ಮಾರ್ಚ್ 3ಕ್ಕೆ ರಾಜ್ಯಾದಂತ ತೆರೆ ಕಾಣಲಿದೆ ಅನ್ನದಾತನ ಕುರಿತಾದ ಸಿನಿಮಾ, ವಿಜಯ್ ರಾಘವೇಂದ್ರ ಹೇಳಿದ್ದೇನು?
ನಟ ವಿಜಯ್ ರಾಘವೇಂದ್ರ ಅಭಿನಯದ ಕಾಸಿನಸರ ಚಿತ್ರ ಮಾರ್ಚ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಈ ಬಗ್ಗೆ ನಟ ವಿಜಯ್ ರಾಘವೇಂದ್ರ ಏನು ಹೇಳಿದ್ದಾರೆ ಎಂದು ಇಲ್ಲಿ ಗಮನಿಸಿ.
ದಾವಣಗೆರೆ, ಫೆಬ್ರವರಿ, 24: ಚಿನ್ನಾರಿ ಮುತ್ತಾ ಖ್ಯಾತಿಯ ನಟ ವಿಜಯ್ ರಾಘವೇಂದ್ರ ಹಾಗೂ ಹರ್ಷಿಕಾ ಪೂಣಚ್ಚ ನಟನೆಯ "ಕಾಸಿನಸರ" ಚಿತ್ರ ವು ಮಾರ್ಚ್ 3ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ನೇಟಿವ್ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ "ಕಾಸಿನಸರ" ಚಿತ್ರವು ಮಾರ್ಚ್ 3ರಂದು ರಾಜ್ಯದ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ಎನ್.ಆರ್. ನಂಜುಂಡೇಗೌಡ ದಾವಣಗೆರೆಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೊದಲ ಸಿನಿಮಾ ಸಂಕ್ರಾಂತಿ. ಅಂದಿನಿಂದ ಇಂದಿನವರೆಗೂ ಸಮಾಜದ ಆಗುಹೋಗುಗಳು ಕುರಿತಾದ ಬೆಳಕು ಚೆಲ್ಲುವಂತಹ ಸಿನಿಮಾಗಳನ್ನು ಮಾಡಿದ್ದೇನೆ. ಇದೀಗ ಕೃಷಿ ಕುರಿತಾದ ಸಿನಿಮಾ ಮಾಡಿದ್ದೇನೆ. "ಬಂಗಾರದ ಮನುಷ್ಯ" ಚಿತ್ರಕ್ಕೂ ಇದಕ್ಕೂ ಸಂಬಂಧ ಇಲ್ಲ. ಕೃಷಿ ಬಗ್ಗೆ ತಮಿಳು, ತೆಲುಗು ಸೇರಿದಂತೆ ಸಿನಿಮಾಗಳು ಬಂದಿವೆ. ಆ ಚಿತ್ರಗಳಿಗೂ ನಮ್ಮ ಚಿತ್ರಕ್ಕೂ ಹೋಲಿಕೆ ಇರುವುದಿಲ್ಲ ಎಂದು ಹೇಳಿದರು.
"ಮಗಳೇ ಹೆಗಲೇ ವಿಮಾನ ನಿನಗೆ, ನಿನ್ನ ನಗುವೇ ಪ್ರಧಾನ ನನಗೆ" ಎನ್ನುತ್ತ ಮಗಳನ್ನು ನೆನೆದು ಭಾವುಕರಾದ ಶ್ರೀನಗರ ಕಿಟ್ಟಿ!
ಒಬ್ಬ ಪ್ರಗತಿಪರ ರೈತನ ಸುತ್ತಲೂ ತಿರುಗುವುದೇ ಕಾಸಿನಸರ ಚಿತ್ರದ ಕಥಾಹಂದರವಾಗಿದೆ. ಇಲ್ಲಿ ಕಾಸಿನಸರಕ್ಕೆ ಅದರದ್ದೇ ಆದ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಅದನ್ನು ಇಲ್ಲಿ ಕೃಷಿಭೂಮಿಗೆ ಹೋಲಿಸಲಾಗಿದೆ. ಇಂದಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳು ದೂರವಾಗುತ್ತಿವೆ. ಈ ಕುರಿತು ಚಿತ್ರ ಬೆಳಕು ಚೆಲ್ಲಲಿದೆ ಎಂದು ಮಾಹಿತಿ ನೀಡಿದರು.

ಚಿತ್ರದದಲ್ಲಿ ನಟನೆ ಮಾಡಿರುವವ ವಿವರ
ದೊಡ್ಡನಾಗಯ್ಯ ಚಿತ್ರದ ನಿರ್ಮಾಪಕರಾಗಿದ್ದು, ಎನ್.ಆರ್. ನಂಜುಂಡೇಗೌಡ ಇದನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಉಮಾಶ್ರೀ, ನೀನಾಸಂ ಅಶ್ವತ್, ಸಂಗೀತಾ, ಸುಧಾ ಬೆಳವಾಡಿ, ಹನುಮಂತೇಗೌಡ, ಮಂಡ್ಯ ರಮೇಶ್ ಕೂಡ ಅಭಿನಯಿಸಿದ್ದಾರೆ. ಎಸ್.ಜಿ. ಸಿದ್ಧರಾಮಯ್ಯ ಸಂಭಾಷಣೆ, ಛಾಯಗ್ರಾಹಣ ಎಚ್.ಸಿ.ವೇಣು, ಸಂಗೀತ ಶ್ರೀಧರ್ ವಿ. ಸಂಭ್ರಮ್, ಸಂಕಲನ ಸುರೇಶ್ ಅರಸ್, ನಿರ್ಮಾಣ ವಿನ್ಯಾಸ ಬಿ.ರಾಮಮೂರ್ತಿ, ಕಲೆ ವಸಂತರಾವ್ ಕುಲಕರ್ಣಿ, ಸಹ ನಿರ್ದೇಶನ ಕೋಲಾರ ನಾಗೇಶ್, ನಿರ್ಮಾಣ ನಿರ್ವಹಣೆ ರವಿಶಂಕರ್ ಹಾಗೂ ಪಿಆರ್‌ಒ ಆಗಿ ನಾಗೇಂದ್ರ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.

ನಟ ವಿಜಯ್ ರಾಘವೇಂದ್ರ ಹೇಳಿದ್ದೇನು?
ನಾಯಕ ನಟ ವಿಜಯ್ ರಾಘವೇಂದ್ರ ಮಾತನಾಡಿ, ಇಂದಿನ ದಿನಗಳಲ್ಲಿ ಚಿತ್ರ ಬಿಡುಗಡೆ ಆದ ನಂತರ ಪ್ರಮೋಷನ್ ಎಷ್ಟು ಮುಖ್ಯವೋ, ಬಿಡುಗಡೆಗೆ ಮುನ್ನವೂ ಅಷ್ಟೇ ಮುಖ್ಯವಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ 500ರಿಂದ 1000 ಜನರು ನೋಡಿದಾಕ್ಷಣ ಸಿನಿಮಾ ನೋಡಲು ಜನರು ಬರುವುದಿಲ್ಲ.
ಮನಸ್ಸನ್ನು ಮುಟ್ಟಿದಾಗ ಮಾತ್ರ ಸಿನಿಮಾ ನೋಡುವ ಆಸೆ ಹುಟ್ಟುತ್ತದೆ. ಈ ಚಿತ್ರದಲ್ಲಿ ಪ್ರಗತಿಪರ ಕೃಷಿಕನಾಗಿ ಅಭಿನಯಿಸಿದ್ದೇನೆ. ಇದೊಂದು ರೀತಿಯ ವಿಭಿನ್ನ ಅಭಿನಯವಾಗಿದೆ. ಯಾಕೆಂದರೆ ನಗರ ಪ್ರದೇಶದಲ್ಲಿ ಬೆಳೆದ ಕಾರಣ ಕೃಷಿ ಮಾಡಿದ ಅನುಭವ ಇಲ್ಲ. ಇಂತಹದ್ದೊಂದು ಅವಕಾಶ ನೀಡಿದ ನಿರ್ದೇಶಕ ನಂಜುಂಡೇಗೌಡರಿಗೆ ಆಭಾರಿಯಾಗಿರುತ್ತೇನೆ ಎಂದರು.

