Jagalur: ಬರಪೀಡಿತ ಪಟ್ಟಿಯಿಂದ ಜಗಳೂರು ತಾಲ್ಲೂಕು ಔಟ್, ಜಿಲ್ಲಾಧಿಕಾರಿಗೆ ಶಾಸಕರಿಂದ ಹಿಗ್ಗಾಮುಗ್ಗಾ ತರಾಟೆ
ಜಗಳೂರು, ಆಗಸ್ಟ್ 30: ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಅದರಲ್ಲೂ ದಾವಣಗೆರೆ ಜಿಲ್ಲೆಯಲ್ಲಿ ಮಳೆಯಾಶ್ರಿತ ತಾಲ್ಲೂಕು ಅಂದ್ರೆ ಅದು ಜಗಳೂರು ಮಾತ್ರ.. ಆದರೆ ಇದನ್ನೇ ಪಟ್ಟಿಯಿಂದ ಕೈಬಿಡಲಾಗಿದ್ದು, ಈ ಹಿನ್ನೆಲೆ ಭಾರಿ ಆಕ್ರೋಶಗಳು ಭುಗಿಲೆದ್ದಿವೆ.
ಸರ್ಕಾರವು ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ದಾವಣಗೆರೆ ತಾಲ್ಲೂಕುಗಳನ್ನ ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಿದ್ದು, ಪ್ರಮುಖವಾಗಿ ಸೇರ್ಪಡೆ ಮಾಡಬೇಕಾದ ಜಗಳೂರು ತಾಲ್ಲೂಕನ್ನೇ ಕೈಬಿಡಲಾಗಿದೆ. ಇದರಿಂದ ಜಗಳೂರು ಶಾಸಕ ದೇವೇದ್ರಪ್ಪ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಜಿಲ್ಲಾಧಿಕಾರಿಗೆ ಶಾಸಕರಿಂದ ತೀವ್ರ ತರಾಟೆ
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಜಗಳೂರು ತಾಲೂಕನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ. ಇದನ್ನ ಖಂಡಿಸಿದ ಕ್ಷೇತ್ರದ ಶಾಸಕ ದೇವೇಂದ್ರಪ್ಪ ಅವರು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಲ್ಲೇ ಸ್ಥಳದಲ್ಲೇ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ಜಗಳೂರು ತಾಲ್ಲೂಕಿಗೆ ಅನ್ಯಾಯ: ಗಂಭೀರ ಆರೋಪ
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಸಭೆಯಲ್ಲಿ ಶಾಸಕರು ಜಿಲ್ಲಾಮಟ್ಟದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 'ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟ ಉಂಟಾಗಿದೆ. ಆದರೂ ವಾಸ್ತವ ವರದಿ ನೀಡದೆ ಈ ಭಾಗದ ಜನರಿಗೆ ಅನ್ಯಾಯ ಎಸಗಲಾಗಿದೆ,' ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಧಿಕಾರಿಗಳಿಗೆ ದೇವೇಂದ್ರಪ್ಪ ಎಚ್ಚರಿಕೆ ಸಂದೇಶ
ಅಲ್ಲದೆ, ಜಿಲ್ಲಾಡಳಿತ ಹಾಗೂ ಸಚಿವರ ನಡೆಗೆ ಬೇಸರ ವ್ಯಕ್ತಪಡಿಸಿದ ಅವರು, 'ಇನ್ಮುಂದೆ ಯಾವುದೇ ಕಾರಣಕ್ಕೂ ಜಿಲ್ಲಾ ಕೆಡಿಪಿ ಸಭೆಗೆ ಹಾಜರಾಗುವುದಿಲ್ಲ,' ಎಂದು ಬಹಿರಂಗವಾಗಿ ಘೋಷಿಸಿದರು. 'ತಾಲೂಕಿನ ನೈಜ ಪರಿಸ್ಥಿತಿ ಅರಿಯಲು ಸಚಿವರು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಕುರಿತು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು,' ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು 'ಜಿಲ್ಲಾಮಟ್ಟದ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಜಗಳೂರು ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ಮುಂದಿನ 3 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ತೀವ್ರವಾಗಿ ಹೋರಾಟ ಮಾಡಲಾಗುವುದು,' ಶಾಸಕ ದೇವೇಂದ್ರಪ್ಪ ಅವರು ಎಚ್ಚರಿಕೆ ನೀಡಿದರು. ಒಟ್ಟಿನಲ್ಲಿ ಹೇಳುವುದಾದರೆ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಶ್ರಿತ ಭೂಮಿ ಹೊಂದಿರುವ ತಾಲ್ಲೂಕು ಅಂದ್ರೆ ಅದು ಜಗಳೂರು ಮಾತ್ರ. ಆದರೆ ಬರಪಟ್ಟಿಯಿಂದ ಈ ತಾಲ್ಲೂಕನ್ನೇ ಕಡೆಗಣಿಸಿರುವುದು ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸ್ತುತ ಘೋಷಣೆಯಾಗಿರವ 'ಬರಪೀಡಿತ' ತಾಲ್ಲೂಕುಗಳು
* ಬೆಂಗಳೂರು ನಗರ: ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಯಲಹಂಕ
* ಬೆಂಗಳೂರು ದಕ್ಷಿಣ: ಮಾಗಡಿ, ರಾಮನಗರ
* ಬೆಂಗಳೂರು ಗ್ರಾಮಾಂತರ: ಹೊಸಕೋಟೆ, ನೆಲಮಂಗಲ, ದೇವನಹಳ್ಳಿ
* ಕೋಲಾರ: ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆ.ಜಿ.ಎಫ್
* ಚಿಕ್ಕಬಳ್ಳಾಪುರ: ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ಚೇಳೂರು, ಮಂಚೇನಹಳ್ಳಿ
* ತುಮಕೂರು: ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ, ತುಮಕೂರು, ತುರುವೇಕೆರೆ
* ಚಿತ್ರದುರ್ಗ: ಚಳ್ಳಕೆರೆ, ಹಿರಿಯೂರು, ಹೊಸದುರ್ಗ
* ದಾವಣಗೆರೆ: ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ದಾವಣಗೆರೆ
* ಚಾಮರಾಜನಗರ: ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಹನೂರು
* ಮೈಸೂರು: ಹೆಗ್ಗಡದೇವನಕೋಟೆ (ಎಚ್.ಡಿ.ಕೋಟೆ), ಹುಣಸೂರು, ಕೃಷ್ಣರಾಜನಗರ (ಕೆ.ಆರ್.ನಗರ), ಮೈಸೂರು, ನಂಜನಗೂಡು, ಟಿ.ನರಸೀಪುರ, ಸರಗೂರು, ಸಾಲಿಗ್ರಾಮ
* ಮಂಡ್ಯ: ಕೃಷ್ಣರಾಜಪೇಟೆ (ಕೆ.ಆರ್.ಪೇಟೆ), ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ
* ಬಳ್ಳಾರಿ: ಬಳ್ಳಾರಿ, ಸಂಡೂರು, ಕುರುಗೋಡು, ಕಂಪ್ಲಿ
* ಕೊಪ್ಪಳ: ಗಂಗಾವತಿ, ಕುಕನೂರು, ಕನಕಗಿರಿ
* ರಾಯಚೂರು: ದೇವದುರ್ಗ, ಮಾಸ್ಕಿ, ಅರಕೇರಾ, ಲಿಂಗಸೂಗೂರು, ರಾಯಚೂರು
* ಬೀದರ್: ಬೀದರ್, ಬಸವಕಲ್ಯಾಣ, ಹುಮ್ನಾಬಾದ್, ಚಿಟಗುಪ್ಪ
* ಬಾಗಲಕೋಟೆ: ಬಾಗಲಕೋಟೆ, ಬೀಳಗಿ, ಜಮಖಂಡಿ, ಗುಳೇದಗುಡ್ಡ, ಇಲಕಲ್
* ವಿಜಯಪುರ: ವಿಜಯಪುರ, ನಿಡಗುಂದಿ, ಕೊಲ್ಹಾರ
* ಗದಗ: ಗಜೇಂದ್ರಗಡ
* ಹಾಸನ: ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ
* ಚಿಕ್ಕಮಗಳೂರು: ಅಜ್ಜಂಪುರ, ಕೊಪ್ಪ, ನರಸಿಂಹರಾಜಪುರ, ತರೀಕೆರೆ
* ಯಾದಗಿರಿ: ಶಹಾಪುರ
* ವಿಜಯನಗರ: ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ
* ಕೊಡಗು: ಸೋಮವಾರಪೇಟೆ
* ಉತ್ತರ ಕನ್ನಡ: ಮುಂಡಗೋಡು, ಯಲ್ಲಾಪುರ


Click it and Unblock the Notifications
