ಪದೇ ಪದೇ ಕೆಣಕಿದರೆ ಸುಮ್ಮನಿರಲ್ಲ: ಎಂ.ಪಿ ರೇಣುಕಾಚಾರ್ಯ ಈ ಎಚ್ಚರಿಕೆ ಕೊಟ್ಟಿದ್ಯಾರಿಗೆ...?
ದಾವಣಗೆರೆ, ನವೆಂಬರ್ 04: ನನ್ನನ್ನು ಪದೇ ಪದೇ ಕೆಣಕಿದರೆ, ಟೀಕಿಸಿದರೆ ಸುಮ್ಮನೆ ಇರಲ್ಲ. ಶಾಸಕರಾಗಿ ಆರು ತಿಂಗಳಿಂದ ಹೊನ್ನಾಳಿ-ನ್ಯಾಮತಿ ಅವಳಿ ಕ್ಷೇತ್ರಕ್ಕೆ ಎಷ್ಟು ಅನುದಾನವನ್ನು ತಂದಿದ್ದೀರಿ ಎಂಬ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಶಾಸಕ ಡಿ.ಜಿ.ಶಾಂತನಗೌಡರಿಗೆ ಸವಾಲು ಹಾಕಿದ್ದಾರೆ.
ಹೊನ್ನಾಳಿ ತಾಲೂಕಿನ ಕೆಂಚಿಕೊಪ್ಪ-ಆರುಂಡಿ ಗ್ರಾಮಗಳ ಮಧ್ಯೆ ಬೆಳೆ ಹಾನಿ ಪರಿಶೀಲನೆ ನಡೆಸಿದ ಎಂ.ಪಿ.ರೇಣುಕಾಚಾರ್ಯ ರೈತರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಶಾಸಕನಾಗಿದ್ದ ವೇಳೆ ಹೊನ್ನಾಳಿ - ನ್ಯಾಮತಿ ಅವಳಿ ಕ್ಷೇತ್ರಕ್ಕೆ ನಾಲ್ಕೂವರೆ ಸಾವಿರ ಕೋಟಿ ಅನುದಾನ ತಂದಿದ್ದೇನೆ. ಉಳಿದಿರುವ ಒಂದು ಸಾವಿರ ಕೋಟಿ ಅನುದಾನದಲ್ಲಿ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕ್ಷೇತ್ರಕ್ಕೆ ನೀವು ತಂದಿರುವ ಅನುದಾನ ಎಷ್ಟು ಎಂದು ಪ್ರಶ್ನಿಸಿದರು.

ರಾಜ್ಯದ 224 ಕ್ಷೇತ್ರಗಳಿಗೆ ಮುಖ್ಯಮಂತ್ರಿಯವರು ಕ್ಷೇತ್ರಕ್ಕೆ ತಲಾ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ನನ್ನ ಬಗ್ಗೆ ಮಾತನಾಡುವ ಶಾಂತನಗೌಡರು ಕ್ಷೇತ್ರಕ್ಕೆ ಅನುದಾನವನ್ನು ತಂದಿರುವುದರ ಕುರಿತು ದಾಖಲೆಗಳನ್ನು ಜನತೆ ಮುಂದಿಡಲಿ ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು, ಕ್ಷೇತ್ರಕ್ಕೆ ಬರಪೂರ ಅನುದಾನ ಬಿಡುಗಡೆ ಮಾಡಿದ್ದರು. ನಾನು ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಈಗ ನೀವು ಮಾಡುತ್ತಿರುವುದು ಮುಂದುವರೆದ ಕಾಮಗಾರಿ ಅಷ್ಟೇ ಎಂದು ತಿರುಗೇಟು ನೀಡಿದರು.
ನಬಾರ್ಡ್ ಯೋಜನೆಯಡಿ ಕ್ಷೇತ್ರಗಳಿಗೆ ನೀರು ತುಂಬಿಸಲು 515 ಕೋಟಿ ಅನುದಾನ ತಂದಿದ್ದು ನಾವು, ಪದವಿಪೂರ್ವ ಕಾಲೇಜುಗಳು, ಪ್ರಾಥಮಿಕ ಶಾಲೆಗಳ ಕಟ್ಟಡ, ಸಿಮೆಂಟ್ ರಸ್ತೆ ನಮ್ಮ ಅಧಿಕಾರ ಅವಧಿಯಲ್ಲೇ ನಡೆದಿದೆ ಎಂದು ಹೇಳಿದರು.
ನಾನೇನು ಅರ್ಜಿ ಹಾಕಿದ್ದೇನೆಯೇ?
ರೇಣುಕಾಚಾರ್ಯ ಅವರು ಕಾಂಗ್ರೆಸ್ ಸೇರಲು ನನ್ನ ವಿರೋಧವಿದೆ ಎಂಬ ಶಾಂತನಗೌಡರ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ನಾನೇನು ಅರ್ಜಿ ಹಾಕಿಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆಯೇ? ಎಂದು ಪ್ರಶ್ನೆ ಮಾಡಿದರು.
ನಾನು ಬಿಜೆಪಿ ಬಿಡುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಅದೇ ರೀತಿ ಕಾಂಗ್ರೆಸ್ ಸೇರುತ್ತೇನೆಂದು ಹೇಳಿಲ್ಲ. ಬಿಜೆಪಿಯಲ್ಲಿ ಈಗಲೂ ನಾನು ಸಾಮಾನ್ಯ ಕಾರ್ಯಕರ್ತ. ಕಾಂಗ್ರೆಸ್ ಸೇರಲು ನಾನು ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರಾದ ಕೃಷ್ಣಭೈರೇಗೌಡ, ಎಸ್. ಎಸ್. ಮಲ್ಲಿಕಾರ್ಜುನ್, ಚೆಲುವರಾಯ ಸ್ವಾಮಿ ಅವರನ್ನು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಭೇಟಿ ಮಾಡಿದ್ದೆ. ರಾಜ್ಯದ ಮುಖ್ಯಮಂತ್ರಿಯನ್ನು ಯಾರು ಬೇಕಾದರೂ ಭೇಟಿ ಮಾಡಬಹುದು ಎಂದು ಹೇಳಿದರು.
ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ. ಈ ಹಿಂದೆ ಶಾಂತನಗೌಡರು ಎರಡು ಬಾರಿ ಶಾಸಕರಾಗಿದ್ದಾಗಲೂ ನಾನು ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ಕ್ಷೇತ್ರದಲ್ಲಿ ಬರಗಾಲ ಇರುವುದರಿಂದ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಅವರನ್ನು ಭೇಟಿ ಮಾಡಿದರೆ ಶಾಂತನಗೌಡರಿಗೆ ಏಕೆ ಸಿಟ್ಟು ಎಂದು ಪ್ರಶ್ನಿಸಿದರು.
ನನ್ನ ಬಗ್ಗೆ ಹಗರುವಾಗಿ ಮಾತನಾಡುವುದನ್ನು ನಿಲ್ಲಿಸಿ. ಶಾಸಕರಾಗಿ ಆರು ತಿಂಗಳಾಗಿದ್ದರೂ ಎಷ್ಟು ಬಾರಿ ಕ್ಷೇತ್ರದಲ್ಲಿ ಬರ ಅಧ್ಯಯನ ನಡೆಸಿದ್ದೀರಿ? ಅಭಿವೃದ್ದಿ ಮತ್ತು ಬರಗಾಲದಲ್ಲಿ ರಾಜಕೀಯ ಮಾಡಬಾರದೆಂದು ಸುಮ್ಮನಿದ್ದೇನೆ. ಇದು ನನ್ನ ದೌರ್ಬಲ್ಯವಲ್ಲ. ನಿಮಗಿಂತ 10 ಪಟ್ಟು ಮಾತನಾಡಲು ನನಗೂ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.
ಪದೇ ಪದೇ ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ. ನಾನು ಜನರ ಪರವಾಗಿ ಅಧಿಕಾರ ಇರಲಿ, ಇಲ್ಲದೇ ಇರಲಿ ಹೋರಾಟ ಮಾಡುತ್ತೇನೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಅಬ್ಬರಿಸಿದರು.











Click it and Unblock the Notifications