ಕಳಪೆ ಗುಣಮಟ್ಟದ ಬೀಜ ಪೂರೈಕೆ: ಗಂಗಾ ಕಾವೇರಿ ಸೀಡ್ಸ್ ಕಂಪನಿಗೆ ₹1.25 ಲಕ್ಷ ದಂಡ
ಧಾರವಾಡ, ಮಾರ್ಚ್ 30: ಗದಗ ತಾಲೂಕಿನ ಬೆನಹಾಳ ಗ್ರಾಮದ ರೈತನಾದ ಹೂವಪ್ಪ ಜಂಗಣ್ಣವರ ಎಂಬುವವರು 2019-20ನೇ ಸಾಲಿನ ಹಿಂಗಾರಿನಲ್ಲಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯಲು ನಿರ್ಧರಿಸಿ 5,400 ರೂಪಾಯಿ ಕೊಟ್ಟು ಗಂಗಾ ಕಾವೇರಿ ಸೀಡ್ಸ್ ಪ್ರೈ.ಲಿ.ನವರ ಬೀಜಗಳನ್ನು ಖರೀದಿಸಿದ್ದರು.
ದೂರುದಾರ ಆ ಬೀಜಗಳನ್ನು ತನ್ನ ಜಮೀನು ಸರಿಯಾಗಿ ಉಳಿಮೆ ಮಾಡಿ ಸುಮಾರು 15,400 ರೂಪಾಯಿ ಖರ್ಚು ಮಾಡಿ ಬಿತ್ತಿದ್ದರು. ಮೆಕ್ಕೆಜೋಳದ ಮೊಳಕೆ ಒಡೆಯದೇ ಸರಿಯಾದ ಬೆಳೆ ಮತ್ತು ಫಸಲು ಬಂದಿಲ್ಲ ಅಂತಾ ಎದುರುದಾರ ಕಂಪೆನಿಯವರ ಮೇಲೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದರು.

ಆ ದೂರಿನಲ್ಲಿ ಗುಣಮಟ್ಟದ ಮೆಕ್ಕೆ ಜೋಳದ ಬೀಜಗಳನ್ನು ಪೂರೈಸದ ಕಾರಣ ಗಂಗಾ ಕಾವೇರಿ ಸೀಡ್ಸ್ ಕಂಪೆನಿಯವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು 3 ಲಕ್ಷ 75 ಸಾವಿರಗಳ ನಷ್ಟ ಭರ್ತಿ ಪರಿಹಾರ ಕೊಡಿಸಲು ಕೇಳಿದ್ದರು.
ಆಯೋಗದ ಮುಂದೆ ವಕೀಲರ ಮೂಲಕ ಹಾಜರಾಗಿ ತಾವು ಪೂರೈಸಿದ ಮೆಕ್ಕೆ ಜೋಳದ ಬೀಜ ಒಳ್ಳೆಯ ಗುಣಮಟ್ಟದ್ದು ಇರುತ್ತವೆ. ದೂರುದಾರ ತನ್ನ ಜಮೀನನ್ನು ಸರಿಯಾಗಿ ಉಳುಮೆ ಮಾಡದೇ ಮತ್ತು ನೀರನ್ನು ಹಾಯಿಸದೇ ಇದ್ದುದ್ದರಿಂದ ಅವರ ತಪ್ಪಿನಿಂದ ಮೊಳಕೆ ಒಡೆದಿಲ್ಲ ಹಾಗೂ ಫಸಲು ಬಂದಿಲ್ಲ ಎಂದು ಹೇಳಿ ಘಟನೆಗೆ ರೈತನೇ ಕಾರಣ ಅಂತಾ ಆಕ್ಷೇಪಿಸಿದ್ದರು.
ಈ ದೂರುಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ದೂರುದಾರ ತನ್ನ ಜಮೀನಿನಲ್ಲಿ ಬೋರು ನೀರಿನ ಸೌಲಭ್ಯ ಹೊಂದಿದ್ದು ಅವನು ಜಮೀನನ್ನು ಸರಿಯಾಗಿ ಉಳಿಮೆ ಮಾಡಿ, ಬೀಜ ಹಾಕಿ ನೀರು ಹಾಯಿಸಿದ್ದರೂ ಮೆಕ್ಕೆ ಜೋಳದ ಬೀಜ ಮೊಳಕೆ ಒಡೆಯದೇ ರೈತನಿಗೆ ಹಾನಿಯಾಗಿದೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.