ಬೇರೆ ಬೇರೆ ಜಿಲ್ಲೆಗಳಿಗೂ ಹೋಗುತ್ತೇವೆ
ದಾವಣಗೆರೆಯಿಂದಲೇ ಪ್ರಚಾರ ಶುರು ಮಾಡಿದ್ದೇವೆ. ಬೇರೆ ಬೇರೆ ಜಿಲ್ಲೆಗಳಿಗೂ ಹೋಗುತ್ತೇವೆ. ಮನರಂಜನೆ ನೆಪವಾಗಿಟ್ಟುಕೊಂಡು ಗಂಭೀರತೆಯೂ ಇರುವಂತಹ ಸಿನಿಮಾ ಇದಾಗಿದೆ. ಭೂಮಾತೆಯ ಜೊತೆಗಿನ ಒಡನಾಟ ನನಗೆ ಅದ್ಭುತ ಅನುಭವ ನೀಡಿದೆ. ಕೃಷಿಯಲ್ಲಾಗುತ್ತಿರುವ ಏರುಪೇರು, ಸಮಸ್ಯೆಗಳು ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವಂತಹ ಚಿತ್ರ ಇದಾಗಿದೆ ಎಂದರು. ರೈತರ ಬಗ್ಗೆ ಸಿನಿಮಾ ಮಾಡಿದರೆ ನೋಡಲು ಬರುವುದಿಲ್ಲ ಎಂಬ ಅಳುಕಿತ್ತು. ಶೂಟಿಂಗ್ ಮುಗಿಯುವಷ್ಟರಲ್ಲಿ ಇದು ದೂರಾಯಿತು. ಚಿತ್ರದ ಕಥೆ ಅಷ್ಟು ಚೆನ್ನಾಗಿದೆ. ಖುಷಿಯಿಂದಲೇ ಅಭಿನಯಿಸಿದ್ದೇನೆ ಎಂದರು.

ಇದೊಂದು ವಿಭಿನ್ನ ಸಿನಿಮಾವಾಗಿದೆ
ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ನನ್ನ ಕೆರಿಯರ್‌ನಲ್ಲಿ ಇದೊಂದು ವಿಭಿನ್ನ ಸಿನಿಮಾವಾಗಿದೆ. ಕಮರ್ಷಿಯಲ್, ಗ್ಲಾಮರಸ್‌ಗೆ ಹೆಚ್ಚು ಒತ್ತು ನೀಡುವ ಇಂದಿನ ಕಾಲದಲ್ಲಿ ಕೃಷಿಗೆ ಸಂಬಂಧಿಸಿದ ಸಿನಿಮಾದಲ್ಲಿ ನಟಿಸಿದ್ದು ತುಂಬಾನೇ ಸಂತಸ ತಂದಿದೆ. ಪ್ರತಿಯೊಬ್ಬರಿಗೂ ಇಷ್ಟವಾಗುವ ಚಿತ್ರ ಇದಾಗಿದೆ. ಸಾಕಷ್ಟು ವಿಚಾರಗಳು ಗೊತ್ತಿರಲಿಲ್ಲ. ಈ ಸಿನಿಮಾದ ಮೂಲಕ ಹಳ್ಳಿ ಜೀವನ, ಕೃಷಿ ಕುರಿತಾಗಿ ತಿಳಿದುಕೊಂಡಿದ್ದೇವೆ ಎಂದರು.
