ದಾವಣಗೆರೆ: ಪಕ್ಷೇತರ ಅಭ್ಯರ್ಥಿಗೆ ಒಲಿದ ಮೇಯರ್ ಪಟ್ಟ; ಹೆಲಿಕಾಪ್ಟರ್‌ನಲ್ಲಿ ಬಂದ ಬಿಜೆಪಿ MLCಗಳು
ದಾವಣಗೆರೆ, ಫೆಬ್ರವರಿ 25: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಪಟ್ಟ ಪಕ್ಷೇತರ ಅಭ್ಯರ್ಥಿಗೆ ಒಲಿದಿದ್ದು, ಕೊನೆ ಕ್ಷಣದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಯಮ್ಮ ಗೋಪಿನಾಥ್ ಮೇಯರ್ ಆಗಿ ಆಯ್ಕೆಯಾದರೆ, ಉಪ ಮೇಯರ್ ಪಟ್ಟ ಗಾಯತ್ರಿ ಖಂಡೋಜಿರಾವ್‌ಗೆ ದಕ್ಕಿದೆ.
ಈ ಬಾರಿಯ ಮೇಯರ್ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಈ ಸ್ಥಾನಕ್ಕೆ ಬಿಜೆಪಿಯಿಂದ ಶಿಲ್ಪಾ ಜಯಪ್ರಕಾಶ್ ಹಾಗೂ ಜಯಮ್ಮ ಗೋಪಿನಾಯ್ಕ್ ಹೆಸರು ಕೇಳಿ ಬಂದಿತ್ತು. ಕೊನೆ ಕ್ಷಣದವರೆಗೂ ಶಿಲ್ಪಾ ಜಯಪ್ರಕಾಶ್ ಅವರೇ ಆಯ್ಕೆಯಾಗುತ್ತಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಕಾಂಗ್ರೆಸ್‌ನವರು ಏನಾದರೂ ಮಾಡಿ ಅಧಿಕಾರ ಹಿಡಿಯುತ್ತಾರೆ ಎಂಬುದು ಹುಸಿಯಾಗಿದೆ.

ಶಿಲ್ಪಾ ಜಯಪ್ರಕಾಶ್‌ಗೆ ಮೇಯರ್ ಪಟ್ಟ ನೀಡುವುದಕ್ಕೆ ವಿರೋಧ
ಬಿಜೆಪಿಯ ಕೆಲ ಪಾಲಿಕೆಯ ಸದಸ್ಯರು ಶಿಲ್ಪಾ ಜಯಪ್ರಕಾಶ್ ಅವರಿಗೆ ಮೇಯರ್ ಪಟ್ಟ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರ ಪ್ರಯೋಜನ ಪಡೆಯಲು ಕಾಂಗ್ರೆಸ್ ಸಹ ಪ್ರಯತ್ನ ಮಾಡಿತ್ತು. ಸಂಸದ ಜಿ.ಎಂ. ಸಿದ್ದೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಂತ್ರ ಬದಲಿಸಿದ ಪರಿಣಾಮ, ಜಯಮ್ಮ ಗೋಪಿನಾಯ್ಕ್ ಅವರಿಗೆ ಮೇಯರ್ ಪಟ್ಟ ಒಲಿದು ಬಂದಿದೆ. ಮೊದಲ ಬಾರಿಗೆ ಕಾರ್ಪೊರೇಟರ್ ಆಗಿದ್ದ ಜಯಮ್ಮ ಅವರು ಈ ಹುದ್ದೆ ಅಲಂಕರಿಸುತ್ತಿದ್ದಾರೆ.
ಇನ್ನು ಬಿ.ಜೆ. ಅಜಯ್ ಕುಮಾರ್, ಎಸ್.ಟಿ. ವೀರೇಶ್ ಅವರು ಸಹ ಮೊದಲ ಬಾರಿ ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದರು. ಮೊದಲಿಗೆ ಅಜಯ್ ಕುಮಾರ್ ಮೇಯರ್ ಆಗಿದ್ದರೆ, ಕಳೆದ ವರ್ಷ ಎಸ್.ಟಿ. ವೀರೇಶ್ ಮಹಾಪೌರರಾಗಿ ಆಡಳಿತ ನಡೆಸಿದ್ದರು. ಇಂದು ಜಯಮ್ಮ ಅವರಿಗೆ ಅದೃಷ್ಟ ಒಲಿದು ಬಂದಿದೆ. ಈ ಮೂಲಕ ಮೂರನೇ ಬಾರಿಯೂ ಹೊಸಬರೇ ಅಧಿಕಾರ ಗದ್ದುಗೆ ಏರಿದ್ದು ವಿಶೇಷ.

ಹೆಲಿಕಾಪ್ಟರ್‌ನಲ್ಲಿ ಬಂದ ಬಿಜೆಪಿ ಎಂಎಲ್‌ಸಿಗಳು
ಪಾಲಿಕೆಯ ಸದಸ್ಯರು, ಪಕ್ಷೇತರ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಶಾಸಕರು ಸೇರಿ ಬಿಜೆಪಿ 29 ಮತ ಹೊಂದಿದ್ದರೆ, ಕಾಂಗ್ರೆಸ್ 25 ಸ್ಥಾನ ಹೊಂದಿತ್ತು. ಜೆಡಿಎಸ್‌ನ ಸದಸ್ಯೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಜಯಮ್ಮ ಗೋಪಿನಾಯ್ಕ್ ಸುಲಭವಾಗಿ ಜಯ ಗಳಿಸಿದರು.
ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಹೈಟೆಕ್ ತಂತ್ರ ಪ್ರಯೋಗ ಮಾಡಿದ ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ಲೋಕಸಭೆ ಹಾಗೂ ವಿಧಾನಸಭೆ ಸೇರಿದಂತೆ ಪ್ರಮುಖ ಚುನಾವಣೆಯಲ್ಲಿ ಹೆಲಿಕಾಪ್ಟರ್ ಬಳಸುವುದು ಸಾಮಾನ್ಯ. ಆದರೆ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸಲು ಹೆಲಿಕಾಪ್ಟರ್‌ನಲ್ಲಿ ಬರುವ ಮೂಲಕ ಬಿಜೆಪಿ ವಿಧಾನ ಪರಿಷತ್ ಸದಸ್ಯರು ಅಚ್ಚರಿ ಮೂಡಿಸಿದರು.
ವಿಧಾನ ಪರಿಷತ್ ಸದಸ್ಯರಾದ ತೇಜಸ್ವಿನಿ ರಮೇಶ್, ಎನ್. ರವಿಕುಮಾರ್, ಆರ್. ಶಂಕರ್, ಕೆ.ಪಿ. ನಂಜುಂಡಿ ಅವರು ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಬಂದಿಳಿದರು. ಈ ವೇಳೆ ನಿಕಟ ಪೂರ್ವ ಮೇಯರ್ ಎಸ್.ಟಿ. ವೀರೇಶ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಸಂಸದ ಜಿ.ಎಂ. ಸಿದ್ದೇಶ್ವರ್ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಅದಲು-ಬದಲು ತಂತ್ರದ ಫಲ
ಕಳೆದ ಒಂದು ವಾರದ ಹಿಂದೆ ಚುನಾವಣೆ ಘೊಷಣೆಯಾಗಿದ್ದರೂ, ದಾವಣಗೆರೆಗೆ ಒಂದು ದಿನ ಮುಂಚೆ ಬಾರದ ಎಂಎಲ್‌ಸಿಗಳು ಹೆಲಿಕಾಪ್ಟರ್‌ನಲ್ಲಿ ಬರುವ ಮೂಲಕ ಹೈಟೆಕ್ ಆಗಿದ್ದು, ಈ ಬಾರಿಯ ಚುನಾವಣೆಯ ವಿಶೇಷ.
ಈ ಬಾರಿಯ ಮಹಾನಗರ ಪಾಲಿಕೆ ಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ನಿನ್ನೆ ರಾತ್ರಿವರೆಗೂ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಜಯಮ್ಮ ಗೋಪಿನಾಯ್ಕ್ ಹೆಸರಿದ್ದರೂ ಕೂಡ ಅವರು ಪಕ್ಷೇತರವಾಗಿ ಗೆದ್ದ ಕಾರಣ ಶಿಲ್ಪಾ ಅವರಿಗೆ ಸಿಗುವ ಸಾಧ್ಯತೆ ಕಂಡುಬಂದಿತ್ತು. ಪಕ್ಷ ನಿಷ್ಠರಿಗೆ ಮೇಯರ್ ಪಟ್ಟ ನೀಡದೆ ಪಕ್ಷೇತರ ಅಭ್ಯರ್ಥಿಗೆ ಮೇಯರ್ ಪಟ್ಟ ಲಭಿಸಿರುವುದರ ಹಿಂದೆ ಕೆಲ ಬಿಜೆಪಿಯ ಸದಸ್ಯರು ಜಯಮ್ಮ ಗೋಪಿನಾಥ್ ಪರವಿದ್ದ ಕಾರಣ ಅಂತಿಮವಾಗಿ ಇವರಿಗೆ ಅದೃಷ್ಟ ಒಲಿದು ಬಂದಿದೆ. ಇದು ಜಿಎಂಐಟಿಯಲ್ಲಿ ನಡೆದ ಅದಲು-ಬದಲು ತಂತ್ರದ ಫಲ ಎಂದು ಹೇಳಲಾಗಿದೆ.

ಮೋಸದಿಂದ ಗೆದ್ದರು: ಶಾಮನೂರು ಶಿವಶಂಕರಪ್ಪ
ಬಿಜೆಪಿಯವರು ಮೋಸದಿಂದ ಗೆದ್ದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯವರು ಸುಳ್ಳಿನ ಸರದಾರರು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ನಂತರ ಸುದ್ಸಿಗಾರರೊಂದಿಗೆ ಮಾತನಾಡುತ್ತಾ ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೋಸದಿಂದ ಅಧಿಕಾರ ವಹಿಸಿಕೊಂಡ ರೀತಿಯಲ್ಲೇ ಇಲ್ಲಿಯೂ ಮಾಡಿದ್ದಾರೆ. ಮೋಸದಿಂದ ಅವರು ಗೆದ್ದಿದ್ದಾರೆಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಮಾತನಾಡಿ, ಎಲ್ಲೊ ಗೆದ್ದಿರುವ ಎಂಎಲ್ಸಿಗಳು ಬೇರೆಡೆ ಬಂದು ಓಟ್ ಮಾಡುವ ಅವಕಾಶವಿದೆ. ಕಾನೂನಿನಲ್ಲಿ ತಪ್ಪಿನ ಕೆಲಸವಾಗಿದೆ. ಈ ರೀತಿ ಮುಂದೆ ಆಗದಂತೆ ನ್ಯಾಯಾಲಯಕ್ಕೆ ಹೋಗುವ ಚಿಂತನೆಯಿದೆ. ಯಾರು ಆಯ್ಕೆಯಾಗಿರುತ್ತಾರೋ ಅವರು ಅಲ್ಲಿಯೇ ಇರಬೇಕು. ಆದರೆ ಈ ರೀತಿ ಅಧಿಕಾರ ಪಡೆಯಲು ಎಲ್ಲಿಂದಲೋ ಬಂದು ಓಟ್ ಮಾಡುವುದು ತಪ್ಪು. ಅದನ್ನು ಎಲ್ಲಾ ಪಕ್ಷದವರು ಮಾಡಿದ್ದೇವೆ. ಇದು ಸರಿಯಲ್ಲ ಮುಂದಿನ ದಿನಗಳಲ್ಲಿ ಇಂತಹ ವರ್ತನೆ ನಿಲ್ಲಬೇಕು ಎಂದರು.












Click it and Unblock the Notifications