ಚನ್ನಗಿರಿಯಲ್ಲಿ ಮೂರು ಪಕ್ಷಕ್ಕೆ ಮಾಡಾಳ್ ಮಲ್ಲಿಕಾರ್ಜುನ್ ಸವಾಲು!
ದಾವಣಗೆರೆ, ಏಪ್ರಿಲ್ 30; ಅಡಿಕೆ ನಾಡು ಎಂದೇ ಖ್ಯಾತಿಗಳಿಸಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಕ್ಷೇತ್ರದ ರಾಜಕೀಯ ಬದ್ಧ ವೈರಿಗಳಾದ ಕಾಂಗ್ರೆಸ್‌ನ ವಡ್ನಾಳ್ ರಾಜಣ್ಣ ಮತ್ತು ಬಿಜೆಪಿಯ ಮಾಡಾಳ್ ವಿರೂಪಾಕ್ಷಪ್ಪ ಇಬ್ಬರೂ ಸಹ ಕಣದಲ್ಲಿ ಇಲ್ಲ. ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಸ್ವಾಭಿಮಾನ ಪಣಕ್ಕಿಟ್ಟು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಚನ್ನಗಿರಿ ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಗೆ ಬಿಜೆಪಿಯಿಂದ ಎಚ್. ಎಸ್. ಶಿವಕುಮಾರ್, ಕಾಂಗ್ರೆಸ್‌ನಿಂದ ಬಸವರಾಜ ಶಿವಗಂಗಾ, ಜೆಡಿಎಸ್‌ನಿಂದ ತೇಜಸ್ವಿ ಪಟೇಲ್ ಅಭ್ಯರ್ಥಿಗಳು. ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಮೂರು ಪಕ್ಷಗಳಿಗೆ ಸವಾಲು ಒಡ್ಡಿದ್ದಾರೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಯಾರಿಗೆ ಗೆಲುವು? ಎಂದು ಕಾದು ನೋಡಬೇಕಿದೆ.

ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳ ಮೊದಲು ಚನ್ನಗಿರಿ ದೇಶಾದ್ಯಂತ ಸುದ್ದಿಯಾಯಿತು. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ, ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ 40 ಲಕ್ಷ ಲಂಚ ಪಡೆಯುವಾಗ ಶಾಸಕರ ಖಾಸಗಿ ಕಚೇರಿಯಲ್ಲಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದರು. ಈ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಸಹ ಅರೋಪಿಯಾಗಿ ಬಂಧನಕ್ಕೊಳಗಾದರು. ಜಾಮೀನಿನ ಮೇಲೆ ಬಿಡುಗಡೆಗೊಂಡರೂ ಈ ಬಾರಿಯ ಚುನಾವಣೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ.
ಕಮಲ ಅರಳಿಸಿದ್ದ ನಾಯಕ; 2004ರಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣೆ ಎದುರಿಸಿದರು, ಸೋತರು. 2008ರಲ್ಲಿ ಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾದರು. ಆದರೆ ಬಿ. ಎಸ್. ಯಡಿಯೂರಪ್ಪ ಬೆಂಬಲಿಗರಾದ ಅವರು 2013ರಲ್ಲಿ ಕೆಜೆಪಿ ಜೊತೆ ಹೋಗಿ ಚನ್ನಗಿರಿಯಲ್ಲಿ ಕಾಂಗ್ರೆಸ್‌ನ ವಡ್ನಾಳ್ ರಾಜಣ್ಣ ವಿರುದ್ಧ ಸೋತರು. 2018ರಲ್ಲಿ ಮತ್ತೆ ಗೆದ್ದರು. ಈ ಬಾರಿಯ ಚುನಾವಣೆಯಲ್ಲಿ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಲಂಚ ಪ್ರಕರಣದ ಕಾರಣ ಮಾಡಾಳ್ ವಿರೂಪಾಕ್ಷಪ್ಪಗೆ ಬಿಜೆಪಿ ಟಿಕೆಟ್ ಕೈತಪ್ಪಿತು. ಆದರೆ ಪುತ್ರ ಮಾಡಾಳ್ ಮಲ್ಲಿಕಾರ್ಜುನ್‌ಗೆ ಪಕ್ಷ ಟಿಕೆಟ್ ನೀಡಲಿದೆ ಎಂದು ಅಂದಾಜಿಸಲಾಗಿತ್ತು. ಬಿಜೆಪಿ ತುಮ್ಕೋಸ್‌ನ ಮಾಜಿ ಅಧ್ಯಕ್ಷ ಎಚ್. ಎಸ್. ಶಿವಕುಮಾರ್‌ಗೆ ಟಿಕೆಟ್ ನೀಡಿತು. ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡು ಪ್ರಚಾರ ಆರಂಭಿಸಿದ್ದ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ವಡ್ನಾಳ್ ರಾಜಣ್ಣ ಸ್ಪರ್ಧೆ ಇಲ್ಲ; ಬಿಜೆಪಿಯಿಂದಲೇ ರಾಜಕಾರಣಕ್ಕೆ ಬಂದಿದ್ದ ವಡ್ನಾಳ್ ರಾಜಣ್ಣ 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜೆ. ಎಚ್. ಪಟೇಲ್ ಸೋಲಿಸಿದ್ದರು. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು. 2008ರಲ್ಲಿ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಸೋತರು. ಆದರೆ 2013ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆದ್ದರು. 2018ರಲ್ಲಿ ಮತ್ತೆ ಸೋಲು ಕಂಡರು. ಆದರೆ ವಯಸ್ಸಿನ ಕಾರಣ ಈ ಬಾರಿಯ ಚುನಾವಣೆಯಿಂದ ದೂರ ಉಳಿದಿದ್ದಾರೆ. ನಿರೀಕ್ಷೆಯಂತೆಯೇ ಈ ಬಾರಿಯ ಚುನಾವಣೆ ಟಿಕೆಟ್ ಜಿಲ್ಲಾ ಕಿಸಾಸ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಸವರಾಜ ಶಿವಗಂಗಾಗೆ ಸಿಕ್ಕಿದೆ.
ಜೆಡಿಎಸ್ ಚನ್ನಗಿರಿ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡಿದೆ ಹೊಸ ತಂತ್ರ ಪ್ರಯೋಗ ಮಾಡಿದೆ. ಕಾಂಗ್ರೆಸ್‌ನಲ್ಲಿದ್ದ ಎಂ.ಯೋಗೇಶ್ ಜೆಡಿಎಸ್ ಸೇರಿದ್ದರು. ಅವರು ಅಭ್ಯರ್ಥಿ ಎಂದು ಜೆಡಿಎಸ್ ಪಕ್ಷ ಘೋಷಣೆ ಮಾಡಿತ್ತು. ಆದರೆ ಕಾಂಗ್ರೆಸ್ ಟಿಕೆಟ್ ವಂಚಿತರಾದ ತೇಜಸ್ವಿ ಪಟೇಲ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದಂತೆ ಎಚ್. ಡಿ. ಕುಮಾರಸ್ವಾಮಿ ಭೇಟಿ ಮಾಡಿದರು. ಬಳಿಕ ಪಕ್ಷ ಸೇರಿ ಅವರೇ ಅಭ್ಯರ್ಥಿಯಾಗಿದ್ದಾರೆ.
ಪಡೆದ ಮತಗಳು; ಚನ್ನಗಿರಿ ಕ್ಷೇತ್ರದಲ್ಲಿ 2008ರಲ್ಲಿ ಬಿಜೆಪಿಯ ಮಾಡಾಳ್ ವಿರೂಪಾಕ್ಷಪ್ಪ 39,526 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ವಡ್ನಾಳ್ ರಾಜಣ್ಣ 38,533 ಮತಗಳನ್ನು ಪಡೆದು ಸೋಲು ಕಂಡಿದ್ದರು. ಜೆಡಿಎಸ್‌ನ ಹೂಡಿಗೆರೆ ರಮೇಶ್ 21,499 ಮತಗಳನ್ನು ಪಡೆದಿದ್ದರು.
2013ರ ಚುನಾವಣೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 51,582 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ವಡ್ನಾಳ್ ರಾಜಣ್ಣ 53,355 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್‌ನ ಹೂಡಿಗೆರೆ ರಮೇಶ್ 28,900 ಮತ ಮತ್ತು ಬಿಜೆಪಿಯ ಎಚ್. ಎಸ್. ಶಿವಕುಮಾರ್ 4,526 ಮತಗಳನ್ನು ಪಡೆದಿದ್ದರು.
2018ರ ಚುನಾವಣೆಯಲ್ಲಿ ಬಿಜೆಪಿಯ ಮಾಡಾಳ್ ವಿರೂಪಾಕ್ಷಪ್ಪ 73,794 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್‌ನ ವಡ್ನಾಳ್ ರಾಜಣ್ಣ 48,014 ಮತಗಳನ್ನು ಪಡೆದು ಸೋಲು ಕಂಡಿದ್ದರು. ಜೆಡಿಎಸ್‌ನ ಡಿ. ರಮೇಶ್ 29,106 ಮತಗಳನ್ನು ಪಡೆದಿದ್ದರು. ಜೆಡಿಯುನ ಮಹಿಮಾ ಪಟೇಲ್ 3,954 ಮತಗಳನ್ನು ಪಡೆದಿದ್ದರು.












Click it and Unblock the Notifications