ದಾವಣಗೆರೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಮಂಜೂರು
ದಾವಣಗೆರೆ, ಫೆಬ್ರವರಿ 27; ದಾವಣಗೆರೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಛೇರಿಯನ್ನು ಹೊಸದಾಗಿ ಮಂಜೂರು ಮಾಡಲಾಗಿದೆ. ಇದರಿಂದಾಗಿ ಜನರು ಚಿತ್ರದುರ್ಗ ಹಾಗೂ ಶಿವಮೊಗ್ಗಕ್ಕೆ ಸಂಚಾರ ಮಾಡುವುದು ಇನ್ನು ಮುಂದೆ ತಪ್ಪಲಿದೆ.
" ದಾವಣಗೆರೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಛೇರಿಯನ್ನು ಹೊಸದಾಗಿ ರಚಿಸಿ ಮಂಜೂರಾತಿ ಮಾಡಿ ಕೇಂದ್ರ ಸಂವಹನ ಸಚಿವಾಲಯ, ಅಂಚೆ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ ಆದೇಶ ಹೊರಡಿಸಿದ್ದಾರೆ" ಎಂದು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಟ್ಟ ನಂತರ ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಅಂಚೆ ಅಧೀಕ್ಷರ ವಿಭಾಗ ಕಛೇರಿ ಬೇಕು ಎಂದು ಬೇಡಿಕೆ ಇಡಲಾಗಿತ್ತು. ಹಲವಾರು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.

ಆದರೆ ಕಳೆದ ನಾಲ್ಕೈದು ವರ್ಷಗಳಲ್ಲಿ ಸಂವಂಹನ ಸಚಿವಾಲಯ ಇಲಾಖೆಗೆ ಆರ್ಥಿಕ ಹೊರೆಯಾಗುವಂತಹ ಯಾವುದೇ ಹೊಸ ಕಛೇರಿಗಳನ್ನು ತೆರೆಯಲು ಆತುರದ ನಿರ್ಧಾರ ಕೈಗೊಂಡಿರಲಿಲ್ಲ. ಇದರಿಂದಾಗಿ ಕಚೇರಿ ಮಂಜೂರಾತಿ ವಿಳಂಬವಾಗಿತ್ತು.
ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಛೇರಿ ಅಗತ್ಯ ಇದೆ ಎಂದು ಸಂಸದರು ಹಲವಾರು ಬಾರಿ ಸಂಸತ್ತಿನ ಶೂನ್ಯ ವೇಳೆಯಲ್ಲಿ ಮಾತನಾಡಿದ್ದರು ಹಾಗೂ ಖುದ್ದು ಸಚಿವರನ್ನು ಭೇಟಿ ಮಾಡಿ ಒತ್ತಾಯ ಮಾಡುವ ಮೂಲಕ ಸಾಕಷ್ಟು ಒತ್ತಡ ಹೇರಿದ್ದರು.
ಇದೀಗ ಸಂವಹನ ಸಚಿವಾಲಯದ ಸಚಿವರಾದ ಅಶ್ವಿನಿ ವೈಷ್ಣವ್ ಸೂಚನೆ ಮೇರೆಗೆ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆಯನ್ನು ಬೇರ್ಪಡಿಸಿ ದಾವಣಗೆರೆಗೆ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಛೇರಿಯನ್ನು ಹೊಸದಾಗಿ ರಚನೆ ಮಾಡಲಾಗಿದೆ.
ಈ ಮೊದಲು ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳು ಶಿವಮೊಗ್ಗ ಅಂಚೆ ಅಧೀಕ್ಷಕರ ಕಛೇರಿ ವ್ಯಾಪ್ತಿಗೆ ಒಳಪಟ್ಟಿದ್ದವು. ಉಳಿದಂತೆ ದಾವಣಗೆರೆ, ಹರಿಹರ, ಜಗಳೂರು, ತಾಲ್ಲೂಕುಗಳು ಚಿತ್ರದುರ್ಗ ಅಂಚೆ ಅಧೀಕ್ಷಕರ ಕಛೇರಿ ವ್ಯಾಪ್ತಿಗೆ ಒಳಪಟ್ಟಿದ್ದವು.
ಈಗ ದಾವಣಗೆರೆ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳನ್ನು ಒಳಗೊಂಡು ದಾವಣಗೆರೆ ಅಂಚೆ ಅಧೀಕ್ಷಕರ ಕಛೇರಿಯನ್ನು ಹೊಸದಾಗಿ ರಚನೆ ಮಾಡಲಾಗಿದೆ. ಅಂಚೆ ಕಛೇರಿಯ ಕೆಲಸಗಳಿಗಾಗಿ ದಾವಣಗೆರೆ ಜಿಲ್ಲೆಯ ಜನರು ಚಿತ್ರದುರ್ಗ ಹಾಗೂ ಶಿವಮೊಗ್ಗಕ್ಕೆ ಓಡಾಟ ಮಾಡುವುದು ತಪ್ಪಿದೆ.
ದಾವಣಗೆರೆ ಜಿಲ್ಲೆಗೆ ಹೊಸ ಅಂಚೆ ಅಧೀಕ್ಷಕ ವಿಭಾಗ ಕಛೇರಿ ರಚನೆಗೆ ಮಂಜೂರಾತಿ ನೀಡಿದ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಡಾ. ಜಿ. ಎಂ. ಸಿದ್ದೇಶ್ವರ ಅಭಿನಂದಿಸಿದ್ದಾರೆ.
ಯಾದಗಿರಿ ಜಿಲ್ಲೆಗೂ ಮಂಜೂರು; ದಾವಣಗೆರೆ ಮಾತ್ರವಲ್ಲ ಯಾದಗಿರಿ ಜಿಲ್ಲೆಗೆ ಸಹ ಕೇಂದ್ರ ಸರ್ಕಾರ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಮಂಜೂರು ಮಾಡಿದೆ. ಯಾದಗಿರಿ ಜಿಲ್ಲೆ ರಚನೆಗೊಂಡು 11 ವರ್ಷಗಳು ಕಳೆದಿದ್ದರೂ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಚೇರಿ ಇರಲಿಲ್ಲ. ಕಲಬುರಗಿಯಿಂದಲೇ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಕಚೇರಿ ನಿರ್ವಹಣೆ ನಡೆಯುತ್ತಿತ್ತು.
ಯಾದಗಿರಿ ಜಿಲ್ಲೆಯೂ ಸಹ 6 ತಾಲೂಕುಗಳನ್ನು ಒಳಗೊಂಡಿದೆ. ಸರ್ಕಾರಿ ಇಲಾಖೆಗಳ ವ್ಯವಹಾರ ಸೇರಿದಂತೆ ಹಲವಾರು ವ್ಯವಹಾರ ಅಂಚೆ ಮೂಲಕವೇ ನಡೆಯುತ್ತದೆ. ಈಗ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಮಂಜೂರಾಗಿದೆ. ಏಪ್ರಿಲ್ 1ರಿಂದ ನೂತನ ಕಚೇರಿ ಆರಂಭವಾಗುವ ನೀರಿಕ್ಷೆ ಇದೆ.
ಯಾದಗಿರಿ ನಗರದ ಅಂಚೇಡ್ಕರ್ ವೃತ್ತದ ಸಮೀಪ ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗದ ಕಚೇರಿ ತೆರೆಯುವ ಸಾಧ್ಯತೆ ಇದೆ. ಯಾದಗಿರಿ ಪ್ರಧಾನ ಅಂಚೆ ಕಚೇರಿ ಇಲ್ಲಿಯೇ ಇದೆ. ಜನರು ಇನ್ನು ಮುಂದೆ ಕಲಬುರಗಿ ಪ್ರಧಾನ ಕಚೇರಿಗೆ ಅಲೆದಾಟ ನಡೆಸುವುದು ತಪ್ಪಲಿದೆ.
ಹೊಸ ಸಿಬ್ಬಂದಿಗಳ ನಿಯೋಜನೆ; ಪ್ರತ್ಯೇಕ ಅಂಚೆ ಅಧೀಕ್ಷಕರ ವಿಭಾಗ ಮಂಜೂರಾಗಿದ್ದು, ಹೊಸ ಸಿಬ್ಬಂದಿಗಳ ನಿಯೋಜನೆಯಾಗಬೇಕಿದೆ. ಅಂಚೆ ಅಧೀಕ್ಷಕ, ಸಹಾಯಕ ಅಂಚೆ ಅಧೀಕ್ಷಕ, ಸಿಐಸಿ, 6 ಜನ ಸಹಾಯಕರು, ಎಂಟಿಸಿ, ಗ್ರೂಪ್ ಡಿ ಸಿಬ್ಬಂದಿ ನಿಯೋಜನೆಯಾಗಬೇಕು.












Click it and Unblock the Notifications