ಲಕ್ಕುಂಡಿಯಲ್ಲಿ ಮೊದಲ ಬಾರಿಗೆ ಬೌದ್ಧ ಧರ್ಮದ ಶಾಸನ ಪತ್ತೆ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್, 17: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮಾಡುತ್ತಿದ್ದ ಶಾಸನ ಪರಿವೀಕ್ಷಣೆಯಲ್ಲಿ, ಹೊಸ ಶಾಸನವೊಂದು ಪತ್ತೆಯಾಗಿದೆ.

ಕವಲೂರ ಎಂಬುವರ ಮನೆ ಕಂಪೌಂಡ್ ಗೋಡೆ ಕಟ್ಟಲು ತಂದ ಕಲ್ಲುಗಳ ರಾಶಿಯೊಂದರಲ್ಲಿ ತ್ರುಟಿತ ಶಾಸನವಿರುವ ಕಲ್ಲು ಪತ್ತೆಯಾಗಿದೆ.

20 ಇಂಚು ಅಗಲ 28 ಇಂಚು ಎತ್ತರದ ಕರಿಕಲ್ಲು ಇದಾಗಿದ್ದು, ಮೇಲೆ ಅರ್ಧವೃತ್ತಾಕಾರವಾಗಿದೆ. ಅದಕ್ಕೆ ಚೌಕಟ್ಟನ್ನು ಕೆತ್ತಿದೆ. ಅರ್ಧವೃತ್ತಾಕಾರದ 9 ಭಾಗದಲ್ಲಿ ಸೂರ್ಯ, ಪೂಜಾರಿ, ಕುಳಿತ ಲಕ್ಷ್ಮಿ, ಖಡ್ಗ, ಕರುವಿಗೆ ಹಾಲು ಕುಡಿಸುತ್ತಿರುವ ಆಕಳು, ಚಂದ್ರರ ಉಬ್ಬುಶಿಲ್ಪಗಳಿವೆ. ಇದರ ಕೆಳಗಿನ 3 ಪಟ್ಟಿಕೆಯಲ್ಲಿ ಬುದ್ಧ, ಧರ್ಮ, ಸಂಘ ಮತ್ತು ತಾರಾ ಭಗವತಿಯರ ಸ್ತುತಿಯಿದೆ. ಇದರ ಕೆಳಗಿನ 19 ಭಾಗದಲ್ಲಿ ಶಾಸನವಿದ್ದು, ಕೆಳಭಾಗ ಒಡೆದಿದೆ.

Buddhist Stone Inscriptions found in Lakkundi, Gadag

ಇದುವರೆಗೆ ಕರ್ನಾಟಕದ ಸನ್ನತಿ, ಕನಗನಹಳ್ಳಿ, ಬನವಾಸಿ, ಕದ್ರಿ, ಕೋಳಿವಾಡ, ರಾಜಘಟ್ಟ, ಡಂಬಳ, ಲಕ್ಷ್ಮೇಶ್ವರಗಳಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಶಾಸನಗಳು ಮತ್ತು ಮೂರ್ತಿಶಿಲ್ಪಗಳು ದೊರೆತಿವೆ. ಆದರೆ ಲಕ್ಕುಂಡಿಯಲ್ಲಿ ಮೊದಲ ಬಾರಿಗೆ ಬೌದ್ಧ ಧರ್ಮದ ಉಲ್ಲೇಖವಿರುವ ಈ ಶಾಸನವು ಪತ್ತೆಯಾಗಿದೆ.

ಶಾಸನವು ಮೊದಲಿಗೆ ಬುದ್ಧ, ಧರ್ಮ ಮತ್ತು ಸಂಘಗಳಿಗೆ ನಮನಗಳನ್ನು ಓಂ ನಮೋ ಬೌದ್ಧಾಯ || ನಮೋ ಧರ್ಮಾಯ || ನಮಃ ಸಂಘಾಯ ||: ಎಂದು ಹೀಗೆ ಸಲ್ಲಿಸುತ್ತದೆ. ನಂತರ ತಾರಾ ಭಗವತಿಯನ್ನು ಸ್ತುತಿಸುತ್ತದೆ. ತದನಂತರ ಹೊಯ್ಸಳ ಚಕ್ರವರ್ತಿ ಇಮ್ಮಡಿ ವೀರಬಲ್ಲಾಳನ ಆಡಳಿತವನ್ನು ಸೂಚಿಸುತ್ತ, ವೀರಬಲ್ಲಾಳನನ್ನು ಸಕಲ ಬಿರುದಾವಳಿಗಳೊಂದಿಗೆ ಬಣ್ಣಿಸುತ್ತದೆ.

ಸಾಸಿರ್ವರು ಮಹಾಜನರನ್ನು ಸಕಲ ಗುಣವಿಶೇಷತೆಗಳೊಂದಿಗೆ ವಿವರಿಸುವ ಇದು ಮಹಾ ವಡ್ಡ ವ್ಯವಹಾರಿಯೊಬ್ಬನನ್ನು ಪ್ರಸ್ತಾಪಿಸುವುದರೊಂದಿಗೆ ಶಾಸನವು ಒಡೆದಿದೆ.

ಶಾಸನವು ಹೊಯ್ಸಳ ಚಕ್ರವರ್ತಿ ವೀರಬಲ್ಲಾಳನ ಆಳ್ವಿಕೆಯ ಕಾಲವನ್ನು ಉಲ್ಲೇಖಿಸುವುದರಿಂದ ಮತ್ತು ಈಗಾಗಲೇ ಇಮ್ಮಡಿ ವೀರಬಲ್ಲಾಳನ ಮೂರು ಶಾಸನಗಳು (ಕ್ರಿ.ಶ. 1195, 1200, 1212) ದೊರೆತಿರುವುದರಿಂದ ಈ ಶಾಸನವು ಕೂಡ ಇದೇ ಅವಧಿಯದ್ದಾಗಿದೆ ಎಂದು ಗುರುತಿಸಬಹುದಾಗಿದೆ.

ಕರ್ನಾಟಕದ ಶಾಸನಗಳಲ್ಲಿ ಹೀಗೆ ಬುದ್ಧ, ಧರ್ಮ ಹಾಗೂ ಸಂಘಗಳಿಗೆ ನಮಸ್ಕಾರಗಳನ್ನು ತಿಳಿಸಿದ ಮೊತ್ತಮೊದಲ ಶಾಸನ ಇದಾಗಿದೆ. ಅಂತೆಯೇ ತಾರಾ ಭಗವತಿಯ ಆರಾಧನಾ ಪರಂಪರೆ ಈ ಭಾಗದಲ್ಲಿತ್ತೆಂದು ಈ ಶಾಸನ ಮತ್ತು ಡಂಬಳ, ಕೋಳಿವಾಡ ಶಾಸನಗಳು ಸಾಕ್ಷಿಯನ್ನು ನುಡಿಯುತ್ತವೆ.

Buddhist Stone Inscriptions found in Lakkundi, Gadag

ಲೊಕ್ಕಿಗುಂಡಿಯ ಮಹಾ ವಡ್ಡಬ್ಯವಹಾರಿ ಸಂಗಮಶೆಟ್ಟಿಯರು ಕಟ್ಟಿಸಿದ ಚೈತ್ಯಾಲಯಕ್ಕೆ ತೆಲ್ಲಿಗರಯ್ವತ್ತೊಕ್ಕಲು ಎಣ್ಣೆದಾನವನ್ನು ನೀಡಿದುದನ್ನು ಡಂಬಳ ಶಾಸನವು ತಿಳಿಸುತ್ತದೆ.

ಆ ಕಾರಣದಿಂದಾಗಿ ಬಹುಶಃ ಸಂಗಮಸೆಟ್ಟಿಯು ಲಕ್ಕುಂಡಿಯಲ್ಲಿಯೂ ಒಂದು ಚೈತ್ಯಾಲಯವನ್ನು ಕಟ್ಟಿಸಿ ದಾನ ನೀಡಿರಬಹುದು ಇಲ್ಲವೇ ಆತ ಕಟ್ಟಿಸಿದ ಚ್ಯೆತ್ಯಾಲಯಕ್ಕೆ ಮಹಾಜನರು ದಾನ ನೀಡಿರಬಹುದೆಂಬ ಸಂಭಾವ್ಯ ಊಹೆಯನ್ನು ಮಾಡಬಹುದಾಗಿದೆ. ಶಾಸನದ ಕಳೆದಿರುವ ಕೆಳಭಾಗದ ಇನ್ನೊಂದು ತುಣುಕನ್ನು ಮತ್ತು ಬೌದ್ಧ ಚೈತ್ಯಾಲಯದ ಅವಶೇಷಗಳನ್ನು ಸಂಶೋಧಕರು ಲಕ್ಕುಂಡಿಯಲ್ಲಿ ಹುಡುಕಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Buddhist Stone Inscriptions found in Lakkundi, Gadag. A black stone is measuring 20 X 28 inches which mainly contains praising word about Buddha, Tara Bhagavati and Sangha. Historians sound similar stone inscriptions in various parts of Karnataka belonging to Hoysala period.
Please Wait while comments are loading...