84ನೇ ಕನ್ನಡ ಸಾಹಿತ್ಯ ಸಮ್ಮೇಳನ, ಸಿದ್ಧತೆ ಪರಿಶೀಲಿಸಿದ ಸಚಿವರು
ಧಾರವಾಡ, ಡಿಸೆಂಬರ್ 04 : 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಯಾರಿ ನಡೆಯುತ್ತಿದೆ. ಜನವರಿ 4 ರಿಂದ ಮೂರು ದಿನಗಳ ಕಾಲ ಧಾರವಾಡದಲ್ಲಿ ಅಕ್ಷರ ಜಾತ್ರೆ ನಡೆಯಲಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಸಾಹಿತ್ಯ ಸಮ್ಮೇಳನ ನಡೆಯುವ ಧಾರವಾಡ ಕೃಷಿ ವಿವಿ ಆವರಣದಲ್ಲಿ ಪರಿಶೀಲನೆ ನಡೆಸಿದರು. ಮುಖ್ಯ ವೇದಿಕೆ ನಿರ್ಮಾಣ ಸ್ಥಳ, ಮಾಧ್ಯಮ ಕೇಂದ್ರ, ಭೋಜನಾಂಗಣ, ಪುಸ್ತಕ ಮತ್ತು ವಸ್ತು ಪ್ರದರ್ಶನ ಮಳಿಗೆ, ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಂಗಣದ ಸ್ಥಳಗಳನ್ನು ವೀಕ್ಷಿಸಿದರು.
'ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕಸಾಪ ಪದಾಧಿಕಾರಿಗಳು ಸಮನ್ವಯದಿಂದ ಸೂಕ್ಷ್ಮ ವಿಚಾರಗಳನ್ನೂ ಸಹ ಮುನ್ನೋಟದಿಂದ ಆಲೋಚಿಸಿ, ಸಿದ್ಧತೆ ಮಾಡಿಕೊಳ್ಳಬೇಕು' ಎಂದು ಸಚಿವ ದೇಶಪಾಂಡೆ ಸೂಚನೆ ನೀಡಿದರು.

'ಶುಚಿತ್ವ, ಶೌಚಾಲಯ ನಿರ್ಮಾಣ, ನೀರು ಪೂರೈಕೆ, ವಿದ್ಯುತ್ ಅಲಂಕಾರ ಸಮರ್ಪಕವಾಗಿ ಇರಬೇಕು. ಗೃಹ ಕೈಗಾರಿಕೆಗಳು ಮತ್ತು ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರುಕಟ್ಟೆಗೆ ಮಳಿಗೆ ನೀಡಬೇಕು. ಸಮ್ಮೇಳನದ ಹಿನ್ನಲೆಯಲ್ಲಿ ಡಿ.25 ರಿಂದ ಸ್ವಚ್ಚತಾ ಆಂದೋಲನ ಆರಂಭಿಸಬೇಕು' ಎಂದು ನಿರ್ದೇಶನ ನೀಡಿದರು.

ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯಿತಿ ಸಿಇಓ ಡಾ.ಸತೀಶ ಬಿ.ಸಿ., ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮುಂತಾದ ಅಧಿಕಾರಿಗಳು ಸಿದ್ಧತೆಗಳ ಕುರಿತು ವಿವರಣೆ ನೀಡಿದರು.












Click it and Unblock the Notifications