Madal Virupakshappa case: ಚನ್ನಗಿರಿಯಲ್ಲಿ ಬಿಜೆಪಿ ಬಣ ಬಡಿದಾಟ: ಜೋರಾಯ್ತು ಫ್ಲೆಕ್ಸ್ ವಾರ್
ಚನ್ನಗಿರಿ ಬಿಜೆಪಿಯಲ್ಲಿ ಇದೀಗ ಬಣ ಬಡಿದಾಟ ಶುರುವಾಗಿದೆ. ಬೆಂಗಳೂರಿನಿಂದ ಚನ್ನಗಿರಿಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಈ ಕಾದಾಟ ಆರಂಭಗೊಂಡಿದೆ.
ದಾವಣಗೆರೆ, ಮಾರ್ಚ್, 19: ಚನ್ನಗಿರಿ ಬಿಜೆಪಿಯಲ್ಲಿ ಈಗ ಬಣ ಬಡಿದಾಟ ಶುರುವಾಗಿದೆ. ಬೆಂಗಳೂರಿನಿಂದ ಚನ್ನಗಿರಿಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಈ ಕಾದಾಟ ಆರಂಭಗೊಂಡಿದೆ. ಲೋಕಾಯುಕ್ತ ವಿಚಾರಣೆಗೆ ಹಾಜರಾಗಿ ವಾಪಸ್ ಆದ ಮಾಡಾಳ್ ವಿರೂಪಾಕ್ಷಪ್ಪ ಅವರು ಶಿವಕುಮಾರ್ ಅವರ ಪ್ಲೆಕ್ಸ್ ಕಿತ್ತು ಹಾಕಬೇಕಿತ್ತು ಎಂದಿದ್ದಾರೆ. ಇದಕ್ಕೆ ಆಗಲೇ ಎಲ್ಲಾ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿದ್ದೇವೆ ಎಂದು ಕಾರ್ಯಕರ್ತನೊಬ್ಬ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಲೋಕಾಯುಕ್ತ ಬಲೆಗೆ ಬಿದ್ದಿರುವ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಪ್ರಶಾಂತ್ ಮಾಡಾಳ್ ಸಿಕ್ಕಿ ಬಿದ್ದಿದ್ದು, ಈತನ ಬಳಿ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿತ್ತು. ಕಂತೆ ಕಂತೆ ಹಣ ಸಿಕ್ಕ ಸುದ್ದಿ ಚನ್ನಗಿರಿ ಕ್ಷೇತ್ರ, ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಹರಡಿತ್ತು. ಆದರೆ ಇದೀಗ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಲ್ಲಿಕಾರ್ಜುನ್ ವಿಧಾನಸಭಾ ಚುನಾವಣೆಯ ಚನ್ನಗಿರಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಶನಿವಾರವಷ್ಟೇ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮಲ್ಲಿಕಾರ್ಜುನ್ ಶಕ್ತಿ ಪ್ರದರ್ಶನ ಮಾಡಿದ್ದರು.

ಬ್ಯಾನರ್‌ಗಳನ್ನ ಕಿತ್ತುಹಾಕಿದ ಮಾಡಾಳ್ ಬೆಂಬಲಿಗರು
ಚನ್ನಗಿರಿಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯ ಪ್ರಯುಕ್ತ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಲಂಚ ಪ್ರಕರಣದ ಬೆಳಕಿಗೆ ಬಂದ ಬಳಿಕ ಚನ್ನಗಿರಿಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕನಾಗಿದ್ದ ಮಾಡಾಳ್ ವಿರೂಪಾಕ್ಷಪ್ಪರ ಕುಟುಂಬಕ್ಕೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಬಿಜೆಪಿ ನಾಯಕರು ಈ ಬಗ್ಗೆ ಸ್ಪಷ್ಟವಾಗಿ ಎಲ್ಲಿಯೂ ಹೇಳಿರಲಿಲ್ಲ. ಹಾಗಾಗಿ, ಬಿಜೆಪಿಯ ಹಿರಿಯ ನಾಯಕ ಶಿವಕುಮಾರ್ ಅವರ ಹೆಸರು ಮುಂಚೂಣಿಗೆ ಬಂದಿತ್ತು.
ಶಿವಕುಮಾರ್ ವಿರುದ್ಧ ಆಕ್ರೋಶ
ಆಗ ವರಿಷ್ಠರ ಆದೇಶದ ಮೇಲೆ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದ್ದರು. ಆದರೆ ಚನ್ನಗಿರಿಯಲ್ಲಿ ಅಳವಡಿಸಲಾಗಿದ್ದ ಶಿವಕುಮಾರ್ ಅವರ ಭಾವಚಿತ್ರ ಹರಿದು ಹಾಕಲಾಗಿದೆ. ಇದು ಈಗ ವಿವಾದಕ್ಕೂ ಕಾರಣವಾಗಿದೆ. ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಖಚಿತ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಆದರೆ ಪ್ರಶಾಂತ್ ಮನೆಯಲ್ಲಿ ಕೋಟ್ಯಂತರ ಹಣ ಪತ್ತೆಯಾದ ಬಳಿಕ ಎಲ್ಲಾ ಲೆಕ್ಕಾಚಾರವೂ ಉಲ್ಟಾಪಲ್ಟಾ ಆಗಿತ್ತು.

ಇದೀಗ ಮಾಡಾಳ್ ಬೆಂಬಲಿಗರು ತನ್ನ ನಾಯಕನ ಪರ ನಿಂತಿದ್ದಾರೆ. ಹೋದಲೆಲ್ಲಾ ನಾವಿದ್ದೇವೆ, ನೀವು ನಮಗೆ ಬೇಕು. ಚುನಾವಣೆಗೆ ಸ್ಪರ್ಧಿಸಲೇಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಮತ್ತೊಂದೆಡೆ ಶಿವಕುಮಾರ್ ಅವರು ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಇದು ಮಾಡಾಳ್ ಕುಟುಂಬಕ್ಕೆ ಇರಿಸು ಮುರಿಸು ತಂದೊಡ್ಡಿದೆ.
