IPS Officers Transferred: ಚುನಾವಣೆ ಹೊತ್ತಲೇ ದಾವಣಗೆರೆ, ವೈಟ್‌ಫೀಲ್ಡ್ ಐಪಿಎಸ್ ಅಧಿಕಾರಿಗಳ ಎತ್ತಂಗಡಿ
ಬೆಂಗಳೂರು, ಏಪ್ರಿಲ್, 23: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲೇ ರಾಜ್ಯ ಸರ್ಕಾರ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರಿನ ವೈಟ್‌ಫೀಲ್ಡ್ ಡಿಸಿಪಿ ಗಿರೀಶ್ ಮತ್ತು ದಾವಣಗೆರೆ ಪೊಲೀಸ್ ಆಯುಕ್ತ ಸಿ.ಬಿ.ರಿಷ್ಯಂತ್ ಇವರಿಬ್ಬರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಇದೀಗ ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗಕ್ಕೆ ಧರ್ಮೇಂದ್ರ ಕುಮಾರ್ ಮೀನಾ ನೂತನ ಡಿಸಿಪಿಯಾಗಿ ನೇಮಕಗೊಂಡಿದ್ದು, ಹಾಗೂ ದಾವಣಗೆರೆ ನೂತನ ನೂತನ ಎಸ್‌ಪಿಯಾಗಿ ಅರುಣ್ ಕೆ. ಎನ್ನುವವರು ನೇಮಕಗೊಂಡಿದ್ದಾರೆ.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಚುನಾವಣೆ ಹೊತ್ತಲ್ಲಿ ವರ್ಗಾವಣೆ ಮಾಡಿರುವುದು ಅನುಮಾನಕ್ಕೂ ಕಾರಣವಾಗಿದೆ. ಇದೀಗ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತರಬೇತಿ ಪ್ರಾಂಶುಪಾಲರಾಗಿದ್ದ ಡಾ.ಅರುಣ್ ಅವರನ್ನು ದಾವಣಗೆರೆಯ ನೂತನ ಎಸ್‌ಪಿಯಾಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ರಿಷ್ಯಂತ್ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಯಾವ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ದಾವಣಗೆರೆ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಸಿ.ಬಿ. ರಿಷ್ಯಂತ್ ಅವರು ಮರಳು ಮಾಫಿಯಾ, ಅಕ್ಕಿ ಮಾಫಿಯಾ, ಕಾನೂನು ಮತ್ತು ಸುವ್ಯವಸ್ಥೆ ಕುರಿತಂತೆ ಬಿಗಿಯಾದ ಕ್ರಮ ತೆಗೆದುಕೊಂಡಿದ್ದರು. ಜೊತೆಗೆ ಅವರು ಎಸ್ಪಿಯಾಗಿ ಬಂದ ಬಳಿಕ ರೌಡಿ ಚಟುವಟಿಕೆಗಳಿಗೂ ಕಡಿವಾಣ ಬಿದ್ದಿತ್ತು.
ಜಿಲ್ಲೆಯಲ್ಲಿ ಉತ್ತಮ ಹೆಸರು ಮಾಡಿದ್ದ ರಿಷ್ಯಂತ್ ಅವರು ಸಾಕಷ್ಟು ಅಪರಾಧ ಪ್ರಕರಣಗಳನ್ನು ಭೇದಿಸಿದ್ದರು. ನಕಲಿ ಚಿನ್ನ ಮಾರಾಟ, ವಂಚನೆ, ಸೈಬರ್ ಕ್ರೈಂ, ಅಪರಾಧ ಕೃತ್ಯಗಳ ಆರೋಪಿಗಳ ಪತ್ತೆ ಹಚ್ಚುವಲ್ಲಿ ದಿಟ್ಟ ಕ್ರಮಗಳನ್ನು ಕೂಡ ಕೈಗೊಂಡಿದ್ದರು. ಭತ್ತ, ಜೋಳ ಖರೀದಿಸಿ ವಂಚಿಸಿದ್ದವರ ಹೆಡೆಮುರಿ ಕಟ್ಟಿ ಹಣ ವಾಪಸ್ ನೀಡುವಂತೆ ಮಾಡುವ ಮೂಳಕ ರೈತರಿಂದ ಪ್ರಶಂಸೆಗೂ ಪಾತ್ರರಾಗಿದ್ದರು.
ಆದರೆ ಇದೀಗವ ಚುನಾವಣೆ ಸಮಯದಲ್ಲಿ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ. ಜೊತೆಗೆ ಕಳೆದ ತಿಂಗಳು ಕುಕ್ಕರ್, ಸೀರೆ ಸೇರಿದಂತೆ ಅಡುಗೆ ಉಪಕರಣಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್‌ನ ಹಿರಿಯ ಶಾಸಕ
ಶಾಮನೂರು ಶಿವಶಂಕರಪ್ಪ ಹಾಗೂ ಪುತ್ರ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಆಗ ಪತ್ರಿಕಾಗೋಷ್ಠಿಯಲ್ಲಿ ಇಬ್ಬರ ಹೆಸರನ್ನು ಸಿ.ಬಿ.ರಿಷ್ಯಂತ್ ಅವರು ಹೇಳಿದ್ದರು. ಒಟ್ಟಿನಲ್ಲಿ ದಿಢೀರ್ ವರ್ಗಾವಣೆ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಜೊತೆಗೆ ಯಾವುದೇ ಜಾಗ ತೋರಿಸದೇ ಇರುವುದು ಮತ್ತಷ್ಟು ಅನುಮಾನ ಹೆಚ್ಚಾಗಲು ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಶಾಸಕ ಮುನಿರತ್ನ ಅವರ ಅಳಿಯ ಆಗಿರುವ ಸಿ. ಬಿ. ರಿಷ್ಯಂತ್ ಅವರಿಗೆ ಈ ಕಾರಣದಿಂದಲೂ ವರ್ಗಾವಣೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಚುನಾವಣೆ ಹೊತ್ತಲ್ಲಿ ಬಿಜೆಪಿ ಪರ ಕೆಲಸ ಮಾಡುತ್ತಾರೆ ಎಂಬ ಕಾರಣ ನೀಡಿ ವರ್ಗಾವಣೆ ಮಾಡಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications