Davanagere North constituency; ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ
ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರ. ಒಂದು ಕಾಲದಲ್ಲಿ ಕಾಟನ್ ಮಿಲ್ಸ್ ಕಾರಣಕ್ಕೆ ಜನಪ್ರಿಯ ನಗರವಾಗಿತ್ತು. ಶರವೇಗದಿಂದ ಅಭಿವೃದ್ಧಿ ಹೊಂದಿರುವ ಜಿಲ್ಲೆಯೂ ರಸ್ತೆ, ರೈಲಿನ ಮೂಲಕ ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಕೃಷಿ, ವ್ಯಾಪಾರ, ಉದ್ಯೋಗ, ವಿವಿಧ ವೃತ್ತಿಪರ ಕೋರ್ಸ್‌ಗಳ ಶಿಕ್ಷಣದಿಂದಾಗಿ ದಾವಣಗೆರೆ ಪ್ರಸಿದ್ಧ ನಗರವಾಗಿದೆ. ರಾಜ್ಯದಲ್ಲಿ ಶರವೇಗದಿಂದ ಬೆಳೆಯುತ್ತಿರುವ ನಗರಗಳಲ್ಲಿ ದಾವಣಗೆರೆಯೂ ಒಂದು. ಬೆಂಗಳೂರು-ಪೂಜಾ ರಾಷ್ಟ್ರೀಯ ಹೆದ್ದಾರಿ ದಾವಣಗೆರೆ ಮೂಲಕ ಸಾಗುತ್ತದೆ.
ದಾವಣಗೆರೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದು ನಿಂತಿದೆ. ದೇಶ, ವಿದೇಶಗಳ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಇಂಜಿನಿಯರಿಂಗ್, ಕಾನೂನು, ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿಭಾಗಗಳ ಉನ್ನತ ಶಿಕ್ಷಣ ದೊರೆಯುತ್ತದೆ. ಕೃಷಿ ಮೂಲಕವೂ ದಾವಣಗೆರೆ ಜಿಲ್ಲೆ ಉತ್ತಮ ಹೆಸರು ಪಡೆದಿದೆ. ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಬಳ್ಳಾರಿ ಜಿಲ್ಲೆಗಳ ಜೊತೆ ಗಡಿ ಹಂಚಿಕೊಂಡಿರುವ ದಾವಣಗೆರೆ ರಾಜಕೀಯವಾಗಿಯೂ ಗುರುತಿಸಿಕೊಂಡಿದೆ.