ರೊಚ್ಚಿಗೆದ್ದ ಶಿವಕುಮಾರ್ ಬೆಂಬಲಿಗರು
ಚನ್ನಗಿರಿಯ ಐಬಿ ಸರ್ಕಲ್ ಬಳಿ ಶಿವಕುಮಾರ್ ಅವರ ಭಾವಚಿತ್ರವಿರುವ ಫ್ಲೆಕ್ಸ್ ಹರಿದು ಹಾಕಿದ್ದರು. ಆದರೂ ಶಿವಕುಮಾರ್ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು ಸುಮ್ಮನಿದ್ದರು. ನಂತರ ಮಾಡಾಳ್ ವಿರೂಪಾಕ್ಷಪ್ಪನವರು ಫ್ಲೆಕ್ಸ್ ಕಿತ್ತು ಹಾಕಿದ್ದಾರೆ ಎಂಬ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶಿವಕುಮಾರ್ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರು ರೊಚ್ಚಿಗೆದ್ದಿದ್ದು, ಬೀದಿಗಿಳಿದು ಬಿಜೆಪಿ ಪರ ಘೋಷಣೆ ಹಾಕಿದ್ದಾರೆ.
ನಾವು ಶಿವಕುಮಾರ್ ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಭ್ರಷ್ಟರಿಗೆ ಮಣೆ ಹಾಕುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ. ಪ್ರಾಮಾಣಿಕ ವ್ಯಕ್ತಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ. ಮಾಡಾಳ್ ವಿರೂಪಾಕ್ಷಪ್ಪನವರು ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದಾರೆ. ಆದರೂ ಕೂಡ ಬಿಜೆಪಿ ನಾಯಕರು ಬಹಿರಂಗವಾಗಿ ಏನನ್ನೂ ಹೇಳುತ್ತಿಲ್ಲ.
ಒಂದೆಡೆ ಮಾಡಾಳ್ ಕುಟುಂಬಕ್ಕೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಮೂಲಗಳು ಹೇಳಿದರೆ, ಮತ್ತೊಂದೆಡೆ ಮಾಡಾಳ್ ವಿರೂಪಾಕ್ಷಪ್ಪನವರ ಕುಟುಂಬ ತಮಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮುನ್ನಡೆಯುತ್ತಿದೆ. ಈಗ ಫ್ಲೆಕ್ಸ್ ಹರಿದು ಹಾಕಿರುವುದು ಬಣ ಬಡಿದಾಟಕ್ಕೂ ಕೂಡ ಕಾರಣವಾಗಿದೆ. ಆರೋಪ - ಪ್ರತ್ಯಾರೋಪವೂ ಜೋರಾಗುತ್ತಿದೆ. ಜಗಳವೂ ನಡೆದಿದೆ. ಮಾಡಾಳ್ ಪುತ್ರ ಮಲ್ಲಿಕಾರ್ಜುನ್ ಪರವೂ ಘೋಷಣೆಗಳು ಕೇಳಿಬಂದಿವೆ.
ಈ ಬೆಳವಣಿಗೆ ಕುರಿತು ಮಾತನಾಡಿದ ಚನ್ನಗಿರಿಯ ಸಂಭಾವ್ಯ ಅಭ್ಯರ್ಥಿ ಶಿವಕುಮಾರ್, ನಿನ್ನೆ ಮಧ್ಯಾಹ್ನ ಫ್ಲೆಕ್ಸ್, ಬ್ಯಾನರ್ ಹರಿದುಹಾಕಿದ್ದಾರೆ. ಇದು ಯಾರಿಗೂ ಶ್ರೇಯಸ್ಸು ತರುವಂತಹದ್ದಲ್ಲ. ಇದು ಒಳ್ಳೆಯ ವಿಚಾರ ಅಲ್ಲ. ನಮ್ಮ ಪಾರ್ಟಿಯವರೇ, ನಮ್ಮ ಜನಗಳೇ ಪ್ರಧಾನಿ ಮೋದಿ ಇರುವಂತಹ ಬ್ಯಾನರ್‌ಗಳನ್ನು ಹರಿದುಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮತ್ತೆ ಮರುಕಳಿಸಬಾರದು. ಚುನಾವಣೆ ಅಂದಮೇಲೆ ಆಕಾಂಕ್ಷಿಗಳು ಇರುವುದು ಸಹಜ. ಒಬ್ಬರಿಗೆ ಟಿಕೆಟ್ ಸಿಗುತ್ತದೆ. ಎಲ್ಲರೂ ಗೆಲುವಿಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಇಲ್ಲಿ ಯಾವ ಬಣ ಬಡಿದಾಟವೂ ಶುರುವಾಗಿಲ್ಲ. ಇದೆಲ್ಲಾ ತಾತ್ಕಾಲಿಕ ಮಾತ್ರ. ಬಿಜೆಪಿಯಲ್ಲಿ ಶಿಸ್ತು ಇದೆ. ಎಲ್ಲರೂ ಇದನ್ನು ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಎಂದರು. ಹಾಗೆಯೇ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಶಿವಕುಮಾರ್ ಬೆಂಬಲಿಗರ ನಡುವೆ ವಾಕ್ಸಮರ, ಜಟಾಪಟಿ, ಗದ್ದಲ, ಆರೋಪ, ಪ್ರತ್ಯಾರೋಪ ನಡೆದಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ರೀತಿಯ ಗಲಾಟೆ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications