ಭಾರೀ ಮಳೆಯಿಂದ ದಾವಣಗೆರೆ ಜಿಲ್ಲೆಯ ಕೆಲವೆಡೆ ಕುಸಿದುಬಿದ್ದ ಮನೆಗಳು, ಪರಿಹಾರದ ಭರವಸೆ ನೀಡಿದ ಡಿಸಿ
ದಾವಣಗೆರೆ, ಜುಲೈ, 31: ಜುಲೈ ಆರಂಭದಿಂದಲೂ ದಾವಣಗೆರೆಯಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಹದಿನೈದು ದಿನಗಳಂತೂ ಬಿಟ್ಟುಬಿಡದೇ ಮಳೆ ಸುರಿದಿತ್ತು. ಶಿವಮೊಗ್ಗದ ತುಂಗಾ ನದಿ ಉಕ್ಕಿ ಹರಿದ ಕಾರಣ ತುಂಗಾಭದ್ರಾ ನದಿಯೂ ತುಂಬಿ ತುಳುಕಿತ್ತು. ಇದರಿಂದ ಹೊನ್ನಾಳಿ, ನ್ಯಾಮತಿ ಮತ್ತು ಹರಿಹರ ತಾಲೂಕಿನಲ್ಲಿ ಅಪಾರ ಹಾನಿ ಉಂಟಾಗಿದೆ. ಕೆಲವೆಡೆ ಮನೆಗಳು ಕುಸಿದು ಬಿದ್ದಿದ್ದರೆ, ಮತ್ತೆ ಕೆಲವೆಡೆ ಬೆಳೆ ನಷ್ಟ ಸಂಭವಿಸಿದೆ.
ಹರಿಹರ ತಾಲೂಕಿನಲ್ಲಿ ಮಳೆಯ ಹೊಡೆತ ಹಾಗೂ ಪ್ರವಾಹದಿಂದಾಗಿ ಕೆಲವೆಡೆ ಮನೆಗಳು ಕುಸಿದಿವೆ. ಕೆಲವರು ಗಾಯಗೊಂಡಿದ್ದಾರೆ. ಇನ್ನು ಇಂದು ಮಳೆಹಾನಿ ಸ್ಥಳಗಳಿಗೆ ದಾವಣಗೆರೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೆ ವೇಳೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು. ಕೂಡಲೇ ಸರ್ಕಾರದಿಂದ ಬರಬೇಕಿರುವ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕುಂಬಳೂರು ಗ್ರಾಮದಲ್ಲಿನ ಗ್ರಾಮ ಒನ್ ಸೆಂಟರ್‌ಗೆ ಭೇಟಿ ನೀಡಿದ ಅವರು, ಗ್ಯಾರಂಟಿ ಯೋಜನೆಗಳ ನೋಂದಣಿ ಪ್ರಕ್ರಿಯೆ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಮಹಿಳೆಯರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಮಳೆ ಬರುತ್ತಿರುವುದರಿಂದ ಗ್ರಾಮಗಳಿಂದ ಬರಲು ಕಷ್ಟವಾಗುತ್ತದೆ. ಸತಾಯಿಸದೇ ಆದಷ್ಟು ಬೇಗ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಗ್ರಾಮ ಒನ್ ಸೆಂಟರ್ ಸಿಬ್ಬಂದಿಗೆ ಸೂಚನೆ ನೀಡಿದರು.
ಇನ್ನು ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಕೆರೆ ಏರಿಯ ಮೇಲಿನ ರಸ್ತೆಯು ಹಾಳಾಗಿತ್ತು. ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಈ ರಸ್ತೆ ಹಾನಿಗೀಡಾಗಿತ್ತು. ಆಗಿನ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹದಡಿ ಕೆರೆ ಏರಿ ದುರಸ್ತಿಗೆ ಕ್ರಮ ಕೈಗೊಂಡಿದ್ದರು. ಇನ್ನು ಮಳೆ ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದು, ಆದಷ್ಟು ಬೇಗ ಕಾಮಗಾರಿಪೂರ್ಣಗೊಳಿಸಬೇಕು. ಜನರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಮುನ್ನೆಚ್ಚರಿಕೆವಹಿಸಿ ಎಂದು ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಹೊನ್ನಾಳಿಯಲ್ಲಿ ಮಳೆ ಹಾನಿ ವಿವರ
ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಸೋಮಶೇಖರಪ್ಪ ಹಾಗೂ ಮಂಜುಳಮ್ಮ ಅವರ ಮನೆ ಇತ್ತೀಚೆಗೆ ಸುರಿದ ಅತಿಯಾದ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಡಿ. ಜಿ. ಶಾಂತನಗೌಡರು ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಯನ್ನು ವೀಕ್ಷಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ಪರಿಹಾರ ಒದಗಿಸಿಕೊಡುವಂತೆಯೂ ಸೂಚನೆ ನೀಡಿದರು. ಇದೇ ವೇಳೆ ಗ್ರಾಮಸ್ಥರ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಹೇಳಿದರು.
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಿಡಿಲು ಬಡಿದು ಇಬ್ಬರು ಮೃತರಾಗಿದ್ದು, ಮೃತ ಕುಟುಂಬಕ್ಕೆ ಸರ್ಕಾರದ ಮಾರ್ಗಸೂಚಿಯನ್ವಯ 5 ಲಕ್ಷ ರೂಪಾಯಿ ಪರಿಹಾರ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 11ಕ್ಕೂ ಹೆಚ್ಚು ತೀವ್ರ, 58 ಭಾಗಶಃ ಮನೆಗಳು ಕುಸಿದಿವೆ. ಇವುಗಳಿಗೆ ಮಾರ್ಗಸೂಚಿಯನ್ವಯ ತೀವ್ರ ಹಾನಿ ಮನೆಗಳಿಗೆ 1.20 ಲಕ್ಷ ರೂಪಾಯಿ ಮತ್ತು ಭಾಗಶಃ ಹಾನಿಯಾದ ಮನೆಗಳಿಗೆ 6500 ರೂಪಾಯಿಗಳ ಪರಿಹಾರ ವಿತರಣೆ ಮಾಡಲಾಗಿದೆ.
ಪ್ರಕೃತಿ ವಿಕೋಪದಿಂದ ಘಟಿಸುವ ಪ್ರಕರಣಗಳಲ್ಲಿ ಮರಣ ಹೊಂದಿದಲ್ಲಿ 24 ಗಂಟೆಯಲ್ಲಿ ಮತ್ತು ಮನೆ ತೀವ್ರ ಹಾನಿಯಾದಲ್ಲಿ 48 ಗಂಟೆಯಲ್ಲಿ ಪರಿಹಾರ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮಳೆಯಿಂದ 51 ಅಂಗನವಾಡಿ, 91 ಶಾಲಾ ಕೊಠಡಿಗಳಿಗೆ, 2 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿವೆ. ಈ ಕೊಠಡಿಗಳನ್ನು ಪ್ರಕೃತಿ ವಿಕೋಪ ನಿಧಿಯಡಿ ದುರಸ್ಥಿ ಮಾಡಿಸಲಾಗುತ್ತದೆ.












Click it and Unblock the Notifications