ಜನರೊಂದಿಗೆ ಬೆರೆಯುತ್ತಿದ್ದ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ವಿಡಿಯೋಗಳು ವೈರಲ್
ದಾವಣಗೆರೆ, ನವೆಂಬರ್, 04: ಹೊನ್ನಾಳಿ - ನ್ಯಾಮತಿ ತಾಲೂಕಿನಲ್ಲಿ ಚಂದ್ರಶೇಖರ್ ಸಾವಿನ ಸುದ್ದಿ ಬರಸಿಡಿಲು ಬಡಿದಂತೆ ಮಾಡಿದೆ. ಇನ್ನು ಚಂದ್ರಶೇಖರ್ ಬದುಕಿದ್ದಾಗ ನೃತ್ಯ ಮಾಡಿದ್ದು, ಜನರೊಟ್ಟಿಗೆ ಬೆರೆಯುತ್ತಿದ್ದಂತಹ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ. ಗಣೇಶೋತ್ಸವ, ದಸರಾ ಕಾರ್ಯಕ್ರಮ, ಮಳೆ ಬಂದಾಗ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು, ಲಂಬಾಣಿ ಮಹಿಳೆಯರ ಜೊತೆ ನೃತ್ಯ ಮಾಡುತ್ತಿರುವ ಹಳೆಯ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದ್ದು, ಇದೀಗ ಪ್ರತಿಯೊಬ್ಬರೂ ಚಂದ್ರಶೇಖರ್ ಶವ ನೋಡಿ ಭಾವುಕರಾಗುತ್ತಿದ್ದಾರೆ.
ಸದಾ ಲವಲವಿಕೆಯಿಂದ, ಜನರೊಟ್ಟಿಗೆ ಬೆರೆಯುತ್ತಿದ್ದ ಯುವಕನ ಶವ ಕಂಡ ಕ್ಷೇತ್ರದ ಜನರು ಮರುಗುತ್ತಿದ್ದಾರೆ. ಇನ್ನು ರೇಣುಕಾಚಾರ್ಯರ ಕುಟುಂಬಸ್ಥರಲ್ಲಿ ಆಕ್ರಂದ ಮುಗಿಲುಮುಟ್ಟಿದೆ. ಯಾರಿಗೆ ಯಾರು ಸಂತೈಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವತಃ ರೇಣುಕಾಚಾರ್ಯ ಅವರೇ ಚಂದ್ರಶೇಖರ್ ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಮಾಡಿದ್ದ ಚಂದ್ರಶೇಖರ್‌ಗೆ ಕೆಲಸಕ್ಕೆ ಹೋಗು ಎಂದು ತಂದೆ ಹೇಳಿದ್ದರು. ಆದರೂ ಇಲ್ಲ ನಾನು ದೊಡ್ಡಪ್ಪನ ಜೊತೆ ಇರುತ್ತೇನೆ. ಅವರ ಒಳ್ಳೆಯ ಕಾರ್ಯಗಳಿಗೆ ನಾನು ಸದಾ ಜೊತೆಗಿರುತ್ತೇನೆ. ಅವರೊಬ್ಬರಿಗೆ ಕಷ್ಟ ಆಗುತ್ತದೆ ಎಂದು ಹೇಳಿ ರೇಣುಕಾಚಾರ್ಯರ ಜೊತೆ ಹೆಚ್ಚಾಗಿ ಚಂದ್ರಶೇಖರ್ ಇರುತ್ತಿದ್ದರು. ಹೊನ್ನಾಳಿಗೆ ಬಂದಾಕ್ಷಣ ರೇಣುಕಾಚಾರ್ಯರು ಕೇಳುತ್ತಿದ್ದದ್ದು ಚಂದ್ರು ಎಲ್ಲಿ ಎಂದು. ಆದರೆ ಈಗ ಯಾರನ್ನು ಕರಿಬೇಕು, ಚಂದ್ರು ಇಲ್ಲವಲ್ಲಾ ಎಂದು ಶಾಸಕ ರೇಣುಕಾಚಾರ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಜನರ ಕಷ್ಟಗಳಿಗೂ ಉತ್ತಮ ಸ್ಪಂದನೆ
ಗಣೇಶೋತ್ಸವದಲ್ಲಿ ಯುವಕರ ಜೊತೆ ಹೆಜ್ಜೆ ಹಾಕುವ ವಿಡಿಯೋ, ಹುಟ್ಟುಹಬ್ಬದ ವೇಳೆ ಸಂಭ್ರಮಿಸಿದ ದೃಶ್ಯಗಳು ಎಲ್ಲರ ಕಣ್ಣಾಲಿಗಳು ತೇವಗೊಳ್ಳುವಂತಿವೆ. ಚಂದ್ರಶೇಖರ್ ಎಂಬ ಮುಗ್ಧ ಸ್ವಭಾವದ, ವಿನಯವಂತಿಕೆ ಇದ್ದ ಯುವಕನ ಕಳೆಬರಹ ನೋಡುತ್ತಿದ್ದಂತೆ ಜನರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಹೊನ್ನಾಳಿ ಠಾಣೆಯಲ್ಲಿ ದೂರು
ನನ್ನ ಮಗ ಚಂದ್ರಶೇಖರ್‌ನದ್ದು ಸಹಜ ಸಾವಲ್ಲ. ಅದು ಕೊಲೆ ಎಂದು ದೂರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ತಂದೆ ಎಂ. ಪಿ. ರಮೇಶ್ ದೂರು ನೀಡಿದ್ದರು. ಪೊಲೀಸರು ಸಹ ತನಿಖೆ ಚುರುಕುಗೊಳಿಸಿದ್ದಾರೆ. ಶಿವಮೊಗ್ಗದ ಕಿರಣ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಎಲ್ಲಾ ಆಯಾಮಗಳಲ್ಲಿಯೂ ತನಿಖೆಯನ್ನು ನಡೆಸುತ್ತಿದ್ದಾರೆ.
ನನ್ನ ಮಗ ಚಂದ್ರಶೇಖರ್.ಎಂ.ಆರ್ ಸುಮಾರು 25 ವರ್ಷದವನಾಗಿದ್ದ. ಈತನು ಅಕ್ಟೋಬರ್ 30ರ ರಾತ್ರಿ 7:30ಕ್ಕೆ ಹೊನ್ನಾಳಿಯ ನಮ್ಮ ಮನೆಯಿಂದ ಶಿವಮೊಗ್ಗಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದಾರೆ. ನನ್ನ KA -17 MA -2534 ನಂಬರ್‌ನ ಬಿಳಿ ಬಣ್ಣದ ಹುಂಡೈ ಕ್ರಿಸ್ಟಾ ಕಾರಿನಲ್ಲಿ ಹೋದವನು ವಾಪಸ್ ಮನೆಗೆ ಬಾರದ ಕಾರಣ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಆಗಲಿಲ್ಲ. ಆದ ಕಾರಣ ನವೆಂಬರ್ 1ರಂದು ನನ್ನ ಮಗ ಚಂದ್ರಶೇಖರ್ ಕಾಣೆಯಾದ ಬಗ್ಗೆ ದೂರು ನೀಡಿ ಪ್ರಕರಣವನ್ನು ದಾಖಲಿಸಿದ್ದೆ.

ಚಂದ್ರು ಸಾವಿನ ಸುತ್ತ ಅನುಮಾನದ ಹುತ್ತ
ಆದರೆ ನವೆಂಬರ್ 3ರಂದು ಸುಮಾರು 3:45ರ ಮಧ್ಯಾಹ್ನ ಹೊನ್ನಾಳಿ -ನಾಮತಿ ಮಧ್ಯೆ ಬರುವ ಹೆಚ್. ಕಡದಕಟ್ಟೆ ಗ್ರಾಮದ ಬಳಿ ಅಪ್ಪರ್ ತುಂಗಾ ನಾಲೆ ಬಳಿ ಕಾರಿನೊಂದಿಗೆ ಶವ ಪತ್ತೆ ಆಗಿದೆ. ಯಾವುದೋ ವಾಹನದ ಬಿಡಿ ಭಾಗಗಳು ರಸ್ತೆ ಬದಿ ಬಿದ್ದಿವೆ ಎಂದು ಸಾರ್ವಜನಿಕರು ತಿಳಿಸಿದ್ದರು. ಕೂಡಲೇ ನಾನು, ನನ್ನ ಸಹೋದರರು, ಪೊಲೀಸರು, ಸಾರ್ವಜನಿಕರು ಒಟ್ಟಾಗಿ ಸ್ಥಳಕ್ಕೆ ಹೋಗಿ ನೋಡಿದಾಗ ಸೇತುವೆಯ ಬಳಿ ಕಾರಿನ ಬಿಡಿ ಭಾಗಗಳು ಬಿದ್ದಿದ್ದು ಕಂಡು ಬಂದಿತ್ತು.

ಕಾರಿನೊಳಗೆ ಸೀಟಿನ ಹಿಂಬಂದಿಯಲ್ಲಿದ್ದ ಶವ
ಇದನ್ನು ನೋಡಿದಾಗ ನಮ್ಮ ಕಾರಿನ ಬಿಡಿ ಭಾಗಗಳಂತೆ ಅನಿಸಿದ್ದರಿಂದ ಸೇತುವೆಯ ಸುತ್ತಲೂ ಎಲ್ಲರೂ ಪರಿಶೀಲಿಸಿದೆವು. ಆಗ ಕಾರು ಕೆಳಗೆ ನೀರಿನಲ್ಲಿ ಬಿದ್ದಿರುವ ರೀತಿಯಲ್ಲಿ ಗುರುತು ಕಂಡುಬಂದಿತ್ತು. ಅದರಂತೆಯೇ ನಾಲೆಯ ನೀರಿನಲ್ಲಿ ಸೇತುವೆಯ ಕೆಳಗೆ ಕಾರೊಂದು ಮುಳುಗಿರುವಂತೆ ಕಂಡುಬಂದಿತು. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಯವರನ್ನು ಕರೆಸಿ ಸೇತುವೆಯ ಕೆಳಭಾಗದ ನೀರಿನಲ್ಲಿ ಕಾರು ಇರುವುದನ್ನು ಖಚಿತ ಪಡಿಸಿಕೊಂಡೆವು. ನಂತರ ಕ್ರೇನ್‌ಗಳ ಸಹಾಯದಿಂದ ನೀರಿನಲ್ಲಿದ್ದ ಕಾರನ್ನು ಮೇಲಕ್ಕೆ ಎತ್ತಿ ರಸ್ತೆಯ ಬಳಿ ಇರಿಸಿ ನೋಡಿದಾಗ KA -17 MA - 2534 ನಂಬರ್‌ನ ಬಿಳಿ ಬಣ್ಣದ ಹುಂಡೈ ಕ್ರಿಸ್ಟಾ ಕಾರು ಆಗಿತ್ತು. ಕಾರಿನ ಒಳಗೆ ನೋಡಿದಾಗ ನನ್ನ ಮಗ ಚಂದ್ರಶೇಖರ್‌ನ ಮೃತ ದೇಹವು ಹಿಂದಿನ ಸೀಟಿನಲ್ಲಿ ಇರುವುದು ಕಂಡುಬಂದಿತು ಎಂದು ಹೇಳಿದ್ದಾರೆ.

ದೂರು ದಾಖಲಿಸಿದ ಚಂದ್ರು ತಂದೆ
ನಂತರ ಚಂದ್ರಶೇಖರ್‌ನ ಮೃತ ದೇಹವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿದಾಗ ಅವನ ಕೈ - ಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಹಾಕಿದ ರೀತಿಯಲ್ಲಿ ಕಾಣಿಸಿತ್ತು. ಕಿವಿಗಳಿಗೆ ಹೊಡೆದಿರುವ ರೀತಿಯ ಗುರುತುಗಳು, ತಲೆಯ ನೆತ್ತಿಗೆ ಆಯುಧದಿಂದ ಹೊಡೆದಿರುವುದು, ದೇಹದ ಉಳಿದ ಕಡೆಯೂ ಹೊಡೆದಿರುವ ಗುರುತುಗಳು ಕಂಡು ಬಂದಿರುತ್ತವೆ. ನನ್ನ ಮಗನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ, ಅಪಘಾತ ಆಗಿರುವ ರೀತಿಯಲ್ಲಿ ಬಿಂಬಿಸಿ ಕಾರನ್ನು ಜಖಂಗೊಳಿಸಿದ್ದಾರೆ. ಚಂದ್ರಶೇಖರ್‌ನ ಮೃತ ದೇಹವನ್ನು ಕಾರಿನಲ್ಲಿ ಇರಿಸಿ ಚಾನಲ್‌ಗೆ ತಳ್ಳಿರುವುದು ಕಂಡುಬಂದಿರುತ್ತದೆ ಎಂದರು.

ಪೊಲೀಸರಿಗೆ ಮನವಿ ಮಾಡಿದ ರಮೇಶ್
ನನ್ನ ಮಗನಾದ ಚಂದ್ರಶೇಖರನನ್ನು ಕೊಲೆ ಮಾಡಿರುವ ದುಕ್ಷರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲು ಕೋರಿಕೊಳ್ಳುತ್ತೇನೆ. ನನ್ನ ಮಗನ ಕೊಲೆಯು ಅಕ್ಟೋಬರ್ 30ರ ರಾತ್ರಿ ಆಗಿರಬಹುದು. ಈ ಘಟನೆಯ ಬಗ್ಗೆ ತಾವು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ರಮೇಶ್ ದೂರಿನಲ್ಲಿ ವಿವರಿಸಿದ್ದಾರೆ. ಇನ್ನು ದೂರು ದಾಖಲಾಗುತ್ತಿದ್ದಂತೆ ಹೊನ್ನಾಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಲಂ 302 , 201 , 427 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications