ಟಿಕೆಟ್‌ಗೆ ಅರ್ಜಿ ಹಾಕ್ತೇನೆ, 2 ಲಕ್ಷ ಯಾಕೆ ಕೊಡಬೇಕು: ಎಸ್‌ಎಸ್ ಮಲ್ಲಿಕಾರ್ಜುನ
ದಾವಣಗೆರೆ, ನ.28: ಕಾಂಗ್ರೆಸ್ ಮುಖಂಡ ಎಸ್‌ಎಸ್ ಮಲ್ಲಿಕಾರ್ಜುನ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದಾರೆ. ಕೆಪಿಸಿಸಿಗೆ ಟಿಕೆಟ್‌ಗೆ ಅರ್ಜಿ ಹಾಕ್ತೇನೆ. ಪ್ರಾಮಾಣಿಕವಾಗಿ ಇರುವ ನಾನು ಯಾಕೆ ಎರಡು ಲಕ್ಷ ರೂಪಾಯಿ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಭಾರತ್ ಜೊಡೋ, ಸಂವಿಧಾನ ಬಚಾವೋ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಪ್ರಾಮಾಣಿಕವಾಗಿ ಇದ್ದೇನೆ. ಎರಡು ಲಕ್ಷ ಯಾಕೆ ಕೊಡಬೇಕೆಂಬುದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ: ಹೈಕಮಾಂಡ್ ಟಿಕೆಟ್ ಕೊಟ್ಟರೆ ಕಣಕ್ಕಿಳಿಯುತ್ತೇನೆ ಎಂದ ಬಿಜೆಪಿ ಶಾಸಕ
ಆಡಳಿತರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, "ರಾಜ್ಯದಲ್ಲಿರುವುದು ಶೇಕಡಾ 40 ಕಮೀಷನ್ ಸರ್ಕಾರ. ಲೂಟಿಕೋರ ಸರ್ಕಾರ. ಸಾಮಾನ್ಯ ಜನರಿಗೆ ಹೊರೆಯಾಗಿದೆ. ಇಂಥ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರ ಕಿತ್ತೊಗೆಯಬೇಕೆಂಬ ಸಂಕಲ್ಪ ತೊಟ್ಟು ಪ್ರತಿಭಟನೆ ನಡೆಸುತ್ತಿದ್ದೇವೆ. ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಸರ್ಕಾರ ನಡೆಸುವವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ" ಎಂದು ತಿಳಿಸಿದ್ದಾರೆ.
ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ 40% ಕಮೀಷನ್ ಜೋರಾಗಿದೆ. ದಾವಣಗೆರೆಯಲ್ಲಿ ಇದಕ್ಕಿಂತ ಹೆಚ್ಚಾಗಿದೆ. ಕಮೀಷನ್ ಪಡೆಯುವ ಮೂಲಕ ಸರ್ಕಾರ ನಡೆಸಲಾಗುತ್ತಿದೆ. ಈಗಲಾದರೂ ಜನರು ಎಚ್ಚೆತ್ತುಕೊಳ್ಳಬೇಕಿದೆ. ಸಾಕಷ್ಟು ಯೋಜನೆಗಳನ್ನು ತಮ್ಮ ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
*ಭಾರತ್ ಜೋಡೋ ಪಾದಯಾತ್ರೆ*
ನಗರದಲ್ಲಿ ಭಾರತ್ ಜೋಡೋ, ಸಂವಿಧಾನ ಬಚಾವೋ ಪಾದಯಾತ್ರೆ ನಡೆಸಲಾಗಿದೆ. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಾದಯಾತ್ರೆ ಅಂಬೇಡ್ಕರ್ ವೃತ್ತದಲ್ಲಿ ಪ್ರಾರಂಭವಾಗಿ ರಿಂಗ್ ರೋಡ್ ಮಾರ್ಗವಾಗಿ ಪಕ್ಷದ ಕಚೇರಿಗೆ ತೆರಳಿತು.
ಮೆರವಣಿಗೆಯಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಅಯೂಬ್ ಪೈಲ್ವಾನ್, ಸವಿತಾ ಬಾಯಿ ಮಲ್ಲೇಶ್ ನಾಯ್ಕ್, ಕೆ. ಜಿ. ಶಿವಕುಮಾರ್, ಬಸವಂತಪ್ಪ, ಕವಿತಾ ಚಂದ್ರಶೇಖರ್, ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸವಿತಾ ಹುಲ್ಲುಮನಿ ಗಣೇಶ್, ಇಟ್ಟುಗುಡಿ ಮಂಜುನಾಥ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.