ಕಾನೂನು ಹಿಂದೂಗಳಿಗೆ ಮಾತ್ರವಾ, ಮುಸ್ಲಿಮರಿಗೆ ಇಲ್ವಾ: ಮುತಾಲಿಕ್
ದಾವಣಗೆರೆ, ಮಾರ್ಚ್ 11: ದಾವಣಗೆರೆಯ ನಗರ ದೇವತೆ ದುರ್ಗಾಂಬಿಕಾ ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಾಣಿ ಬಲಿ ತಡೆಯಲು ಮುಂದಾಗಿದ್ದು ಸ್ವಾಗತಾರ್ಹ. ಆದರೆ ಕೇವಲ ಹಿಂದೂ ಸಂಪ್ರದಾಯಗಳ ಜಾತ್ರೆಗಳಿಗೆ, ಸಂಸ್ಕೃತಿಗೆ ಕಡಿವಾಣ ಹಾಕುವುದಲ್ಲ, ಅದೇ ರೀತಿ ಬಕ್ರೀದ್ ಹಬ್ಬದಲ್ಲಿಯೂ ಪ್ರಾಣಿ ಬಲಿ ನಡೆಯದಂತೆ ತಡೆಗಟ್ಟಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ""ದುಗ್ಗಮ್ಮನ ಜಾತ್ರೆಯಲ್ಲಿ ಕೋಣ ಬಲಿ ನೀಡದಂತೆ ರಾತ್ರಿ ಇಡೀ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ, ಆದರೆ ಮುಸ್ಲಿಮರ ಹಬ್ಬಗಳಲ್ಲಿ ಒಂಟೆಗಳನ್ನು ಹಾಗೂ ಹಸುಗಳ ಮಾರಣಹೋಮ ಮಾಡುತ್ತಾರೆ. ಆಗ ಜಿಲ್ಲಾಡಳಿತ ಎಲ್ಲಿ ಹೋಗಿರುತ್ತೆ. ಹಿಂದೂಗಳಿಗೆ ಒಂದು ನ್ಯಾಯ, ಮುಸ್ಲಿಮರಿಗೆ ಒಂದು ನ್ಯಾಯನಾ?'' ಎಂದು ಪ್ರಶ್ನಿಸಿದರು.
""ಹಿಂದೂಗಳು ಶಾಂತಿ ಪ್ರಿಯರು ಎಂದು ಅವರ ಮೇಲೆ ದೌರ್ಜನ್ಯ ಮಾಡ್ತಿರಾ, ಜಿಲ್ಲಾಧಿಕಾರಿಗಳು ಕೇವಲ ಹಿಂದೂ ಸಂಪ್ರದಾಯದ ಮೇಲೆ ಮಾತ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ. ಈಗ ಕೋಣ ಬಲಿ ನಿಷೇಧ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ಒಂಟೆ, ಹಸುಗಳನ್ನು ಬಲಿ ಕೊಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಅಲ್ಲಿ ನಾವು ನಿಲ್ಲಬೇಕಾಗುತ್ತೆ. ಆಗ ಬಂದು ನೀವು ಕೋಮುಗಲಭೆ ಎಂದರೆ ನಾವು ಸುಮ್ಮನಿರಲ್ಲ ಎಂದರು.

ನಗರದಲ್ಲಿ ನೂರಾರು ಕಸಾಯಿಖಾನೆಗಳು ಅಕ್ರಮವಾಗಿ ನಡೆಯುತ್ತಿವೆ. ಅವುಗಳನ್ನು ತೆರವುಗೊಳಿಸಬೇಕು. ಗೋ ಕಳ್ಳತನ, ಗೋಹತ್ಯೆ ನಿರಂತರವಾಗಿದೆ. ಇದನ್ನು ತಡೆಯಬೇಕು. ಹಿಂದೂ ಪರಂಪರೆ, ಸಂಸ್ಕೃತಿಗೆ ತಾರತಮ್ಯ ಮಾಡಬಾರದು. ಕಾನೂನು ರೀತಿ ಬಕ್ರೀದ್ ನಲ್ಲೂ ಸಹ ಪ್ರಾಣಿ ಬಲಿ ನಡೆಯದಂತೆ ತಡೆಗಟ್ಟಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತವೇ ಕೋಮುಗಲಭೆಗೆ ಪ್ರಚೋದನೆ ನೀಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾನೂನು ಎರಡು ರೀತಿ ಇರುವುದಿಲ್ಲ, ಎಲ್ಲರಿಗೂ ಒಂದೇ ಕಾನೂನು ಪಾಲನೆಯಾಗಬೇಕು. ಮುಂದಿನ ದಿನಗಳಲ್ಲಿ ಅಕ್ರಮ ಕಸಾಯಿಖಾನೆ ಮುಚ್ಚುವವರೆಗೂ ನಮ್ಮ ಹೋರಾಟ ನಡೆಯುತ್ತಲೇ ಇರುತ್ತದೆ ಎಂದು ಕಿಡಿಕಾರಿದರು.
ದೆಹಲಿ ಗಲಭೆ ವ್ಯವಸ್ಥಿತವಾಗಿ ನಡೆದಿದೆ. ಮುಸ್ಲಿಂ ಸಂಘಟನೆಗಳು ಕಾಂಗ್ರೆಸ್, ಎಎಪಿ ಸೇರಿ ಮಾಡಿದ ಗಲಭೆ ಅದು. ನಮ್ಮ ದೇಶ ಕೀರ್ತಿ ಹಾಳು ಮಾಡುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಟ್ರಂಪ್ ಬಂದಾಗ ಗಲಭೆಯಾದರೆ ವಿಶ್ವಾದ್ಯಂತ ಸುದ್ದಿಯಾಗುತ್ತೆ ಎಂದು ಗಲಭೆ ಮಾಡಿಸಿದ್ದಾರೆ ಎಂದು ತಿಳಿಸಿದರು.
ಮೋದಿಯನ್ನು ಟಾರ್ಗೆಟ್ ಮಾಡಿ ಈ ಗಲಭೆ ಮಾಡಿಸಿದ್ದಾರೆ, ಇಡೀ ಜಗತ್ತಿನ ಮುಂದೆ ಭಾರತವನ್ನು, ಭಾರತದ ಪ್ರಧಾನಿಯನ್ನು ಅವಮಾನ ಮಾಡಲು ಈ ಗಲಭೆಯನ್ನು ವ್ಯವಸ್ಥಿತವಾಗಿ ಮಾಡಿದ್ದಾರೆ ಎಂದರು.
ದೆಹಲಿ ಗಲಭೆಗೆ ಪ್ರೋತ್ಸಾಹ ನೀಡಿದವರು, ಕಾರಣರಾದವರಿಗೆ ಶಿಕ್ಷೆಯಾಗಲೇಬೇಕು, ಅಲ್ಲದೇ ಕಾಶ್ಮೀರಿ ಬಾಂಬರ್ ದಂಪತಿಗಳಿಗೆ ಅಲ್ ಖೈದಾ, ಕೊರಿಯಾದಿಂದ ಹಣ ಬರುತ್ತಿತ್ತು ಎಂದು ತಿಳಿದು ಬಂದಿದೆ, ಸಿಎಎ, ಎನ್ಆರ್ಸಿಯಿಂದ ಈ ದೇಶದ ಮುಸ್ಲಿಂಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಗಲಾಟೆ, ಗಲಭೆಗೆ ಕುಮ್ಮಕ್ಕು ಕೊಡುತ್ತಿರುವವರಿಗೆ ನೀವು ಬಲಿಯಾಗಬೇಡಿ ಎಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.












Click it and Unblock the Notifications