Honnali constituency analysis: ಬಿಜೆಪಿ ಭದ್ರಕೋಟೆಯನ್ನು ಕಾಪಾಡಲು ರೇಣುಕಾಚಾರ್ಯ ಪ್ಲ್ಯಾನ್ ಏನು?
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಹಾಗೆಯೇ ರಾಜಕೀಯ ನಾಯಕರು ತಮ್ಮ ಕ್ಷೇತ್ರಗಳನ್ನು ಬಿಟ್ಟು ಕದಲದೇ ಭರ್ಜರಿ ಮತಬೇಟೆಗೆ ಮುಂದಾಗಿದ್ದಾರೆ. ಹಾಗೆಯೇ ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ತಯಾರಿಗಳು ಯಾವ ರೀತಿ ಇವೆ ಎನ್ನುವುದನ್ನು ನೋಡೋಣ ಬನ್ನಿ.
ಸದ್ಯ ದಾವಣೆಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಇಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರತಿನಿಧಿಸುತ್ತಿರುವುದು ಮತ್ತಷ್ಟು ಬಿಜೆಪಿಗೆ ಗೆಲ್ಲುವ ಭರವಸೆ ಮೂಡಿಸಿದೆ. ಈಗಾಗಲೇ ಮೂರು ಬಾರಿ ಶಾಸಕರಾಗಿ, ಸಚಿವರೂ ಆಗಿದ್ದ ರೇಣುಕಾಚಾರ್ಯ ಇದೀಗ ನಾಲ್ಕನೇ ಬಾರಿ ಗೆಲುವು ಸಾಧಿಸಲೇಬೇಕು ಎನ್ನುವ ಹಠದಲ್ಲಿದ್ದಾರೆ. ಹಾಗಾದರೆ ಇಲ್ಲಿ ಈ ಬಾರಿ ರೇಣುಕಾಚಾರ್ಯರಿಗೆ ಪ್ರಬಲ ಎದುರಾಳಿಗಳು ಯಾರು ಎಂದು ತಿಳಿಯೋಣ ಬನ್ನಿ.
ಹೊನ್ನಾಳಿ ವಿಧಾನಸಭಾ ಕ್ಷೇತ್ರ ಕೂಡ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರವಾಗಿದೆ. ಮುಖ್ಯವಾಗಿ ತುಂಗಭದ್ರಾ ನದಿಯ ದಡದಲ್ಲಿರುವ ಹೊನ್ನಾಳಿ, ಹೆಚ್ಚು ಭತ್ತ ಬೆಳೆಯುವ ಪ್ರದೇಶವೂ ಆಗಿದೆ. ಸದ್ಯ ಬಿಜೆಪಿಯ ಭದ್ರಕೋಟೆಯಾಗಿರುವ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಪಿ. ರೇಣುಕಾಚಾರ್ಯ ಕಣಕ್ಕೆ ಇಳಿಯಲಿದ್ದಾರೆ.

ಹೊನ್ನಾಳಿ ಕ್ಷೇತ್ರದ ವಿವರ
ಹೊನ್ನಾಳಿಯು ದಾವಣಗೆರೆ ಜಿಲ್ಲೆಯ ಒಂದು ತಾಲೂಕು ಆಗಿದೆ. 1997 ಆಗಸ್ಟ್ 15ರಂದು ಶಿವಮೊಗ್ಗ ಜಿಲ್ಲೆಯಿಂದ ಬೇರ್ಪಟ್ಟ ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕುಗಳು ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾದವು. ಈ ತಾಲೂಕಿನಲ್ಲಿ ಚಿನ್ನ ಸ್ವಲ್ಪ ಮಟ್ಟಿಗೆ ಸಿಗುತ್ತದೆ. ಈ ಪ್ರದೇಶದಲ್ಲಿ ಚಿನ್ನ ತೆಗೆಯುವ ಕೆಲಸವನ್ನು ಮಾಡಲಾಗಿತ್ತು. ಆದರೆ ಅದು ಅಷ್ಟು ಲಾಭದಾಯಕವಾಗಲಿಲ್ಲ ಎಂದು ಕೈಬಿಡಲಾಗಿತ್ತು. ಇಲ್ಲಿ ಅಕ್ಕಿ ಮತ್ತು ಎಣ್ಣೆ ಗಿರಣಿಗಳಿವೆ. ಕೈಮಗ್ಗದ ಹತ್ತಿ ಬಟ್ಟೆಯನ್ನು ಸಹ ತಯಾರಿಸಲಾಗುತ್ತದೆ.

ಗೆಲುವಿನ ವಿಶ್ವಾಸದಲ್ಲಿ ಎಂಪಿಆರ್
ಇದುವರೆಗೂ ಮೂರು ಬಾರಿ ಮಾತ್ರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಮೂರು ಬಾರಿಯೂ ಬಿಜೆಪಿಯಿಂದ ಗೆದ್ದಿರುವುದು ಎಂ.ಪಿ.ರೇಣುಕಾಚಾರ್ಯರೇ ಆಗಿದ್ದಾರೆ. 2004, 2008ರಲ್ಲಿ ಗೆಲುವು ಸಾಧಿಸಿದ್ದ ರೇಣುಕಾಚಾರ್ಯತ ಸತತ ಗೆಲುವಿನ ಕನಸು ನನಸಾಗಲೇ ಇಲ್ಲ. ನಂತರ 2013ರಲ್ಲಿ ರೇಣುಕಾಚಾರ್ಯ ಸೋಲನುಭವಿಸಿದರು. ಬಳಿಕ 2018ರಲ್ಲಿ ಮತ್ತೆ ಗೆಲುವಿನ ನಗೆಯನ್ನು ಬೀರಿದ್ದರು.

ಶಾಸಕ ಜನರ ಗಮನ ಸೆಳೆದಿದ್ದು ಹೇಗೆ?
ರೇಣುಕಾಚಾರ್ಯ ಈ ಹಿಂದೆ 2009ರಲ್ಲಿ ಅಬಕಾರಿ ಸಚಿವರಾಗಿದ್ದಾಗ ನರ್ಸ್ ಜಯಲಕ್ಷ್ಮೀ ವಿರುದ್ಧ ಆರೋಪಿಸಿದ್ದರು. ಆಗ ಕ್ಷೇತ್ರದಲ್ಲಿ ರೇಣುಕಾಚಾರ್ಯಗೆ ಭಾರಿ ಹಿನ್ನಡೆ ಉಂಟಾಗಿತ್ತು. ಆದರೆ ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಗಮನ ಸೆಳೆದಿದ್ದರು. ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ, ಲಾಕ್‌ಡೌನ್ ವೇಳೆಯಲ್ಲಿ ಆಹಾರ ಸಾಮಗ್ರಿ ಪೂರೈಕೆ ಸೇರಿದಂತೆ, ಕ್ಷೇತ್ರದ ಜನರ ಕಷ್ಟಗಳಿಗೆ ಉತ್ತಮವಾಗಿ ಸ್ಪಂದಿಸಿದ್ದರು. ಇತ್ತೀಚಿಗಷ್ಟೇ ಶಾಸಕರ ಸಹೋದರನ ಪುತ್ರ ಅಪಘಾತದಲ್ಲಿ ಸಾವನ್ನಪ್ಪಿದ್ದು, ಇದೇ ಅನುಕಂಪವೂ ಇದೀಗ ಅವರ ಮೇಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಟಿಕೆಟ್ ಆಕಾಂಕ್ಷಿಗಳ ವಿವರ
ಎಂ.ಪಿ.ರೇಣುಕಾಚಾರ್ಯ ಅವರು ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮತ್ತೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಸದ್ಯ ಅವರಿಗೆ ಅಲ್ಲಿ ಯಾವುದೇ ಪೈಪೋಟಿ ಕೊಡುವವರು ಇಲ್ಲ. ಹಾಗೆಯೇ ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಟೆಕೆಟ್ ಬಯಸಿದ್ದಾರೆ. ಇವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಕಾಂಗ್ರೆಸ್ ಮುಖಂಡ ಬಿ. ಸಿದ್ದಪ್ಪ ಸೇರಿದಂತೆ ಮತ್ತತರರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

ಜಾತಿವಾರು ಮತದಾರರ ವಿವರ
ಹೊನ್ನಾಳಿ ಕ್ಷೇತ್ರದಲ್ಲಿ ಜಾತಿವಾರು ಮತದಾರರ ವಿವರವನ್ನು ಇಲ್ಲಿ ನೀಡಲಾಗಿದೆ (ಅಂದಾಜು). ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ.
ಲಿಂಗಾಯತ ಮತದಾರರ ಸಂಖ್ಯೆ -60,000
ಕುರುಬ ಮತದಾರರು - 37,935
ಮುಸ್ಲಿಂ ಮತದಾರರು -13,780,
ಎಸ್‌ಟಿ ಮತದಾರರು - 11,000
ಎಸ್‌ಸಿ ಮತದಾರರು - 28,500
ಇನ್ನು ಮರಾಠ ಮತದಾರರು - 3,000
ಹೀಗೆ ಕ್ಷೇತ್ರದಲ್ಲಿ ಜಾತಿವಾರು ಮತದಾರರನ್ನು ನೋಡಿದರೆ, ಇಲ್ಲಿ ಲಿಂಗಾಯತ ಮತದಾರರೇ ಹೆಚ್ಚಿದ್ದಾರೆ ಎನ್ನುವುದನ್ನು ಕಾಣಬಹುದಾಗಿದೆ. ಕ್ಷೇತ್ರದಲ್ಲಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಈ ಬಾರಿಯೂ ಯಾರೂ ಪ್ರಬಲ ಪೈಪೋಟಿ ಇಲ್ಲ ಎನ್ನಲಾಗಿದೆ. ಒಂದು ವೇಳೆ ಇದ್ದರೂ ಕೂಡ ಈಗಾಗಲೇ ಜನರ ಕಷ್ಟಗಳಿಗೆ ಸ್ಪಂದಿಸಿದ್ದು, ಇವರೇ ಮತ್ತೆ ಗೆಲುವು ಸಾಧಿಸುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ. ಮತ್ತೊಂದೆಡೆ ನೋಡುವುದಾದರೆ ಮತದಾರರು ಯಾರ ಕಡೆ ಒಲವು ತೋರಲಿದ್ದಾರೆ ಅನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications