ಬೆಣ್ಣೆನಗರಿಯಲ್ಲಿ ಜೋರಾಯ್ತು ಆಪರೇಷನ್ ಕೈ, ಕಮಲ.!- ಏನೆಲ್ಲ ಆಯ್ತು?-ಇಲ್ಲಿದೆ ಮಾಹಿತಿ
ದಾವಣಗೆರೆ, ಏಪ್ರಿಲ್, 11: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ಏರುತ್ತಲೇ ಇದೆ. ಹಾಗೆಯೇ ಪ್ರಚಾರದ ಕಾವು ಜೋರಾಗಿದೆ. ಈ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಆಪರೇಷನ್‌ಗೆ ಮುಂದಾಗಿವೆ. ಎರಡೂ ಪಕ್ಷಗಳ ನಾಯಕರು ಬೇರೆ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಸೆಳೆಯಲು ತಂತ್ರಗಾರಿಕೆ ರೂಪಿಸಿದ್ದಾರೆ. ಇದರ ಭಾಗವಾಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರೆ, ಮಾಯಕೊಂಡದ ಬಿಜೆಪಿ ನಾಯಕ ವಾಗೀಶ್ ಸ್ವಾಮಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ.
ಜಿಎಂಐಟಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರರ ಸಮ್ಮುಖದಲ್ಲಿ ಶಿವನಹಳ್ಳಿ ರಮೇಶ್ ರಮೇಶ್ ಕಮಲಕ್ಕೆ ಸೇರ್ಪಡೆಯಾದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಶಿವನಹಳ್ಳಿ ರಮೇಶ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ಶಾಕ್ ಕೊಟ್ಟಿದೆ. ಇನ್ನು ಮಾಯಕೊಂಡದ ವಾಗೀಶ್ ಸ್ವಾಮಿ ಅವರನ್ನು ಆಪರೇಷನ್ ಮಾಡುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ರಿವರ್ಸ್ ಆಪರೇಷನ್ ಶಾಕ್ ನೀಡಿದೆ.

ಸರಳ, ಸಜ್ಜನಿಕೆ, ಪ್ರಾಮಾಣಿಕ ರಾಜಕಾರಣಿ ಎಂದೇ ಖ್ಯಾತಗೊಂಡಿದ್ದ ಕಾಂಗ್ರೆಸ್ ಮುಖಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆಪ್ತರೆಂದೇ ಗುರುತಿಸಿಕೊಂಡಿದ್ದ ಶಿವನಹಳ್ಳಿ ರಮೇಶ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಜಿಎಂಐಟಿಯಲ್ಲಿ ಅಪಾರ ಬೆಂಬಲಿಗರೊಂದಿಗೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಶಾಸಕ ಬಿ.ಪಿ.ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಸಮ್ಮುಖದಲ್ಲಿ ಕೈ ಕೊಟ್ಟು ಕಮಲ ಮುಡಿದರು.
ವಾಗೀಶ್ ಸ್ವಾಮಿ ಕಾಂಗ್ರೆಸ್ ಸೇರ್ಪಡೆ: ದಾವಣಗೆರೆಯಲ್ಲಿ ರಾಜಕೀಯ ಆಪರೇಷನ್ ಶುರುವಾಗಿದ್ದು, ಅದಲು ಬದಲು ಆಟ ಶುರುವಾಗಿದೆ. ಜಿಎಂಐಟಿಯಲ್ಲಿ ಕಾಂಗ್ರೆಸ್ ಬಿಟ್ಟು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಅವರು ಬಿಜೆಪಿ ಸೇರ್ಪಡೆಯಾದರೆ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರರ ಗೃಹ ಕಚೇರಿಯಲ್ಲಿ ಮಾಯಕೊಂಡ ಬಿಜೆಪಿ ಮುಖಂಡರೂ ಆದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಗೀಶ್ ಸ್ವಾಮಿ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದರು.
