ಮಾಯಕೊಂಡ: ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಸುಳಿವು ನೀಡಿದ ಸವಿತಾ ಬಾಯಿ ಮಲ್ಲೇಶ್ ನಾಯ್ಕ್
ದಾವಣಗೆರೆ, ಏಪ್ರಿಲ್, 05: ಮಾಯಕೊಂಡ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ ಮುಂದುವರೆದಿದ್ದು, ಇದೀಗ ಟಿಕೆಟ್ "ಕೈ" ತಪ್ಪಿದ್ದಕ್ಕೆ ಮುನಿಸಿಕೊಂಡಿದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಪಕ್ಷೇತರರಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು, ಕಾಂಗ್ರೆಸ್‌ನ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಸಂಪರ್ಕದಲ್ಲಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ. ಬೇರೆ ಪಕ್ಷಗಳಿಂದಲೂ ಆಫರ್ ಬರುತ್ತಿದೆ. ಆದರೆ ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ಹೇಳಿದರು.

ಕಣ್ಣೀರಿಟ್ಟ ಸವಿತಾ ಬಾಯಿ ಮಲ್ಲೇಶ್ ನಾಯ್ಕ್
ನನಗೆ ಟಿಕೆಟ್ ಕೈ ತಪ್ಪಲು ಎಡಿಟ್ ಆದ ಫೋಟೋಗಳೇ ಕಾರಣ. ಎಐಸಿಸಿ, ಕೆಪಿಸಿಸಿಗೆ ಎಡಿಟೆಡ್ ಫೋಟೋ ತೋರಿಸಿ ಟಿಕೆಟ್ ತಪ್ಪಿಸಲಾಗಿದೆ. ಈ ಮೂಲಕ ಮಹಿಳೆಗೆ ಅಪಮಾನ, ಚಾರಿತ್ರ್ಯವಧೆ, ತೇಜೋವಧೆ ಮಾಡಲಾಗಿದೆ. ಕೇವಲ ಟಿಕೆಟ್‌ಗಾಗಿ ಒಬ್ಬ ಹೆಣ್ಣು ಮಗಳ ಮಾನ, ಮರ್ಯಾದೆ ತೆಗೆಯುವಷ್ಟು ನೀಚ ಮಟ್ಟಕ್ಕೆ ಇಳಿದಿದ್ದು ನೋವು ತಂದಿದೆ ಎಂದು ಕಣ್ಣೀರಿಟ್ಟಿದ್ದಾರೆ.
ನನಗೆ ಈ ಬೆಳವಣಿಗೆ ಆಘಾತ ತಂದಿದೆ. ಮೂರು ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಕಾರ್ಯಕರ್ತರು, ಅಭಿಮಾನಿಗಳು ನೊಂದಿದ್ದಾರೆ. ಹೆಣ್ಣಾಗಿ ಹೊರಗೆ ಬರಬಾರದು, ಬಂದರೆ ಇಂತಹ ಆರೋಪಗಳನ್ನು ಸಹಿಸಿಕೊಳ್ಳುವ ಶಕ್ತಿ ಬೇಕು. ರಾಜಕಾರಣದಲ್ಲಿ ಬೆಳೆಯುವುದು ಸುಲಭವಲ್ಲ. ನನಗೆ ತುಂಬಾನೇ ಮೋಸ ಆಗಿದೆ ಎಂದು ಅಸಮಾಧಾನ ಹೊರಹಾಕಿದರು.
ಜನರು ತಕ್ಕ ಪಾಠ ಕಲಿಸಲಿದ್ದಾರೆ
ಮೋಸ ಮಾಡಿ ಟಿಕೆಟ್ ತಂದರೆ ಗೆಲ್ಲುತ್ತೇವೆ ಎಂಬುದು ಭ್ರಮೆಯಷ್ಟೇ. ಜನರು ತಕ್ಕ ಪಾಠ ಕಲಿಸುವುದು ಖಚಿತವಾಗಿದೆ. ಕ್ಷೇತ್ರದಲ್ಲಿ 97 ಸಾವಿರ ಮಹಿಳಾ ಮತದಾರರಿದ್ದಾರೆ, 2 ಲಕ್ಷ ಮತಗಳಿವೆ. ಕ್ಷೇತ್ರ ಮಾತ್ರವಲ್ಲ ಪಕ್ಷದ ಮುಖಂಡರ ಬಳಿ ಫೋಟೋ ತೋರಿಸಿ ಅಪಮಾನ ಮಾಡಲಾಗಿದೆ. ಈ ಕಾರಣಕ್ಕೆ ಬಸವಂತಪ್ಪ ಎಂಬುವವರ ವಿರುದ್ಧ ತೇಜೋವಧೆ ಮಾಡಿದ್ದಾರೆ ಎಂದು ದೂರು ನೀಡಿ ವಾರ ಕಳೆದಿದೆ. ಆದರೂ ಯಾವುದೇ ಕ್ರಮ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೇ ಅಶ್ಲೀಲವಾಗಿ ಫೋಟೋವನ್ನು ಎಡಿಟ್ ಮಾಡಿ ಶೇರ್ ಮಾಡಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದವರಿಂದಲೇ ಈ ಕೃತ್ಯ ಆಗಿದೆ. ಶೇಕಡಾ 99ರಷ್ಟು ಮಾಯಕೊಂಡ ಕಾಂಗ್ರೆಸ್ ಟಿಕಟ್ ಖಚಿತ ಆಗಿತ್ತು. ಶೇಕಡಾ 1ರಷ್ಟು ಕಾಣದ ಕೈಗಳು ಹೈಕಮಾಂಡ್‌ಗೆ ತಪ್ಪು ಮಾಹಿತಿ ನೀಡಿ ಟಿಕೆಟ್ ಅನ್ನು ತಪ್ಪಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಯುತವಾಗಿ ಟಿಕೆಟ್‌ಗೆ ಪ್ರಯತ್ನಿಸಬೇಕು
ಷಡ್ಯಂತ್ರದಿಂದ ಕಾಂಗ್ರೆಸ್ ಟಿಕೆಟ್ ತಪ್ಪಿದೆ. ನ್ಯಾಯಯುತವಾಗಿ ಟಿಕೆಟ್‌ಗೆ ಪ್ರಯತ್ನಿಸಬೇಕು. ಅದನ್ನು ಬಿಟ್ಟು ಮಹಿಳೆಯ ಮಾನ ಹರಾಜು ಹಾಕಿ ಟಿಕೆಟ್ ಪಡೆದರೆ ಒಳ್ಳೆಯದಾಗುತ್ತಾ?. ನನಗೂ ಕುಟುಂಬ ಇದೆ, ತಾಯಿ ಹಾಗೂ ತಂದೆ ನೊಂದಿದ್ದಾರೆ. ನನ್ನ ನೋವು ನಾನೇ ನುಂಗಿಕೊಂಡಿದ್ದೇನೆ. ನನಗೆ ಮರ್ಯಾದೆ ಮುಖ್ಯ, ರಾಜಕಾರಣ ಅಲ್ಲ ಎಂದು ಹೇಳಿದರು.
ನಾನು ಶಾಮನೂರು ಶಿವಶಂಕರಪ್ಪನವರ ಆಶೀರ್ವಾದದಿಂದ ಬೆಳೆದಿರುವೆ. ಮತ್ತು ಮಾಯಕೊಂಡದ ಜನರ ಮನಸ್ಸನ್ನು ಗೆದ್ದಿದ್ದೇನೆ. ಅಲ್ಲದೇ ಕ್ಷೇತ್ರದ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದೆ. ಈಗ ಜನರ ಒತ್ತಾಯ ಹೆಚ್ಚಾದ ಹಿನ್ನೆಲೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.
ಕೆಲ ಕುತಂತ್ರಿಗಳಿಂದ ಮಹಿಳೆಗೆ ಅವಮಾನ ಆಗಿದೆ. ಯಾವಾಗ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಮಾನ, ಮರ್ಯಾದೆ ಹೋದರೆ ಮರಳಿ ಪಡೆಯಲು ಆಗುತ್ತಾ. ತಾಯಿಯೂ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಪ್ಪು ಮಾಡದೇ ನಾನು ಶಿಕ್ಷೆ ಅನುಭವಿಸಬೇಕಾ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದಿಲ್ಲ
ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಅದೇ ರೀತಿಯಲ್ಲಿ ಕುಕೃತ್ಯ ಎಸಗಿದವರಿಗೂ ತಕ್ಕ ಪಾಠ ಕಲಿಸುತ್ತಾರೆ. ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದಿಲ್ಲ. ನಾನು ಕೊನೆಯ ಉಸಿರು ಇರುವವರೆಗೂ ಕ್ಷೇತ್ರದ ಜನರಿಗಾಗಿ ದುಡಿಯುತ್ತೇನೆ ಎಂದು ಸವಿತಾ ಬಾಯಿ ಮಲ್ಲೇಶ್ ನಾಯ್ಕ ಹೇಳಿದರು.
ಜನರಿಗೋಸ್ಕರ ನಾನು ಅಂದುಕೊಂಡದ್ದನ್ನು ಮಾಡುತ್ತೇನೆ. ಮಾನವೀಯತೆ, ಮನುಷ್ಯತ್ವ, ಮರ್ಯಾದೆ ಮುಖ್ಯವಾಗಿದೆ. ಅಶ್ಲೀಲ ಫೋಟೋ ವೈರಲ್ ಮಾಡಿದಾಗಿನಿಂದಲೂ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಅಶ್ಲೀಲವಾಗಿ ಚಿತ್ರಿಸಿ ಮಹಿಳೆಯರನ್ನು ಕುಗ್ಗಿಸಬಹುದು ಎಂದುಕೊಂಡಿರುವವರಿಗೆ ತಕ್ಕ ಉತ್ತರ ಮುಂದಿನ ದಿನಗಳಲ್ಲಿ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಪತಿ ನಿತಿನ್, ತಾಯಿ ಚಂದ್ರಿಬಾಯಿ, ತೇಜಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications