ದಾವಣಗೆರೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್: ಅವಕಾಶ ಸಿಕ್ಕರೆ ಸ್ಪರ್ಧೆಗೆ ಸಿದ್ಧ ಎಂದ ಎಸ್ಎಆರ್
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಶಾಸಕ ಎಸ್. ಎ. ರವೀಂದ್ರನಾಥ್ ಅವರಿಗೆ ಸ್ಪರ್ಧಿಸುವಂತೆ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಒತ್ತಡ ಹೇರತೊಡಗಿದ್ದಾರೆ.
ದಾವಣಗೆರೆ, ಮಾರ್ಚ್ 2: 2023ರ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಶಾಸಕ ಎಸ್. ಎ. ರವೀಂದ್ರನಾಥ್ ಅವರಿಗೆ ಸ್ಪರ್ಧಿಸುವಂತೆ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಒತ್ತಡ ಹೇರತೊಡಗಿದ್ದಾರೆ.
ಶಾಸಕ ಎಸ್. ಎ. ರವೀಂದ್ರನಾಥ್ ಸ್ಪರ್ಧೆ, ಉತ್ತರ ಕ್ಷೇತ್ರದಲ್ಲಿ ಉತ್ಸುಹಕರಾಗಿದ್ದ ಆಕಾಂಕ್ಷಿಗಳಿಗೆ ತಣ್ಣೀರೆರಚಿದೆ. ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದಿರುವ ಎಸ್. ಎ. ಆರ್, ಸಂಸದ ಸಿದ್ದೇಶ್ವರ್ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದರೆ ನಾನು ಲೋಕಸಭೆಗೆ ಕಣಕ್ಕಿಳಿಯುತ್ತೇನೆ ಎನ್ನುವ ಮೂಲಕ ಬಿಜೆಪಿ ಜೋಡೆತ್ತುಗಳ ಕಾರ್ಯತಂತ್ರ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಮಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯಲು ರವೀಂದ್ರನಾಥ್ ಅವರಂಥ ಸಮರ್ಥ ನಾಯಕರು ಬೇಕು. ಕಳೆದ ಬಾರಿಯ ಚುನಾವಣೆಯಲ್ಲಿ ಸಚಿವರಾಗಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಸೋಲುಣಿಸುವ ಮೂಲಕ ರವೀಂದ್ರನಾಥ್ ರ ಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತಾಗಿದೆ.
ಕಾಂಗ್ರೆಸ್‌ನಿಂದ ಎಸ್. ಎಸ್. ಮಲ್ಲಿಕಾರ್ಜುನ್ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ರವೀಂದ್ರನಾಥ್ ಅವರು ತೀವ್ರ ಸ್ಪರ್ಧೆಯೊಡ್ಡಲಿದ್ದಾರೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಮಾಯಕೊಂಡ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದು ಶಾಸಕರಾಗಿದ್ದ ರವೀಂದ್ರನಾಥ್ ಅವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.
ಏಳು ವರ್ಷಗಳ ಕಾಲ ಸಚಿವರಾಗಿ ಮಾಡಿರುವ ಕಾರ್ಯಗಳು ಹಾಗೂ ಶಾಸಕರಾಗಿ ಸಲ್ಲಿಸಿರುವ ಸೇವೆ ಅನನ್ಯ. ರವೀಂದ್ರನಾಥ್ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಜೊತೆ ಸೇರಿ ಪಕ್ಷ ಕಟ್ಟಿದವರು. ಆರ್‌ಎಸ್‌ಎಸ್‌ನ ನಿಷ್ಠಾವಂತ ಕಾರ್ಯಕರ್ತರು. ಎಂದಿಗೂ ಪಕ್ಷ ದ್ರೋಹ ಮಾಡಿದವರಲ್ಲ. ಇಂಥವರು ಬೇಕು. ಹಾಗಾಗಿ ರವೀಂದ್ರನಾಥ್ ಅವರೇ ಸ್ಪರ್ಧೆ ಮಾಡಬೇಕು ಎನ್ನುವುದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಆಗ್ರಹವಾಗಿದೆ.

