ನಾಲ್ಕೈದು ತಲೆಮಾರುಗಳಿಂದ ದೀಪಾವಳಿ ಆಚರಿಸದ ಲೋಕಿಕೆರೆ ಗ್ರಾಮಸ್ಥರು, ಯಾಕೆ?
ದಾವಣಗೆರೆ, ಅಕ್ಟೋಬರ್, 27: ರಾಜ್ಯದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಹಲವು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಆಚರಿಸಿಲ್ಲ.
ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಹಲವು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಆಚರಿಸಿಲ್ಲ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷವಾಗಿದೆ. ಹಬ್ಬದ ದಿನ ದೀಪ ಹಚ್ಚಿ ಪಟಾಕಿ ಸಿಡಿಸಿ ಎಲ್ಲರೂ ಸಂತೋಷಪಡುತ್ತಾರೆ. ಲೋಕಿಕೆರೆ ಗ್ರಾಮದಲ್ಲಿ ಮಾತ್ರ ಈ ಹಬ್ಬ ಬಂತೆಂದರೆ ಕರಾಳ ದಿನವಾಗಿರುತ್ತದೆ. ಎಲ್ಲರ ಮನೆಯಲ್ಲಿ ಬೆಳಕು ಮೂಡಿದರೆ ಇಲ್ಲಿ ಕತ್ತಲು ಆವರಿಸಿರುತ್ತದೆ. ಒಂದೆಡೆ ದೇಶಾದ್ಯಂತ ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿದ್ದರೆ, ಲೋಕಿಕೆರೆ ಗ್ರಾಮದಲ್ಲಿ ಹಬ್ಬ ಆಚರಿಸದೇ ಮೂಢನಂಬಿಕೆಯ ಮೊರೆ ಹೋಗಿದ್ದಾರೆ ಎಂದು ಕೆಲವು ಹಿರಿಯರು ಹೇಳುತ್ತಿದ್ದಾರೆ.
ಪಟಾಕಿ ದರದಲ್ಲಿ ಭಾರೀ ಏರಿಕೆ; ವ್ಯಾಪಾರಿಗಳು ಹೇಳೋದೇನು?
ಹಲವಾರು ವರ್ಷಗಳ ಹಿಂದೆ ಗ್ರಾಮದ ಹಿರಿಯರು ದೀಪಾವಳಿ ಹಬ್ಬಕ್ಕಾಗಿ ಬಟ್ಟೆಗಳನ್ನು ತರಲು ನಗರಕ್ಕೆ ಹೋಗಿದ್ದರಂತೆ. ಅಂದು ಹೋದ ಹಿರಿಯರು ಹಿಂದಿರುಗಿ ಬರಲೇ ಇಲ್ಲವಂತೆ. ಈ ಹಿನ್ನೆಲೆಯಲ್ಲಿ ನಾಲ್ಕಾರು ತಲೆಮಾರುಗಳಿಂದ ಈ ಊರಿನಲ್ಲಿ ಹಬ್ಬ ಆಚರಣೆ ಮಾಡುವುದನ್ನು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಬೆಳೆಗಳು ಫಸಲಿಗೆ ಬಂದಿರುತ್ತವೆ. ಬಂದ ಲಾಭದಿಂದ ಹಳೆ ಬಾಕಿ ತೀರಿಸಿ, ಹೊಸ ವಸ್ತುಗಳನ್ನು ಖರೀದಿಸಿ ಹೊಸ ಲೆಕ್ಕ ಶುರು ಮಾಡುವುದು ದೀಪಾವಳಿಯ ಹಳೆ ಶಿಷ್ಟಾಚಾರವಾಗಿದೆ.

ಲೋಕಿಕೆರೆಯಲ್ಲಿ ದೀಪಾವಳಿ ಆಚರಣೆ ಇಲ್ಲ
ಲೋಕಿಕೆರೆ ಗ್ರಾಮದಲ್ಲಿ ಎಲ್ಲಾ ಆಚರಣೆ ಮತ್ತು ಹೊಸ ವಸ್ತುಗಳ ಖರೀದಿಗೆ ನಾಲ್ಕೈದು ತಲೆಮಾರುಗಳಿಂದ ನಿರ್ಬಂಧ ಬಿದ್ದಂತಿದೆ. ಮೂಢನಂಬಿಕೆಗೆ ಮೊರೆ ಹೋಗಿರುವ ಈ ಊರಿನಲ್ಲಿ ಶೇಕಡಾ 75ರಷ್ಟು ಇರುವ ಕುರುಬ ಜನಾಂಗದ ಜನ ಈ ಹಬ್ಬವನ್ನು ಮರೆತೇ ಹೋಗಿದ್ದೇವೆ ಎಂದು ಗ್ರಾಮದ ಮುಖಂಡ ಅಂಜಿನಪ್ಪ ಹೇಳುತ್ತಿದ್ದಾರೆ. ಗ್ರಾಮದವರು ಹಬ್ಬ ಮಾಡದಿರಲು ಎರಡು ಕಾರಣಗಣ್ನು ಹೇಳುತ್ತಾರೆ. ಒಂದು ಗ್ರಾಮದ ಯುವಕನೊಬ್ಬ ಚಿತ್ರದುರ್ಗದಲ್ಲಿ ಮದುವೆ ಆಗಿರುತ್ತಾನೆ. ಈ ವೇಳೆ ನವ ವಧು ಹಾವು ಕಚ್ಚಿ ಸಾವನ್ನಪ್ಪಿರುತ್ತಾನೆ. ನಂತರ ಇವರ ಪತ್ನಿಗೆ ಮತ್ತೊಂದು ಮದುವೆ ಮಾಡಲು ಮುಂದಾದಾಗ ಈ ಮಹಿಳೆ ನನಗೆ ಈಗಾಗಲೇ ಮದುವೆ ಆಗಿದೆ. ಅವನು ಸತ್ತರೂ ಕೂಡ ಅವನೇ ನನ್ನ ಪತಿ. ನಾನು ಮತ್ತೊಂದು ಮದುವೆ ಆಗಲಾರೆ ಎಂದು ದೀಪಾವಳಿ ದಿನವೇ ಅಗ್ನಿಗೆ ಆಹುತಿ ಆಗುತ್ತಾಳೆ. ಹೀಗಾಗಿ ದೀಪಾವಳಿ ದಿನವೇ ಊರಿಗೆ ಕತ್ತಲು ಆವರಿಸಿದೆ ಎಂದು ಅಂದಿನಿಂದ ಇಂದಿನವರೆಗೆ ಹಬ್ಬವನ್ನು ಮಾಡುತ್ತಿಲ್ಲ.

ದೀಪಾವಳಿ ಬಗ್ಗೆ ಗ್ರಾಮಸ್ಥರ ಪ್ರತಿಕ್ರಿಯೆ
ಮತ್ತೊಂದು ಕಾರಣ ಗ್ರಾಮದ ನಾಲ್ಕೈದು ಜನ ಯುವಕರು ಹಬ್ಬದ ದಿನ ಪೂಜೆಯ ವಸ್ತುಗಳಾದ ಕಾಚಿ ಕಡ್ಡಿ, ಉತ್ರಾಣಿ ಕಡ್ಡಿ ತರಲು ಹೋದವರು ಇದುವರೆಗೂ ಹಿಂದಿರುಗಿ ಬಂದಿಲ್ಲವಂತೆ. ಅವರು ಸತ್ತಿರಬಹುದು ಎನ್ನುವ ಅನುಮಾನಗಳು ವ್ಯಕ್ತವಾಗಿದ್ದವು. ಹೀಗಾಗಿ ದೀಪಾವಳಿ ಊರಿಗೆ ಅಪಶಕುನ ಎಂದು ತಿಳಿದು ಹಬ್ಬದ ನಿಷೇಧಕ್ಕೆ ಅಂದಿನ ಮುಖಂಡರು, ಗ್ರಾಮಸ್ಥರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಗ್ರಾಮದ ಹಿರಿಯರಿಗೆ ಯುವಕರ ಸವಾಲು
ಇಂದಿನವರೆಗೂ ಕೂಡ ಇಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿಲ್ಲ. ಆದರೆ ಈಗಿನ ಯುವಕರು ಎಲ್ಲರೂ ಹಬ್ಬ ಮಾಡುವುದನ್ನು ನೋಡಿ ನಾವು ಮಾಡಬೇಕು ಎಂದು ಹಲವು ಬಾರಿ ಅಂದುಕೊಂಡರೂ ಇದುವರೆಗೂ ಸಾಧ್ಯವಾಗಿಲ್ಲ. ಮುಂದಿನ ವರ್ಷ ಕುಲದೇವರು ಬೀರಪ್ಪನ ಆಶೀರ್ವಾದ ಪಡೆದು ಹಬ್ಬ ಮಾಡಿಯೇ ಮಾಡುತ್ತೇವೆ ಎಂದು ಗ್ರಾಮದ ಯುವಕ ಗೋಪಾಲಕೃಷ್ಣ ಹೇಳುತ್ತಿದ್ದಾರೆ.

ಹಬ್ಬ ಆಚರಿಸುತ್ತೇವೆ ಎಂದ ಯುವಕರು
ಒಟ್ಟಾರೆ ಪ್ರಪಂಚ ಇಷ್ಟು ಮುಂದುವರಿದಿದ್ದರೂ ಜನರು ಈಗಲೂ ಮೂಢನಂಬಿಕೆ ಮೊರೆ ಹೋಗಿದ್ದಾರೆ. ಮುಂದುವರೆದ ಜಾಗತೀಕರಣ, ತಂತ್ರಜ್ಞಾನ ಯುಗದಲ್ಲಿ ಲೋಕಿಕೆರೆ ಗ್ರಾಮದವರು ಮೂಢನಂಬಿಕೆಗೆ ಮೊರೆ ಹೋಗಿ ಹಬ್ಬಕ್ಕೆ ನಿಷೇಧ ಏರಿಕೊಂಡಿರುವುದು ಸೋಜಿಗದ ಸಂಗತಿ ಆಗಿದೆ. ಇನ್ನಾದರು ಈ ಊರಿಗೆ ಕತ್ತಲೆ ಹೋಗಿ ಬೆಳಕು ಆವರಿಸಲಿ ಎನ್ನುವ ಸಾಹಸಕ್ಕೆ ಯುವಪೀಳಿಗೆಯ ಯುವಕರು ಕೈಹಾಕಿದ್ದಾರೆ. ಮುಂದಿನ ವರ್ಷದಿಂದ ಹಬ್ಬ ಆಚರಿಸುತ್ತೇವೆ. ಆ ವೇಳೆಯಲ್ಲಿ ಯಾವ ಅವಘಡ ಸಂಭವಿಸದಂತೆ ಹಬ್ಬ ಆಚರಿಸುವಂತಾಗಲಿ ಎಂದು ಯುವಕರು ದೇವರ ಮೊರೆ ಹೋಗಿ ಬೇಡಿಕೊಂಡಿದ್ದಾರೆ.