ಶಾಮನೂರು ಶಿವಶಂಕರಪ್ಪ, ಅವರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ ದಾವಣಗೆರೆಯನ್ನು 14 ವರ್ಷಗಳಿಂದ ಪ್ರತಿನಿಧಿಸುತ್ತಿದ್ದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ ಎಂದು ಎರಡು ವಿಧಾನಸಭಾ ಕ್ಷೇತ್ರಗಳು ರಚನೆಯಾದವು. ದಾವಣಗೆರೆ ನಗರದ ಹೊಸ ಭಾಗಗಳು, ಗ್ರಾಮೀಣ ಭಾಗಗಳನ್ನು ಒಳಗೊಂಡ ದಾವಣಗೆರೆ ಉತ್ತರ ಕ್ಷೇತ್ರ ರಚನೆಗೊಂಡಿತು. ಬಳಿಕ ಮೂರು ಚುನಾವಣೆಗಳು ನಡೆದಿವೆ. ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್, ಮತ್ತೆ 2018ರಲ್ಲಿ ಮತ್ತೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಒಮ್ಮೆ ಇಲ್ಲಿ ಗೆದ್ದ ಪಕ್ಷ ಸತತ ಎರಡನೇ ಬಾರಿ ಗೆದ್ದಿಲ್ಲ.
2008ರಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇರಲಿಲ್ಲ ಎಂಬುದು ರಾಜಕೀಯ ಇತಿಹಾಸ ತಿಳಿದವರಿಗೆ ಗೊತ್ತು. ಮಾಯಕೊಂಡ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿದ್ದ ಎಸ್. ಎ. ರವೀಂದ್ರನಾಥ ಮಾಯಕೊಂಡ ಮೀಸಲು ಕ್ಷೇತ್ರವಾದ ಬಳಿಕ ದಾವಣಗೆರೆ ಉತ್ತರಕ್ಕೆ ಬಂದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲವಾದ ಕಾರಣ 53,910 ಮತಗಳನ್ನು ಪಡೆದು ಗೆದ್ದರು, 4ನೇ ಬಾರಿ ಗೆಲುದು ದಾಖಲಿಸಿದರು, ಸಚಿವರೂ ಆದರು. 2013ರಲ್ಲಿ ಕಾಂಗ್ರೆಸ್‌ನ ಎಸ್. ಎಸ್. ಮಲ್ಲಿಕಾರ್ಜುನ ಗೆದ್ದರು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆದರು. 2018ರಲ್ಲಿ ಮತ್ತೆ ಮಾಜಿ ಸಚಿವರೂ ಆದ ಬಿಜೆಪಿಯ ಎಸ್. ಎ. ರವೀಂದ್ರನಾಥ ಗೆದ್ದಿದ್ದಾರೆ.
ದಾವಣಗೆರೆ ಉತ್ತರ ಕ್ಷೇತ್ರದ ಮತದಾರರು ಸುಮಾರು 2.50 ಲಕ್ಷ. ಇವರಲ್ಲಿ ವೀರಶೈವ ಲಿಂಗಾಯತ ಸಮದಾಯದ ಸುಮಾರು 75 ಸಾವಿರ. 27 ಸಾವಿರ ಮುಸ್ಲಿಂ, 20 ಸಾವಿರ ಕುರುಬರು, 24 ಸಾವಿರ ಪರಿಶಿಷ್ಟ ಜಾತಿ ಮತಗಳಿವೆ. ಎಸ್. ಎಸ್. ಮಲ್ಲಿಕಾರ್ಜುನ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು. 2013ರ ಚುನಾವಣೆಯ ಸೋಲಿನ ಸೇಡು ಈ ಸಲ ತೀರಿಸಿಕೊಳ್ಳಬೇಕು ಎಂದು ಮಲ್ಲಣ್ಣ ಎಂದೇ ಕರೆಸಿಕೊಳ್ಳುವ ಅವರು ಚುನಾವಣಾ ಸಿದ್ಧತೆ ಆರಂಭಿಸಿದ್ದಾರೆ. ಶಾಮನೂರು ಕುಟುಂಬಕ್ಕೆ ಟಿಕೆಟ್ ನಿರಾಕರಣೆ ಮಾಡುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ.

ಬಿಜೆಪಿ ಟಿಕೆಟ್‌ಗೆ ವಯೋಮಿತಿ ಅಡ್ಡಿ; 75 ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎಂಬ ನಿಯಮ ಜಾರಿಗೆ ಬಂದರೆ ಹಾಲಿ ಶಾಸಕ ಎಸ್. ಎ. ರವೀಂದ್ರನಾಥಗೆ ಬಿಜೆಪಿ ಟಿಕೆಟ್ ಕೈ ತಪ್ಪಲಿದೆ. ಬಿಜೆಪಿ ಟಿಕೆಟ್‌ಗಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ. ಎಚ್. ಶಿವಯೋಗಿ ಸ್ವಾಮಿ, ಮಾಜಿ ಮೇಯರ್ ಎಸ್. ಟಿ. ವಿರೇಶ, ಸುಧಾ ಜಯರುದ್ರೇಶ್ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.
ದಾವಣಗೆರೆ ಉತ್ತರದಲ್ಲಿ ಜೆಡಿಎಸ್ ಪ್ರಭಾವ ಏನಿಲ್ಲ. ಪಕ್ಷದಿಂದ ಅಭ್ಯರ್ಥಿ ಹಾಕಿದರೂ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಪೈಪೋಟಿ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. 2018ರಲ್ಲಿ ಜೆಡಿಎಸ್‌ನ ಆನಂದ ಎಂ. 5,381 ಮತಗಳನ್ನು ಪಡೆದಿದ್ದರು. ಬಿಜೆಪಿಯ ಎಸ್. ಎ. ರವೀಂದ್ರ ನಾಥ 76,540 ಮತಗಳನ್ನು ಪಡೆದು ಗೆದ್ದಿದ್ದರು, ಕಾಂಗ್ರೆಸ್‌ನ ಎಸ್. ಎಸ್. ಮಲ್ಲಿಕಾರ್ಜುನ 72,469 ಮತಗಳನ್ನು ಪಡೆದು 2ನೇ ಸ್ಥಾನ ಪಡೆದಿದ್ದರು.












Click it and Unblock the Notifications