ಸಿಎಎ ಬಗ್ಗೆ ಜಾಗೃತಿಗೆ ಹೊರಟ ಬಿಜೆಪಿಗರನ್ನೇ ತರಾಟೆ ತೆಗೆದುಕೊಂಡ ಜನ
ದಾವಣಗೆರೆ, ಜನವರಿ 04: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸಾಕಷ್ಟು ಪ್ರತಿಭಟನೆಗಳು ನಡೆದಿವೆ, ನಡೆಯುತ್ತಲೂ ಇವೆ. ಇದೇ ಕಾರಣದಿಂದಾಗಿ ಈ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಬಂದಿದ್ದ ಬಿಜೆಪಿಗರನ್ನೇ ಜನರು ತರಾಟೆ ತೆಗೆದುಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಬಿಜೆಪಿಯ ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿನಿತ್ಯ ನಗರದ ಒಂದೊಂದು ಬಡಾವಣೆಗಳಿಗೆ ಭೇಟಿ ನೀಡಿ ಪೌರತ್ವ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದರು. ಅದೇ ರೀತಿ ಇಂದು ಕೂಡ ನಗರದ ಎಸ್ ಒಜಿ ಕಾಲೋನಿಗೆ ಬಂದಿದ್ದಾರೆ. ಆಗ ಕೆಲ ಸ್ಥಳೀಯರು, "ನಮ್ಮ ಏರಿಯಾದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇಲ್ಲ" ಎಂದು ತರಾಟೆಗೆ ತೆಗೆದುಕೊಂಡರು.

"ನಾವೆಲ್ಲ ಈ ಕಾಲೋನಿಯಲ್ಲಿ ಒಗ್ಗಟ್ಟಾಗಿ ಇದ್ದೇವೆ. ನೀವು ಬಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ" ಎಂದು ಏರು ಧ್ವನಿಯಲ್ಲಿ ಜನರು ತರಾಟೆ ತೆಗೆದುಕೊಂಡರು. ಬಿಜೆಪಿ ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಹಾಗೂ ಬೆಂಬಲಿಗರು ಮನೆ ಮನೆಗೆ ತೆರಳಿ, ಈ ಕಾಯ್ದೆ ಬಗ್ಗೆ ಜನರಿಗೆ ತಿಳಿಸುವುದೇ ನಮ್ಮ ಕೆಲಸ. ಇದರಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಹೇಳಿದರೂ ಜನರು ನರೇಂದ್ರ ಮೋದಿ ಅವರಿಗೆ ಧಿಕ್ಕಾರ ಘೋಷಣೆ ಕೂಗಿ ವಿರೋಧಿಸಿದರು. ಶಿವಯೋಗಿ ಸ್ವಾಮಿ ಹಾಗೂ ಬೆಂಬಲಿಗರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೆರಳಿದರು.












Click it and Unblock the Notifications