ನನ್ನದೇನೂ ಇಲ್ಲ, ಎಲ್ಲವೂ ಪಕ್ಷದ ಹೈಕಮಾಂಡ್ ನಿರ್ಧಾರ
ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರನಾಥ್, ಭಾರತೀಯ ಜನತಾ ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಬೇರೆಯವರಿಗೆ ಟಿಕೆಟ್ ಕೊಟ್ಟರೆ ಗೆಲುವಿಗೆ ಶ್ರಮಿಸುತ್ತೇನೆ. ನಾನು ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ನನ್ನದೇನೂ ಇಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ.
ಮಾತು ಮುಂದುವರಿಸಿದ ಅವರು, ಲೋಕಸಭಾ ಸದಸ್ಯ ಜಿ. ಎಂ. ಸಿದ್ದೇಶ್ವರ ಅವರಿಗೆ ರಾಜ್ಯ ರಾಜಕಾರಣದ ಬಗ್ಗೆ ಒಲವಿದೆ. ಶಾಸಕರಾಗಿ, ಸಚಿವರಾಗಬೇಕು ಎಂಬ ಆಸೆ ಹೊಂದಿದ್ದಾರೆ. ಅವರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇನೆ. ಅವರ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಅದೇ ರೀತಿಯಲ್ಲಿ ಲೋಕಸಭೆಗೆ ಸ್ಥಾನಕ್ಕೆ ನಾನು ಸ್ಪರ್ಧಿಸಬಹುದು ಎನ್ನುವ ಕುತೂಹಲಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಎಸ್. ಎ. ರವೀಂದ್ರನಾಥ್ ಮತ್ತೊಮ್ಮೆ ಸ್ಫರ್ಧಿಸಬೇಕು
ಇನ್ನು ಸಭೆಯ ಬಳಿಕ ಮಾತನಾಡಿದ ಪಾಲಿಕೆ ಸದಸ್ಯ ಮಂಜನಾಯ್ಕ್, ಸಭೆಯಲ್ಲಿ ನಾವೆಲ್ಲರೂ ಅಭಿಪ್ರಾಯ ಹೇಳಿದ್ದೇವೆ. ಎಸ್. ಎ. ರವೀಂದ್ರನಾಥ್ ಅವರೇ ಮತ್ತೊಮ್ಮೆ ಕಣಕ್ಕಿಳಿಯಬೇಕು ಎಂಬ ಅಪೇಕ್ಷೆ ನಮ್ಮದು. ಹಾಲಿ ಶಾಸಕರು, ಮುಂದೆಯೂ ಶಾಸಕರಾಗಬೇಕು. ಹಾಗಾಗಿ, ರವೀಂದ್ರನಾಥ್ ಅವರಿಗೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುವ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ರವೀಂದ್ರನಾಥ್ ಆರೋಗ್ಯದಲ್ಲಿ ಚೇತರಿಕೆ
ಇನ್ನು ರವೀಂದ್ರನಾಥ್ ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಮಂಡಿನೋವು ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಈಗ ಚೇತರಿಸಿಕೊಳ್ಳುತ್ತಿದ್ದಾರೆ. 77ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರು, ರವೀಂದ್ರನಾಥ್ ಅವರೇ ಅಭ್ಯರ್ಥಿ, ಗೆಲ್ಲಿಸಿ ಕಳುಹಿಸಿಕೊಡಿ ಎಂದಿದ್ದರು.
75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಬಿಜೆಪಿ ಹೈಕಮಾಂಡ್ ನಿರ್ಧಾರ ಹೊರಬೀಳುತ್ತಿದ್ದಂತೆ ಉತ್ತರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಬಿಜೆಪಿಯಲ್ಲಿ ಹೆಚ್ಚಾಗಿತ್ತು. ಆದರೆ ಈಗ ಮತ್ತೆ ಸ್ಪರ್ಧೆ ಮಾಡುತ್ತೇನೆ ಎನ್ನುವ ಮೂಲಕ ಆಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದ್ದಾರೆ. ಏನೇ ಆದರೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಯಾರು ಅಭ್ಯರ್ಥಿಯಾಗಲಿದ್ದಾರೆ ಎನ್ನುವುದು ಗೊತ್ತಾಗಲಿದೆ.












Click it and Unblock the Notifications