ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೆ ವಿಮಾನಯಾನ ಆರಂಭ
ಹುಬ್ಬಳ್ಳಿ, ಏ. 13 : ಬೆಂಗಳೂರು-ಹುಬ್ಬಳ್ಳಿ ನಡುವಿನ ವಿಮಾನಯಾನ ಸೇವೆಗೆ ಏರ್ ಪೆಗಾಸಸ್ ಚಾಲನೆ ನೀಡಿದೆ. ಒಂದೂವರೆ ಗಂಟೆಯ ಅವಧಿಯಲ್ಲಿ 1,600 ರೂ. ದರದಲ್ಲಿ ಈ ಮಾರ್ಗದಲ್ಲಿ ಪ್ರಯಾಣಿಸಬಹುದಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಏರ್ ಪೆಗಾಸಸ್ ವಿಮಾನಯಾನ ಸೇವೆಗೆ ಭಾನುವಾರ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು.

ವೇಳಾಪಟ್ಟಿ : ಏರ್ ಪೆಗಾಸಸ್ ಪ್ರತಿದಿನ ಬೆಂಗಳೂರು-ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಬೆಂಗಳೂರಿಗೆ ವಿಮಾನಯಾನ ಸೇವೆ ಒದಗಿಸಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 3.05ಕ್ಕೆ ಹೊರಡುವ ವಿಮಾನ ಹುಬ್ಬಳ್ಳಿಗೆ ಸಂಜೆ 4.20ಕ್ಕೆ ತಲುಪಲಿದೆ. ಸಂಜೆ 4.40ಕ್ಕೆ ಹುಬ್ಬಳ್ಳಿಯಿಂದ ಹೊರಟು ಸಂಜೆ 6.05ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ. [ಹುಬ್ಬಳ್ಳಿಗೆ ಹಾರಲಿದೆ ಏರ್ ಪೆಗಾಸಸ್]
ಏರ್ ಪೆಗಾಸಸ್ ಒಂದು ಮಾರ್ಗದ ಪ್ರಯಾಣ ದರ 1,600 ರೂ. ಎಂದು ನಿಗದಿಪಡಿಸಿದ್ದು, ಆರಂಭದಲ್ಲಿ ಶೇ 10 ರಷ್ಟು ರಿಯಾಯಿತಿ ನೀಡಲಾಗಿದೆ. ಎರ್ ಪೆಗಾಸಸ್‌ನ ಎಟಿಆರ್ ಮಾದರಿಯ ವಿಮಾನ ಈ ಮಾರ್ಗದಲ್ಲಿ ಸಂಚರಿಸಲಿದ್ದು 66 ಆಸನ ವ್ಯವಸ್ಥೆ ಇದೆ. [ಟಿಕೆಟ್ ಬುಕ್ ಮಾಡಲು ವಿಳಾಸ]
ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ತಿರುವನಂತಪುರಂ ನಡುವಿನ ಸಂಚಾರಕ್ಕೆ ಏರ್ ಪೆಗಾಸಸ್ ಭಾನುವಾರ ಚಾಲನೆ ನೀಡಿದೆ. ಮಂದಿನ ದಿನಗಳಲ್ಲಿ ಬೆಳಗಾವಿ, ರಾಜಮಂಡ್ರಿ, ಚೆನ್ನೈ, ಪುದುಚೇರಿ, ಮಧುರೈ ನಗರಗಳಿಗೆ ಸೇವೆಯನ್ನು ವಿಸ್ತರಿಸಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶೈಸನ್ ಥಾಮಸ್ ಹೇಳಿದ್ದಾರೆ.
ಹಾರಾಟ ಸ್ಥಗಿತಗೊಂಡಿದೆ : ವಾಣಿಜ್ಯ ನಗರಿ ಹುಬ್ಬಳ್ಳಿಗೆ ಸ್ಪೈಸ್‌ಜೆಟ್ ವಿಮಾನಯಾನ ಸೇವೆ ನೀಡುತ್ತಿತ್ತು. ಮಾ.8ರ ಭಾನುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನ ಲ್ಯಾಂಡ್ ಆಗುವ ವೇಳೆ ಅಪಘಾತ ಸಂಭವಿಸಿತ್ತು. [ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ]
ಆನಂತರ ವಿಮಾನ ಸೇವೆ ರದ್ದುಗೊಳಿಸಲಾಗಿದ್ದು, ಅಕ್ಟೋಬರ್ 2015ರ ತನಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಸೇವೆ ನೀಡುವುದಿಲ್ಲ ಎಂದು ಸ್ಪೈಸ್‌ಜೆಟ್ ಕೆಲವು ದಿನಗಳ ಹಿಂದೆ ಹೇಳಿತ್ತು.












Click it and Unblock the Notifications