ಹೊನ್ನಾಳಿ ಕ್ಷೇತ್ರದ ಚುನಾವಣಾ ಫಲಿತಾಂಶ 2023: ಎಂಪಿ ರೇಣುಕಾಚಾರ್ಯ ಹಿನ್ನಡೆ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು (ಶನಿವಾರ, ಮೇ 13) ಪ್ರಕಟವಾಗುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪೂರ್ಣ ಬಹುಮತ ಪಡೆದು ಸರ್ಕಾರ ರಚಿಸುವ ಆಶಾವಾದದಲ್ಲಿದ್ದರೆ, ಅತಂತ್ರವಾದರೆ ತಾನೇ ಕಿಂಗ್ ಮೇಕರ್ ಎನ್ನುವ ಉತ್ಸಾಹದಲ್ಲಿ ಜೆಡಿಎಸ್ ಪಕ್ಷವಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂಪಿ ರೇಣುಕಾಚಾರ್ಯ ಅವರು ಅಂಚೆ ಮತ ಎಣಿಕೆಯಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಡಿಜಿ ಶಾಂತನಗೌಡ ಮುನ್ನಡೆ ಪಡೆದಿದ್ದಾರೆ.
ಇನ್ನು ರಾಜ್ಯದ ಹೈ-ವೋಲ್ಟೇಜ್ ಮತ್ತು ಪ್ರತಿಷ್ಠೆಯ ಕಣಗಳಲ್ಲಿ ಒಂದಾಗಿರುವ ಹೊನ್ನಾಳಿ ಕ್ಷೇತ್ರದಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸ್ಪರ್ಧಿಸಿರುವುದು ರಾಜ್ಯದ ಗಮನ ಸೆಳೆದಿದೆ. ತುಂಗಭದ್ರಾ ನದಿ ತೀರದ ಕ್ಷೇತ್ರದಲ್ಲಿ ಮತದಾರ ಯಾರ ಕೈ ಹಿಡಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಎದುರಾಳಿಯಾಗಿ ಕಣಕ್ಕಿಳಿದಿದ್ದಾರೆ. ಕುಂಕೋವ ಕೃಷ್ಣಪ್ಪ ಅವರು ಬಿಎಸ್‌ಪಿಯಿಂದ ಅಖಾಡಕ್ಕಿಳಿದಿದ್ದಾರೆ. ಎಎಪಿಯಿಂದ ನರಸಿಂಹಪ್ಪ ಕೆ ಸ್ಪರ್ಧೆ ಮಾಡಿದ್ದಾರೆ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ 80,624 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಜಿ. ಶಾಂತನಗೌಡ 76,391 ಮತಗಳನ್ನು ಪಡೆದಿದ್ದರು. ಆಗ ಎಂ.ಪಿ. ರೇಣುಕಾಚಾರ್ಯ ಗೆಲುವಿನ ಅಂತರ 4233 ಮತಗಳಾಗಿತ್ತು.

ಇನ್ನು 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಜಿ. ಶಾಂತನಗೌಡ ಹೊನ್ನಾಳಿ ಕ್ಷೇತ್ರದಲ್ಲಿ ಗೆದ್ದಿದ್ದರು. ಆಗ ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಸೇರಿದ್ದ ಎಂ.ಪಿ. ರೇಣುಕಾಚಾರ್ಯ ಎರಡನೇ ಸ್ಥಾನ ಪಡೆದಿದ್ದರು.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 1,90,715 ಅರ್ಹ ಮತದಾರರಿದ್ದು, ಅದರಲ್ಲಿ 96,566 ಪುರುಷರು, 94,145 ಮಹಿಳೆಯರು ಮತ್ತು 4 ತೃತೀಯ ಲಿಂಗಿ ಮತದಾರರಿದ್ದಾರೆ. 2023ರ ಚುನಾವಣೆಯಲ್ಲಿ ಹೊನ್ನಾಳಿ ಕ್ಷೇತ್ರದಲ್ಲಿ ಶೇ.84.21ರಷ್ಟು ಮತದಾನವಾಗಿದೆ.












Click it and Unblock the Notifications