ದಾವಣಗೆರೆಯಲ್ಲಿ ಖತರ್ನಾಕ್ ಕಳ್ಳನ ಬಂಧನ: ವಜ್ರ ಸೇರಿ 34 ಲಕ್ಷ ರೂ ಮೌಲ್ಯದ ವಸ್ತು ಜಪ್ತಿ
ದಾವಣಗೆರೆ, ಆಗಸ್ಟ್ 29: ದಾವಣಗೆರೆ ಜಿಲ್ಲೆಯ ಹಲವು ಭಾಗಗಳಲ್ಲಿ ಮನೆಗಳ್ಳತನ,ಚಿನ್ನಾಭರಣ ಮಾತ್ರವಲ್ಲದೇ ಅಮೆರಿಕನ್ ಡಾಲರ್‌ಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸರು ಸೆರೆ ಹಿಡಿದಿದ್ದಾರೆ.
ಮೂಲತಃ ತಮಿಳುನಾಡಿನ ಕೃಷ್ಣಗಿರಿ ತಾಲೂಕಿನ ರಾಣೀಪೇಟೆ ಹಾಗೂ ಬೆಂಗಳೂರಿನ ಉತ್ತರಹಳ್ಳಿಯ ಭುವನೇಶ್ವರಿ ನಗರದ ಮಂಜುನಾಥ ಅಲಿಯಾಸ್ ಕಲ್ಕೇರೆ ಮಂಜ ಅಲಿಯಾಸ್ ಮಂಜ (43) ಬಂಧಿತ ಆರೋಪಿ.

ಘಟನೆ ಹಿನ್ನೆಲೆ ಏನು..?
ಕಳೆದ ಆಗಸ್ಟ್ 20ರಂದು ವಿದ್ಯಾನಗರದ ಕೆನರಾ ಬ್ಯಾಂಕ್ ಎದುರು ವಾಸವಿದ್ದ 63 ವರ್ಷದ ಜಿ. ಹೆಚ್. ಶಂಕರ್ ಎನ್ನುವವರು ವಿದ್ಯಾನಗರ ಪೊಲೀಸ್ ಠಾಣೆಗೆ ಹಾಜರಾಗಿ ಮನೆಯಲ್ಲಿ ಕಳ್ಳತನ ಆಗಿರುವ ಕುರಿತಂತೆ ದೂರು ದಾಖಲಿಸಿದ್ದರು. ಆಗಸ್ಟ್ 17ರಂದು ಮಧ್ಯಾಹ್ನ 2 ಗಂಟೆಗೆ ನಮ್ಮ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಬೆಂಗಳೂರಿಗೆ ಹೋಗಿದ್ದೆವು. ಆದರೆ ಆಗಸ್ಟ್ 20 ರಂದು ಮನೆಗೆ ವಾಪಸ್ ಬಂದಾಗ ಯಾರೋ ಕಳ್ಳರು ಮನೆ ಬಾಗಿಲು ಒಡೆದು ಮನೆಯಲ್ಲಿದ್ದ 262 ಗ್ರಾಂ ಬಂಗಾರ, 1,500 ಗ್ರಾಂ ಬೆಳ್ಳಿ ಆಭರಣಗಳು ಮತ್ತು 1,20,000 ರೂಪಾಯಿ ನಗದು ಒಂದು ಸಾವಿರ ಅಮೆರಿಕನ್ ಡಾಲರ್ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪ್ರಭಾರದಲ್ಲಿದ್ದ ಪ್ರೊಫೆಷನಲ್ ಡಿವೈಎಸ್ಲಿ ಯಶವಂತ್ ಕುಮಾರ್, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವು ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಬಂಧಿತನಿಂದ ಕಳ್ಳತನ ಮಾಡಿದ್ದ ಸುಮಾರು 15,63,600 ರೂಪಾಯಿ ಮೌಲ್ಯದ 210 ಗ್ರಾಂ ಡೈಮಂಡ್ ಸಮೇತ ಬಂಗಾರದ ಆಭರಣಗಳು ಮತ್ತು ಬಂಗಾರದ ಗಟ್ಟಿ, 47 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳು, 37,927 ರೂಪಾಯಿ ಬೆಲೆ ಬಾಳುವ 460 ಅಮೆರಿಕನ್ ಡಾಲರ್, ಕಳ್ಳತನ ಮಾಡಿದ್ದ 13,50,000 ರೂ. ಬೆಲೆ ಬಾಳುವ ಕೆ.ಎ- 17 ಎಂ.ಎ - 1466 ನಂಬರ್ ನ ಬ್ರೀಜ್ಜಾ ಕಾರ್, ಮತ್ತು ಕೃತ್ಯಕ್ಕೆ ಬಳಿಸಿದ್ದ 4 ಲಕ್ಷ ರೂಪಾಯಿ ಮೌಲ್ಯದ ಕೆ.ಎ-51 ಪಿ- 5250 ಸ್ವಿಫ್ಟ್ ಡೀಜೈರ್ ಕಾರು ವಶಕ್ಕೆ ಪಡೆಯಲಾಗಿದೆ.
ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 3 ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ಪ್ರಕರಣಗಳ ಆರೋಪಿ ಮತ್ತು ವಸ್ತುಗಳನ್ನು ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪತ್ತೆ ಮಾಡಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿಯಾದ ಆನಂದ ಮುಂದಲಮನಿ, ಯೋಗೀಶ್ ನಾಯ್ಕ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಗೋಪಿನಾಥ ಬಿ ನಾಯ್ಕ, ರಾಘವೇಂದ್ರ ಅವರನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.












Click it and Unblock the Notifications