"ನಾನು ಕಲ್ಲು ಬಂಡೆ, ಯಾವ ಟೀಕೆಗೂ ಜಗ್ಗಲ್ಲ"; ರೇಣುಕಾಚಾರ್ಯ
ದಾವಣಗೆರೆ, ಜನವರಿ 28: "ನಾನು ಕಲ್ಲುಬಂಡೆ ಇದ್ದಂತೆ, ಯಾವತ್ತೂ ಕರಗಲ್ಲ. ಮಂತ್ರಿ ಸ್ಥಾನ ನೀರಿನ ಮೇಲೆ ಗುಳ್ಳೆ ಇದ್ದಂತೆ. ಈಗ ಎತ್ತಿನ ಬಂಡಿಯಲ್ಲಿ ಬಂದೆ, ಆ ಬಂಡಿ ಮುಂದೆ ಗೂಟದ ಕಾರು ಲೆಕ್ಕವೇ ಇಲ್ಲ" ಎಂದು ದಾವಣಗೆರೆಯಲ್ಲಿ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಗೂಟದ ಕಾರು ಬೇಕು ಎನ್ನುವವರಿಗೆ ಮಂತ್ರಿ ಮಾಡಬೇಡಿ ಎಂಬ ಬಸವನಗೌಡ ಯತ್ನಾಳ್ ಹೇಳಿಕೆಗೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ತಿರುಗೇಟು ನೀಡಿದ ರೇಣುಕಾಚಾರ್ಯ, "ನಾನು ಸಚಿವ ಸ್ಥಾನದ ಆಕಾಂಕ್ಷಿ ಅಂತ ಹೇಳಿದ್ದು ನಿಜ. ನನಗೆ ಗೂಟದ ಕಾರು ಲೆಕ್ಕಕ್ಕೇ ಇಲ್ಲ, ಕ್ಷೇತ್ರದ ಅಭಿವೃದ್ಧಿ ಮುಖ್ಯ. ಅಧಿಕಾರ ಶಾಶ್ವತ ಅಲ್ಲ, ಯಾರೇ ಟೀಕೆ ಮಾಡಿದರೂ ಪರವಾಗಿಲ್ಲ, ನಾನು ಬಂಡೆಯಿದ್ದಂತೆ. ಸಿಎಂಗೆ ಪರಾಮಾಧಿಕಾರ ಇದೆ. ಅವರು ಹಾಗೂ ಕೇಂದ್ರದ ವರಿಷ್ಠರು ಸೇರಿ ಸಚಿವ ಸ್ಥಾನ ತೀರ್ಮಾನ ಮಾಡುತ್ತಾರೆ" ಎಂದರು.

"ಅನರ್ಹ ಶಾಸಕರು ಬಸ್ ಸ್ಟ್ಯಾಂಡ್ ನಲ್ಲಿನ ಮಹಿಳೆ ಇದ್ದ ಹಾಗೆ" ಎಂಬ ಹೇಳಿಕೆ ನೀಡಿದ್ದ ಸಿ.ಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, "ಸಿಎಂ ಇಬ್ರಾಹಿಂನದ್ದು ಎಲುಬಿಲ್ಲದ ನಾಲಿಗೆ. ಇಬ್ರಾಹಿಂ ಭದ್ರಾವತಿಯಲ್ಲಿ ಏನೇನು ಪ್ರಕರಣ ಮಾಡಿದ್ದಾರೆ ಎಲ್ಲ ಗೊತ್ತಿದೆ, ಇಡೀ ಭದ್ರಾವತಿಯನ್ನು ಕೋಮು ಗಲಭೆಗೆ ತಳ್ಳಿದವರು ಅವರು" ಎಂದು ಆರೋಪಿಸಿದರು.












Click it and Unblock the Notifications