ಮಾರ್ಚ್ 25ರಂದು ದಾವಣಗೆರೆಗೆ ಆಗಮಿಸಲಿರುವ ಪ್ರಧಾನಿ ಮೋದಿ: ಮಾರ್ಗಗಳು, ಪಾರ್ಕಿಂಗ್ ಸ್ಥಳಗಳ ಮಾಹಿತಿ ತಿಳಿಯಿರಿ
ದಾವಣಗೆರೆ, ಮಾರ್ಚ್, 24: ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 25ಕ್ಕೆ ದಾವಣಗೆರೆಗೆ ಆಗಮಿಸಲಿದ್ದು, ಈ ಹಿನ್ನೆಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಜನರು ಯಾವ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ ಗಮನಿಸಿ.
ಪಾರ್ಕಿಂಗ್ ಸ್ಥಳಗಳ ವಿವರ
ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಬೀರೂರು, ಕಡೂರು, ಶೃಂಗೇರಿ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಗಳೂರು ಜಿಲ್ಲೆಗಳಿಂದ ಬಾಡಾ ಕ್ರಾಸ್‌ನಿಂದ ದಾವಣಗೆರೆ ನಗರಕ್ಕೆ ಪ್ರವೇಶ ಮಾಡುವ ವಾಹನಗಳಿಗೆ ಎಪಿಎಂಸಿ ಮತ್ತು ಚಿಕ್ಕನಹಳ್ಳಿಗಳಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಇನ್ನು ಚನ್ನಗಿರಿ, ಶಿವಮೊಗ್ಗ, ಭದ್ರಾವತಿ, ಬೀರೂರು, ಕಡೂರು, ಮಂಗಳೂರು ಕಡೆಯಿಂದ ಹದಡಿ ರಸ್ತೆ ಮೂಲಕ ದಾವಣಗೆರೆ ನಗರಕ್ಕೆ ಪ್ರವೇಶ ಮಾಡುವ ವಾಹನಗಳನ್ನು ಡಿಆರ್‌ಎಂ ಸೈನ್ಸ್ ಕಾಲೇಜ್, ಹೈಸ್ಕೂಲ್ ಮೈದಾನ, ಯು.ಐ.ಡಿ. ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಹಾಗೆಯೇ ಹುಬ್ಬಳ್ಳಿ, ಧಾರಾವಾಡ, ಬೆಳಗಾವಿ, ಗದಗ, ಹಾವೇರಿ, ಹರಿಹರ ಕಡೆಯಿಂದ ಬೈಪಾಸ್ ರಸ್ತೆ ಮೂಲಕ ಹಳೇ ಬರುವ ವಾಹನಗಳನ್ನು ಕುಂದುವಾಡ ಕೆರೆ ಹತ್ತಿರದ ಜಾಗದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಹರಪನಹಳ್ಳಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ವಿಜಯಪುರ, ರಾಯಚೂರು, ಬೀದರ್, ಕಲ್ಬುರ್ಗಿ, ಗದಗ, ಯಾದಗಿರಿ, ಹೊಸಪೇಟೆ ಕಡೆಯಿಂದ ಬರುವ ವಾಹನಗಳು ಕೊಂಡಜ್ಜಿ, ಆವರಗೊಳ್ಳ ಮುಖಾಂತರ ಬರುವ ವಾಹನಗಳನ್ನು ಕೇಂದ್ರೀಯ ವಿದ್ಯಾಲಯದ ಜಾಗದಲ್ಲಿ ಪಾರ್ಕಿಂಗ್ ಮಾಡಬಹುದಾಗಿದೆ. ಹಾಗೆಯೇ ಚಳ್ಳಕೆರೆ, ಮೊಳಕಾಲ್ಕೂರು, ಕೂಡ್ಲಿಗಿ ಜಿಲ್ಲೆಗಳಿಂದ ಜಗಳೂರು ರಸ್ತೆ ಮೂಲಕ ಬರುವ ವಾಹನಗಳನ್ನು ಬಡಗಿ ಕೃಷ್ಣಪ್ಪ ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
ವಾಹನಗಳ ಸಂಚಾರ ನಿಷೇಧ
ನಗರದಲ್ಲಿ ಪ್ರಧಾನ ಮಂತ್ರಿಯವರ ಸಮಾರಂಭ ನಡೆಯುವ ಸ್ಥಳದ ಸುತ್ತಮುತ್ತ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಬರುವ ಮಕ್ಕಳು ಹಾಲ್‌ಟಿಕೆಟ್, ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕಾಗಿದೆ. ವಿದ್ಯಾರ್ಥಿಗಳಿಗೆ ಪೊಲೀಸರು ಯಾವುದೇ ಅಡಚಣಿ ಮಾಡದೇ ಪರೀಕ್ಷೆಗೆ ಸಂಪೂರ್ಣ ಅನುಕೂಲ ಮಾಡಿಕೊಡಲಿದ್ದಾರೆ.
ನಗರದಲ್ಲಿನ ಬಸ್ ನಿಲ್ದಾಣಗಳು ಬಂದ್
ದಾವಣಗೆರೆಯಲ್ಲಿನ ಎಲ್ಲಾ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ನಗರದ ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ. ಮಾರ್ಚ್ 25ರಂದು ಎಲ್ಲಾ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಿಂದ 2 ಕಿ.ಮೀ. ವ್ಯಾಪ್ತಿಯ ಸುತ್ತಳತೆಯಲ್ಲಿ ಯಾವುದೇ ರೀತಿಯ ಡ್ರೋನ್ ಹಾರಾಟವನ್ನು ಸಂಪೂರ್ಣ ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಕಾರ್ಯಕ್ರಮಕ್ಕೆ ಬರುವಂತಹ ಸಾರ್ವಜನಿಕರು ಕ್ಯೂ.ಆರ್. ಕೋಡ್ ಅನ್ನು ನೀಡಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿ ಈ ಮೇಲ್ಕಂಡ ನಿಲುಗಡೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಸೂಚನೆ ನೀಡಿದೆ.












Click it and Unblock the Notifications