ಆ ಬಗ್ಗೆ ಎದುರುದಾರ ಕಂಪೆನಿಯವರು ಎತ್ತಿದ್ದ ಆಕ್ಷೇಪಣೆಗಳನ್ನು ಆಯೋಗ ತಳ್ಳಿ ಹಾಕಿದೆ. ಅದಕ್ಕಾಗಿ ಎದುರುದಾರ ಗಂಗಾ ಕಾವೇರಿ ಸೀಡ್ಸ್ ಕಂಪೆನಿಯವರು ದೂರುದಾರನಿಗೆ 1 ಎಕರೆಗೆ 25 ಸಾವಿರದಂತೆ ಒಟ್ಟು 75 ಸಾವಿರ ಬೆಳೆ ನಷ್ಟ ಪರಿಹಾರವನ್ನು ಬೀಜ ಖರೀದಿಸಿದ 09/12/2019 ರಿಂದ ಶೇ.8ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರ ರೈತನಿಗೆ ಕೊಡುವಂತೆ ಆದೇಶಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ 25 ಸಾವಿರ ಪರಿಹಾರ, 10,000 ಪ್ರಕರಣದ ಖರ್ಚು ಹಾಗೂ 15,400 ರೂಪಾಯಿ ಬೆಳೆಗೆ ವಿನಿಯೋಗಿಸಿದ ಖರ್ಚು ವೆಚ್ಚ ಕೊಡುವಂತೆ ತೀರ್ಪಿನಲ್ಲಿ ಹೇಳಿದೆ.
200ಕ್ಕೂ ಅಧಿಕ ಮಕ್ಕಳ ಆರೋಗ್ಯ ಪರೀಕ್ಷೆ ಇಲಾಖೆಗೆ ಮೆಚ್ಚುಗೆ
ಕುಂದಗೋಳ : ನಿತ್ಯ ಒಂದಿಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುವ ಚಿಕ್ಕಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕುಂದಗೋಳ ಆರೋಗ್ಯ ಇಲಾಖೆ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ವೈದ್ಯರಿಂದ ಸೂಕ್ತ ಮಾರ್ಗದರ್ಶನ ನೀಡಿದೆ.
ಕುಂದಗೋಳ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಕುಂದಗೋಳ ಪಟ್ಟಣದಲ್ಲಿ ಮಕ್ಕಳ ಆರೋಗ್ಯ ಶಿಬಿರ ಏರ್ಪಡಿಸಿ ಮಕ್ಕಳ ಆರೋಗ್ಯ ಪರೀಕ್ಷೆ ಮಾಡಲಾಗಿದೆ.
ತೂಕ ಮತ್ತು ಎತ್ತರ ವ್ಯತ್ಯಾಸ, ದೇಹದ ಅಂಗಾಂಗಗಳ ನ್ಯೂನ್ಯತೆ, ಸಾಂಕ್ರಾಮಿಕ ರೋಗ, ಅಪೌಷ್ಟಿಕತೆ ಹೀಗೆ ನಾನಾ ಸಮಸ್ಯೆಯುಳ್ಳ 200 ಕ್ಕೂ ಅಧಿಕ ಮಕ್ಕಳ ಸಭೆ ಕರೆದು ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ.
ಈ ಆರೋಗ್ಯ ಶಿಬಿರದಲ್ಲಿ ಚಿಕ್ಕಮಕ್ಕಳ ತಜ್ಞ ವೈದ್ಯರಾದ ಡಾ.ಪ್ರಕಾಶ ವಾರಿ, ಡಾ.ಬಬಲೇಶ್ವರ, ಡಾ.ಉಮೇಶ್ ಅಂಗಡಿ, ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಮಕ್ಕಳ ಆರೋಗ್ಯದ ತಪಾಸಣೆ ಬಗ್ಗೆ ಕಾಳಜಿ ವಹಿಸಿ ಪಾಲಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸಹ ತಿಳಿಸಿದ್ದಾರೆ.












Click it and Unblock the Notifications