ನಾಟಿ ಮಾಡುವಾಗ ರೈತ ಮಹಿಳೆಯರು ಭತ್ತದ ಸಸಿಗಳನ್ನು ನೆಟ್ಟರು. ನಾವು ಕ್ಯಾಮೆರಾ ನೋಡಿ ವಾಪಸ್ ತಿರುಗುತ್ತಿದ್ದಂತೆಯೇ ಅವರದ್ದೂ ಒಂದು ಸಾಲು ಮುಗಿದು ಹೋಗಿರುತ್ತಿತ್ತು. ಅವರದ್ದು ಕಾಯಕ. ರೈತ ಮಹಿಳೆಯರು ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದರು. ಸಿನಿಮಾದಲ್ಲಿಈ ದೃಶ್ಯವನ್ನು ನೋಡಿದವರು ಥ್ರಿಲ್ ಆಗುವುದು ಖಚಿತ. ಹಾಗೆಯೇ ಪ್ರತಿಯೊಬ್ಬರೂ ಸಿನಿಮಾ ನೋಡಿ ಹರಸಿ ಎಂದು ಮನವಿ ಮಾಡಿದರು.
ಈ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರ ಜೊತೆ ಕೆಲಸ ಮಾಡಿದ್ದು ತುಂಬಾನೇ ಖುಷಿ ಕೊಟ್ಟಿದೆ. ವಿಜಯ್ ರಾಘವೇಂದ್ರ, ಉಮಾಶ್ರೀ, ನಿರ್ದೇಶಕಾರದ ನಂಜುಂಡೇಗೌಡ ಸೇರಿದಂತೆ ಹಲವು ಹಿರಿಯ ಕಲಾವಿದರಿದ್ದಾರೆ. ಇಂತಹ ನಟರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದರು.

ಇದು ಸಾಮಾಜಿಕ ಹೊಣೆಗಾರಿಕೆ ಆಧಾರಿತ ಸಿನಿಮಾ
ಚಿತ್ರಕ್ಕೆ ಸಂಭಾಷಣೆ ಬರೆದಿರುವ ಸಾಹಿತಿ ಎಸ್. ಜಿ.ಸಿದ್ದರಾಮಯ್ಯ ಮಾತನಾಡಿ, ಸಂಕ್ರಾಂತಿ ಸಿನಿಮಾದಿಂದ ಇಲ್ಲಿಯವರೆಗೆ ನಂಜುಂಡೇಗೌಡರು ಸಾಮಾಜಿಕ ಹೊಣೆಗಾರಿಕೆ ಆಧಾರಿತ ಸಿನಿಮಾ ಮಾಡಿಕೊಂಡು ಬಂದಿದ್ದಾರೆ. ಕೃಷಿ ಜೀವನ ಜೈವಿಕ ಸತ್ವಕ್ಕೆ ಪೂರಕವಾಗಿರಬೇಕೇ ವಿನಃ ಮಾರಕವಾಗಬಾರದು. ಗ್ಲೋಬಲ್ ವಾರ್ಮಿಂಗ್ ಜಾಗತಿಕ ಸಮಸ್ಯೆ, ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಮೂಲ ತಳಿಗಳನ್ನು ನಾಶ ಮಾಡುತ್ತಿವೆ. ಕೃಷಿ ಕ್ಷೇತ್ರವು ಕೈಗಾರಿಕೆ ಅಥವಾ ಉದ್ಯಮ ಆಗಬಾರದು, ಅನ್ನದಾನ ಆಗಬೇಕು. ಜೀವ ಸರಪಳಿ ತುಂಡರಿಸಬಾರದು ಎನ್ನುವ ಸಂದೇಶ ಚಿತ್ರದಲ್ಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಟ ನೀನಾಸಂ ಅಶ್ವತ್ಥ್, ಚಿತ್ರದ ನಿರ್ಮಾಪಕ ದೊಡ್ಡ ನಾಗಯ್ಯ, ಎಸ್.ಜಿ. ಸಿದ್ಧರಾಮಯ್ಯ, ಶ್ರೀಧರ್ ಸಂಭ್ರಮ್, ಬಿ. ರಾಮಮೂರ್ತಿ, ಕೋಲಾರ ನಾಗೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications