಕರ್ ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್‌ನವರು, ಈ ದೇಶದ ನಾಗರಿಕರಾ? ಇವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಈ ರೀತಿ ತುಷ್ಠೀಕರಣ ಮಾಡಿದ್ದರಿಂದಲೇ ಸರಿಯಾದ ಪಾಠವನ್ನು ಕಲಿತಿದ್ದಾರೆ. ಸಾವರ್ಕರ್ ದೇಶದಲ್ಲಿ ಮಹಾನುಭಾವರಾಗಿದ್ದರು. ಆದರೆ ಸಾವರ್ಕರ್ ಯಾಕೆ ಮಹಾನುಭಾವ ಅಲ್ಲ ಅಂತಾ ಕಾಂಗ್ರೆಸ್‌ನವರು ಮೊದಲು ಹೇಳಲಿ. ಇಷ್ಟು ದಿನ ಇಲ್ಲದ ಸಾವರ್ಕರ್ ಅವರ ಫೋಟೋವನ್ನು ಈಗಲೂ ಹಾಕುತ್ತೇವೆ, ಮುಂದೆಯೂ ಹಾಕುತ್ತೇವೆ ಎಂದರು. ಇನ್ನು ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಯಾರು ಕಾನೂನು ಕೈಗೆ ತೆಗೆದುಕೊಂಡಿದ್ದಾರೋ ಅವರನ್ನು ಪೊಲೀಸರು ಶಿಕ್ಷಿಸುತ್ತಾರೆ. ಈ ಬಗ್ಗೆ ತಂಟೆ ತೆಗೆಯುವವರು ಕೋರ್ಟ್‌ನಲ್ಲಿ ವಾದ ಮಾಡಲಿ ಎಂದರು.

ಐದಾರು ದಿನಗಳ ಬಳಿಕ ಸ್ಪಷ್ಟತೆ ತಿಳಿಯಲಿದೆ
ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು, ಮುಂದಿನ ಐದಾರು ದಿನಗಳ ಬಳಿಕ ಸ್ಪಷ್ಟತೆ ತಿಳಿಯಲಿದೆ. ಅಲ್ಲಿಯವರೆಗೆ ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ಮಂಗಳೂರ ಡಿಸಿಪಿ ಹೇಳಿಕೆ ಕೊಟ್ಟಿದ್ದಾರೆ. ಆದರೂ ಸಹ ಡಿಜಿಪಿ ಆರೋಪಿಯನ್ನು ತನಿಖೆ ನಡೆಸದೇ ಭಯೋತ್ಪಾದಕ ಎಂದು ಯಾವ ಆಧಾರದ ಮೇಲೆ ಹೇಳಿಕೆ ಕೊಟ್ಟಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಒತ್ತಾಯಿಸಿದ್ದರು.
ಬಿಜೆಪಿ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ, ಮತಕಳವು ಪ್ರಕರಣವನ್ನು ವಿಷಯಾಂತರ ಮಾಡಲು ಮಂಗಳೂರು ಕುಕ್ಕರ್ ಪ್ರಕರಣವನ್ನು ಬಳಸಿಕೊಂಡರು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದಿದ್ದರು. ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ನನ್ನ ಬಗ್ಗೆ ಯಾರು ಬೇಕಾದರೂ ಏನಾನ್ನಾದರೂ ಪ್ರಚಾರ ಮಾಡಲಿ. ನಮ್ಮದು ಕಾಂಗ್ರೆಸ್ ಪಕ್ಷ, ಭಯೋತ್ಪಾದನೆಯನ್ನು ವಿರೋಧಿಸುತ್ತಾ ಬಂದಿರುವ ಪಕ್ಷವಾಗಿದೆ. ಅಧಿಕಾರದಲ್ಲಿ ಇದ್ದಾಗೆಲ್ಲಾ ದೇಶದಲ್ಲಿ ಭಯೋತ್ಪಾದನೆಯನ್ನು ದಮನ ಮಾಡಿದ್ದೇವೆ. ಮಂಗಳೂರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದೀವಿ ಎಂದಿದ್ದರು.

ಭ್ರಷ್ಟಾಚಾರ ಆರೋಪ ಮುಚ್ಚಿಕೊಳ್ಳುವ ಪ್ರಯತ್ನ
ಬಿಜೆಪಿ ಭ್ರಷ್ಟಾಚಾರ, ಮತಗಳ್ಳತನ, ಬೋಗಸ್ ವೋಟರ್ ಸೃಷ್ಟಿಯನ್ನು ಮುಚ್ಚುವ ಪ್ರಯತ್ನವನ್ನು ಮಾಡುತ್ತಿದೆ. ಬಿಜೆಪಿಯವರು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವುದಕ್ಕೆ ಕುಕ್ಕರ್ ಬ್ಲಾಸ್ಟ್ ಪ್ರಕರಣ ಮುಂದೆ ತಂದಿದ್ದಾರೆ. ಇನ್ನು ಗೃಹ ಸಚಿವರು ಇದೇ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆರ್. ಅಶೋಕ್ ನನಗೆ ಅಮಾಯಕನ ಅವಾರ್ಡ್ ಕೊಡುವುದಾಗಿ ಹೇಳಿದ್ದಾರೆ. ಅಮಾಯಕರ ಅವಾರ್ಡ್ ತೆಗೆದುಕೊಳ್ಳಲು ನಾನು ಸಿದ್ದನಿದ್ದೇನೆ. ಅಶೋಕ್ ಡೇಟ್, ಟೈಮ್ ಫಿಕ್ಸ್ ಮಾಡಲಿ ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.












Click it and Unblock the Notifications