ತೋರಣಗಟ್ಟೆ: ವೇದ ಸಿನಿಮಾದ ಜುಂಜಪ್ಪ ಹಾಡು ಹೇಳುತ್ತಾ ಮಕ್ಕಳ ಜೊತೆ ಹೆಜ್ಜೆ ಹಾಕಿದ ಸಿಂಗರ್ ಮೋಹನ್ ಕುಮಾರ್
ಜಗಳೂರು, ಸೆಪ್ಟೆಂಬರ್, 09: ನಟ ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರದಲ್ಲಿ ಜುಂಜಪ್ಪ ಹಾಡು ಹಾಡಿದ ಶಿರಾ ತಾಲೂಕಿನಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯದ ಪ್ರತಿಭೆ ಮೋಹನ್ ಕುಮಾರ್ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು, ಜುಂಜಪ್ಪ ಹಾಡು ಹೇಳುತ್ತಾ ಮಕ್ಕಳ ಜೊತೆಗೆ ವೇದಿಕೆ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದರು.
ಶಿವರಾಜ್‌ಕುಮಾರ್ ನಟನೆಯ ವೇದ ಸಿನಿಮಾದಲ್ಲಿನ ಜುಂಜಪ್ಪ ಹಾಡು ಬರೀ ರಾಜ್ಯ ಅಲ್ಲದೆ ದೇಶದೆಲ್ಲೆಡೆ ಸದ್ದು ಮಾಡಿತ್ತು. ಅಲ್ಲದೆ ತಾವು ಹಾಡಿದ ಜುಂಜಪ್ಪ ಹಾಡಿಗೆ ಶಿವರಾಜ್‌ಕುಮಾರ್ ಜೊತೆ ಬುಡಕಟ್ಟು ಸಮುದಾಯದ ಮೋಹನ್ ಕುಮಾರ್ ಹೆಜ್ಜೆ ಕೂಡ ಹಾಕಿದ್ದಾರೆ. ಆಗಿನಿಂದ ಮೋಹನ್ ಕುಮಾರ್ ಅವರನ್ನು ಜೀ ಕನ್ನಡ ಸೇರಿದಂತೆ ಹಲವು ಸುದ್ದಿ ವಾಹಿನಿಗಳು ಸಂದರ್ಶನಕ್ಕೆ ಆಹ್ವಾನಿಸುತ್ತಲೇ ಇವೆ.

ಅದೇ ರೀತಿ ನಿನ್ನೆ (ಸೆಪ್ಟೆಂಬರ್ 08) ಪವಾಡ ಪುರುಷ ಶ್ರೀ ಮೆಲ್ಲೇಶ್ವರ ಹಾಗೂ ಶ್ರೀ ಕಾಟಲಿಂಗೇಶ್ವರ ಬಳಗದವರು ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೋರಣಗಟ್ಟೆಗೆ ಮೋಹನ್ ಕುಮಾರ್ ಅವರನ್ನು ಭರ್ಜರಿ ಸ್ವಾಗತದೊಂದಿದೆ ಬರಮಾಡಿಕೊಳ್ಳಲಾಯಿತು.
ನಂತರ ಮಾತನಾಡಿದ ಮೋಹನ್ ಕುಮಾರ್ ಅವರು, ತೋರಣಗಟ್ಟೆ ಗ್ರಾಮದಲ್ಲಿ ಜಾನಪದ ಕಲೆಗೆ ಬಡತನವಿಲ್ಲ. ಆದರೆ ಮಕ್ಕಳು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ಅವರಿಗೆ ಪ್ರಮುಖವಾಗಿ ಪ್ರೋತ್ಸಾಹ ಬೇಕಿದೆ ಅಷ್ಟೇ. ಸಾಮಾನ್ಯವಾಗಿ ಪ್ರತಿಭೆಗಳ ಕಾಲು ಎಳೆಯುವವರು ಇದ್ದೇ ಇರುತ್ತಾರೆ. ಆಗಂತ ಸುಮ್ಮನೆ ಕುಳಿತುಕೊಳ್ಳಬಾರದು. ಯಾವುದೇ ಅಡೆತಡೆಗಳು ಬಂದರೂ ನಮ್ಮ ಒಳ್ಳೆಯದ್ದಕ್ಕೆ ಆಗಿರುತ್ತದೆ ಎನ್ನುವ ಮೌಲ್ಯಯುತವಾದ ಸಂದೇಶವನ್ನು ಸಾರಿದರು.
ನಾವು ಹಳ್ಳಿಗರು, ಬುಡಕಟ್ಟು ಸಮುದಾಯದವರು ಅಂತಾ ಹೀಯಾಳಿಸುವವರು ಇದ್ದೇ ಇರುತ್ತಾರೆ. ಅವುಗಳಿಗೆಲ್ಲ ಬೆಲೆ ಕೊಡದೇ ನಮ್ಮಲ್ಲಿನ ಕಲೆಗೆ ಬೆಲೆ ಕೊಟ್ಟು ಮುಂದೆ ಸಾಗುವುದೇ ಪ್ರತಿಭಾವಂತರ ಲಕ್ಷಣ ಎಂದು ಕಿವಿಮಾತು ಹೇಳಿದರು.












Click it and Unblock the Notifications