ವಾಗೀಶ್ ಸ್ವಾಮಿ ಜೊತೆಗೆ ಮಲೇಬೆನ್ನೂರಿನ ನಾಲ್ವರು ಪುರಸಭೆ ಸದಸ್ಯರು, ಹರಿಹರ ತಾಲೂಕಿನ ಬಿಜೆಪಿ ಮುಖಂಡರು ಸಚಿವರ ಸಮ್ಮುಖದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಮಾಯಕೊಂಡದಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ 2013ರಲ್ಲಿ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ತನ್ನ ಪತ್ನಿ ಪುಷ್ಪಾ ವಾಗೀಶ್ ಸ್ವಾಮಿ ಕಣಕ್ಕಿಳಿಸಿ 33 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುವಂತೆ ಮಾಡಿದ್ದರು. ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ವಿರುದ್ಧ ಪತ್ನಿ ಸ್ಪರ್ಧಿಸಿದ್ದರೂ, ಭಾರೀ ಅಂತರದಲ್ಲಿ ಬಸವಂತಪ್ಪ ಗೆದ್ದು ಶಾಸಕರಾಗಿದ್ದರು. ರಾಷ್ಟ್ರೀಯ ಪಕ್ಷವಾದ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. ಬಸವರಾಜ್ ನಾಯ್ಕ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ಪಕ್ಷೇತರರಾಗಿ ಪತ್ನಿ ಕಣಕ್ಕಿಳಿಸಿ ಇಷ್ಟೊಂದು ಮತ ಗಳಿಕೆಯಲ್ಲಿ ಹೆಸರು ಮಾಡಿದ್ದ ವಾಗೀಶ್ ಸ್ವಾಮಿ ಅವರು ಕ್ಷೇತ್ರಾದ್ಯಂತ ಸಂಚರಿಸಿದ್ದರು. ಈಗ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಒಂದೆಡೆ ಶಿವನಹಳ್ಳಿ ರಮೇಶ್ ಬಿಜೆಪಿ ಸೇರಿದರೆ, ಮತ್ತೊಂದೆಡೆ ಮಾಯಕೊಂಡ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಾಗೀಶ್ ಸ್ವಾಮಿ ಅವರ ಜೊತೆ ಮಲೇಬೆನ್ನೂರು ಪುರಸಭೆಯ ಸದಸ್ಯರು, ಬಿಜೆಪಿ ಮುಖಂಡರು ಕೈ ಹಿಡಿಯುವ ಮೂಲಕ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.
ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿ ಆಯ್ಕೆಯಾಗಿದ್ದ ವಾಗೀಶ್ ಸ್ವಾಮಿ ಅವರು ಮಾಯಕೊಂಡ ಕ್ಷೇತ್ರದಲ್ಲಿ ತನ್ನದೇ ಆದ ಬೆಂಬಲಿಗರನ್ನು ಹೊಂದಿದ್ದಾರೆ. ಈಗ ಬಿಜೆಪಿಗೆ ಪೆಟ್ಟು ಕೊಡಲು ನಿರ್ಧರಿಸಿದ್ದು, ಕಾಂಗ್ರೆಸ್‌ಗೆ ಮತ್ತಷ್ಟು ಉತ್ಸಾಹ ತಂದಿದೆ.
ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಸ್ವೀಕೃತಿಯಾಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ವಾಗೀಶ್ ಸ್ವಾಮಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಆದರೆ, ಅವರ ಪತ್ನಿ ಪುಷ್ಪಾ ಅವರ ಉಮೇದುವಾರಿಕೆ ಪಾಸ್ ಆಗಿತ್ತು. ಈ ಕಾರಣಕ್ಕಾಗಿ ಪಕ್ಷೇತರ ಅಭ್ಯರ್ಥಿ ಪುಷ್ಪ ವಾಗೀಶ್ ಸ್ವಾಮಿ ತೀವ್ರ ಪೈಪೋಟಿ ನೀಡಿದ್ದರು.
ಈ ವೇಳೆ ಮಾತನಾಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಶಾಸಕ ಬಸವಂತಪ್ಪ ಅವರ ಜೊತೆ ಮಾತುಕತೆ ನಡೆಸಿಯೇ ಕಾಂಗ್ರೆಸ್ ಪಕ್ಷಕ್ಕೆ ವಾಗೀಶ್ ಸ್ವಾಮಿ ಅವರನ್ನು ಸೇರ್ಪಡೆ ಮಾಡಿಕೊಂಡಿದ್ದೇವೆ. ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದ ವಿಚಾರ ಮುಗಿದ ವಿಚಾರ. ಈಗ ಪಕ್ಷಕ್ಕೆ ಬಂದಿದ್ದಾರೆ. ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಭಾ ಮಲ್ಲಿಕಾರ್ಜುನ್ ಅವರ ಪರ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.












Click it and Unblock the Notifications