ಮದ್ಯ ವ್ಯಸನಿಗಳು ಈ ಸ್ಥಳಕ್ಕೆ ಬಂದ್ರೆ ಜನ್ಮದಲ್ಲಿ ಎಣ್ಣೆ ಹೊಡೆಯೊಲ್ಲ
ದಾವಣಗೆರೆ, ಮಾರ್ಚ್ 01: ವರ್ಷಕ್ಕೊಮ್ಮೆ ದಾವಣಗೆರೆ ತಾಲೂಕು ಕೈದಾಳೆ ಗ್ರಾಮದಲ್ಲಿ ಕುಡುಕರಿಗೆ ಧೀಕ್ಷೆ ನೀಡಲಾಗುತ್ತದೆ. ರಾಜ್ಯದ ನಾನಾ ಭಾಗಗಳ ಕುಡುಕರು ಇಲ್ಲಿ ಬಂದು ಮಾಲೆ ಧರಿಸಿ ಧೀಕ್ಷೆ ಪಡೆಯುತ್ತಾರೆ. ಇಲ್ಲಿ ಒಮ್ಮೆ ಧೀಕ್ಷೆ ಪಡೆದವರು ಮತ್ತೆ ಯಾವತ್ತು ಕುಡಿತದ ಚಟಕ್ಕೆ ಒಳಗಾಗುವುದಿಲ್ಲ.
Recommended Video
ದಾವಣಗೆರೆ ತಾಲೂಕು ಕೈದಾಳೆ ಗ್ರಾಮವು ಕಳೆದ ಹಲವಾರು ದಶಕಗಳಿಂದ ಪವಾಡಗಳಿಗೆ ಪ್ರಸಿದ್ಧ ಪಡಿದಿದೆ. ಇಲ್ಲಿ ನಡೆಯುವ ಪವಾಡಗಳು ವೈದ್ಯಕೀಯ ಲೋಕಕ್ಕೆ ಸವಾಲಾಗಿವೆ. ಕುಡಿತ ಚಟದಿಂದ ಎಷ್ಟೋ ಮನೆಗಳು ಹಾಳಾಗಿವೆ, ಮಕ್ಕಳು ಬೀದಿಪಾಲಾಗಿದ್ದಾರೆ.
ಆದರೆ ದಾವಣಗೆರೆಯ ಕೈದಾಳೆ ಮಲ್ಲಿಕಾರ್ಜುನ ಸ್ವಾಮೀಜಿ ಸನ್ನಿಧಿಗೆ ಕುಡಿದು ಜೀವನ ಹಾಳು ಮಾಡಿಕೊಂಡ ಜನರು ಇಲ್ಲಿ ಬಂದು ಧೀಕ್ಷೆ ಪಡೆದುಕೊಂಡು ಮಲ್ಲಿಕಾರ್ಜುನ ಸ್ವಾಮಿ ಮೇಲೆ ಆಣೆ ಮಾಡಿ ರುದ್ರಾಕ್ಷಿ ಮಾಲೆಯನ್ನು ಹಾಕಿದರೆ ಸಾಕು ಸಾಯುವವರೆಗೂ ಕುಡಿತದ ಚಟಕ್ಕೆ ಒಳಗಾಗುವುದಿಲ್ಲ.

ಈ ಕ್ಷೇತ್ರದಲ್ಲಿ ಮೊದಲೆಲ್ಲ ಬಾಯಿಗೆ ಮುದ್ರೆ ಹಾಕಿಸಿಕೊಳ್ಳುತ್ತಿದ್ದರು. ಅಲ್ಲದೇ ಬೆಂಕಿಯಲ್ಲಿ ಕಾದ ಕಬ್ಬಿಣದಿಂದ ಮುದ್ರೆ ಹಾಕಿಸಿಕೊಳ್ಳುತ್ತಿದ್ದರು. ಸಕ್ಕರೆ ಕಾಯಿಲೆ ಇರುವವರೆಗೆ ತೊಂದರೆಯಾಗುತ್ತದೆ ಎಂದು ಈಗ ಕೇವಲ ಧೀಕ್ಷೆ ಹಾಗೂ ರುದ್ರಾಕ್ಷಿ ಮಾಲೆ ಹಾಕಿ ಗಂಟೆ ಹೊಡೆದು ದೇವರ ಮೇಲೆ ಪ್ರಮಾಣ ಮಾಡುತ್ತಾರೆ. ಮತ್ತೆ ಯಾವತ್ತು ಕುಡಿತದ ಬಗ್ಗೆ ಆಲೋಚನೆ ಮಾಡುವುದಿಲ್ಲವಂತೆ.
ಪ್ರತಿವರ್ಷಕ್ಕೆ ಶಿವರಾತ್ರಿ ಅಮವಾಸ್ಯೆಯಾಗಿ ಐದು ದಿನಗಳ ನಂತರ ರಥೋತ್ಸವ ನಡೆಯಲಿದ್ದು, ರಥೋತ್ಸವದ ದಿನ ಇಲ್ಲಿ ನೂರಾರು ಜನ ಕುಡುಕರು ಬಂದಿರುತ್ತಾರೆ. ತಮ್ಮ ಕುಟುಂಬದ ಸದಸ್ಯರ ಒತ್ತಾಯಕ್ಕಾಗಿಯೇ ಕೆಲವರು ಬಂದಿರುತ್ತಾರೆ. ಹೀಗೆ ಬಂದವರು ಧೀಕ್ಷೆ ಕೊಡುವಾಗ ಓಡಿ ಹೋದ ಘಟನೆಗಳು ಅನೇಕ ಇವೆ.
ಆದರೆ ಇಲ್ಲಿ ಧೀಕ್ಷೆ ಪಡೆದರು ಮರಳಿ ಕುಡಿತಕ್ಕೆ ಶರಣಾದವರು ಕಡಿಮೆ. ಹೀಗೆ ಮತ್ತೆ ಕುಡಿದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದು ಇಲ್ಲಿನ ನಂಬಿಕೆ. ಈ ಹಿನ್ನೆಲೆಯಲ್ಲಿ ಎಷ್ಟೋ ಮಹಿಳೆಯರು ತಮ್ಮ ಗಂಡಂದಿರಿಗೆ ಗೊತ್ತಾಗದಂತೆ ಇಲ್ಲಿಗೆ ಕರೆದುಕೊಂಡು ಬಂದು ಧೀಕ್ಷೆ ಕೊಡಿಸುತ್ತಾರೆ.

ಅದರಿಂದ ಎಷ್ಟೋ ಕುಟುಂಬಗಳು ಉಳಿದುಕೊಂಡಿವೆ, ಇದರಿಂದ ಮುಂದಿನ ದಿನಗಳಲ್ಲೂ ಈ ದೇವರಿಗೆ ನಡೆದುಕೊಳ್ಳುವುದಾಗಿ ಮಹಿಳೆಯರು ಹರಕೆ ಹೊತ್ತಿರುತ್ತಾರೆ. ಅಲ್ಲದೇ ಯಾವುದೇ ಹರಕೆ ಮಾಡಿಕೊಂಡರು ಇಷ್ಟಾರ್ಥಗಳು ಈಡೇರುತ್ತವೆ ಹಾಗೂ ಕುಟುಂಬ ಮನಃಶಾಂತಿಯಿಂದ ಇರುತ್ತದೆ ಎನ್ನುವುದು ಭಕ್ತರ ನಂಬಿಕೆ.
ಇನ್ನು ಇಲ್ಲಿಗೆ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದಲೂ ಭಕ್ತರು ಬಂದು ತಮ್ಮ ದುಶ್ಚಟ ಬಿಡಿಸಿಕೊಂಡು ಹೋಗಿದ್ದಾರೆ. ಒಟ್ಟಾರೆ ನಂಬಿಕೆಯೋ ಅಥವಾ ಮೂಢನಂಬಿಕೆಯೋ ಗೊತ್ತಿಲ್ಲ, ಆದರೆ ಕೈದಾಳೆ ಮಲ್ಲಿಕಾರ್ಜುನ ಸ್ವಾಮಿ ಹೆಸರಲ್ಲಿ ಬರುವಂತಹ ಭಕ್ತರು ಕುಡಿತದಿಂದ ವಿಮುಖರಾಗಿ ತಮ್ಮ ಕುಟುಂಬ ಜವಾಬ್ದಾರಿ ಹೊತ್ತು ನಡೆಸುತ್ತಿರುವುದು ವಿಶೇಷ












Click it and Unblock the Notifications