ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಶಿಸ್ತು ಕ್ರಮ: ಹರಿಹರ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಎಚ್ಚರಿಕೆ
ದಾವಣಗೆರೆ, ಮೇ 21: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಯಾವ ವ್ಯಕ್ತಿಗಳು ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಸಂಪೂರ್ಣವಾದ ವರದಿ ನನ್ನ ಬಳಿ ಇದ್ದು ಅದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಕಳುಹಿಸಿಕೊಡಲಾಗುವುದು. ಅಂತಹವರ ವಿರುದ್ಧ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಲಿದೆ. ಜಿಲ್ಲೆಯ ಆರು ಕಡೆ ಕಾಂಗ್ರೆಸ್ ಗೆದ್ದು ಹರಿಹರದಲ್ಲಿ ಮಾತ್ರ ಸೋತಿರುವುದು ಎಲ್ಲರಿಗೂ ತುಂಬಾ ಬೇಸರದ ಸಂಗತಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಹೇಳಿದರು.
ಹರಿಹರ ಪಟ್ಟಣದ ಹೆಚ್.ಕೆ.ವೀರಪ್ಪ ಕಲ್ಯಾಣ ಮಂಟಪದಲ್ಲಿ ಹರಿಹರ ಮತ್ತು ಮಲೆಬೆನ್ನೂರು ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ತಾಲೂಕು ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಮತ್ತು ಅಭಿಮಾನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹರಿಹರ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಈ ಚುನಾವಣೆಯಲ್ಲಿ ಪರಾಭವ ಹೊಂದಿರಬಹುದು. ಆದರೆ ಅವರು 60 ಸಾವಿರ ಜನರ ಮನಸ್ಸನ್ನು ಗೆದ್ದಿದ್ದಾರೆ. ಅವರ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಹರಿಹರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಘಟನೆ ಸೇರಿದಂತೆ ಸರ್ಕಾರ ಮಟ್ಟದಲ್ಲಿ ಕೆಲಸಗಳು ನಡೆಯಲಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಸಿಎಂ ಬಳಿ ಅಥವಾ ಯಾವುದೇ ಸಚಿವರನ್ನು ಕಾಣಲು ಶ್ರೀನಿವಾಸ್ ಅವರಿಗೆ ನೇರವಾಗಿ ಹೋಗಿ ಬರಲು ಜಿಲ್ಲಾ ಸಮಿತಿ ಅವಕಾಶ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ಅವರಿಗೆ ನಿಗಮ, ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ಕೊಡಿಸುವ ಬಗ್ಗೆಯೂ ಶಿಫಾರಸು ಮಾಡುವುದಾಗಿ ಹೇಳಿದರು.
ಈ ಸಭೆಯಲ್ಲಿ ಹರಿಹರ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿ ಅಧಿಕಾರ ಅನುಭವಿಸಿ ಪಕ್ಷಕ್ಕೆ ಮೋಸ ಮಾಡಿದ ನಾಯಕರನ್ನು ಉಚ್ಚಾಟನೆ ಮಾಡಲು ಒಕ್ಕೊರಲಿನಿಂದ ಒತ್ತಾಯ ಮಾಡಿದರು.
ಪರಾಜಿತ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ ಮಾತನಾಡಿ ಈ ಸಭೆಯನ್ನು ಕರೆದ ಉದ್ದೇಶ ಎಂದರೆ ತಾಲೂಕಿನಲ್ಲಿ 60 ಸಾವಿರ ಜನರು ನನಗೆ ಮತ ಹಾಕಿದ್ದಾರೆ. ಅದೆಲ್ಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಭೆ ಕರೆದಿದ್ದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ಸಂದೇಶಗಳು ಬರುತ್ತಿದ್ದವು, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ. ಇಷ್ಟೊಂದು ಹಿರಿಯರು, ಕಾರ್ಯಕರ್ತರು, ಅಭಿಮಾನಿಗಳು ಸಭೆಗೆ ಬಂದಿರುವುದನ್ನು ನೋಡಿದರೆ ನನಗೆ ತುಂಬಾ ಸಂತೋಷ ಆಗುತ್ತಿದೆ ಎಂದರು.

ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈಗ ಬಂದಿರುವ 60 ಸಾವಿರ ಮತಗಳನ್ನು ಒಂದು ಲಕ್ಷಕ್ಕೆ ಯಾವ ರೀತಿ ಹೆಚ್ಚಿಸಬೇಕು ಎನ್ನುವ ಬಗ್ಗೆ ಚಿಂತಿಸೋಣ. ಆ ಚುನಾವಣೆಗಳನ್ನು ಎದುರಿಸಿ ಪಕ್ಷ ವನ್ನು ಗೆಲ್ಲಿಸೋಣ, ಈ ನಿಟ್ಟಿನಲ್ಲಿ ಎಲ್ಲರೂ ನನ್ನೊಂದಿಗೆ ಕೈಜೋಡಿಸಿರಿ. ನಾನು ಸಹ ಪಕ್ಷ ಗೆಲ್ಲಿಸಲು ಸರ್ವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಕೆಡಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಕುಂಬಳೂರು ವಿರೂಪಾಕ್ಷಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್ ಪಟೇಲ್, ಜಿಗಳಿ ಆನಂದಪ್ಪ, ಸಿರಿಗೆರೆ ರಾಜಣ್ಣ, ಭಾನುವಳ್ಳಿ ಪುಟ್ಟಪ್ಪ, ಬೆಳ್ಳೂಡಿ ದುಂಡಿ ಸಿದ್ದೇಶ್, ಡಿ.ಕುಮಾರ್, ಗೋವಿನಾಳ ರಾಜಣ್ಣ, ಆದಾಪುರ ವೀರಭದ್ರಪ್ಪ, ಸಿಬ್ಬತುಲ್ಲಾ, ಎಂ.ಎಸ್.ಬಾಬುಲಾಲ್, ಸೈಯದ್ ಎಜಾಸ್ ಅಹ್ಮದ್, ಸೈಯದ್ ಜಾಕಿರ್, ಬಿ. ಮಗ್ದುಮ್, ಕಿರಣ್ ಭೂತೆ,ಹರಳಳ್ಳಿ ಮಂಜು, ಬೆಳ್ಳೂಡಿ ಕೃಷ್ಣಮೂರ್ತಿ, ಎಳೆಹೊಳೆ ಕರಿಬಸಪ್ಪ, ಕಾಮ್ಲಾಪುರ ಮಲ್ಲೇಶ್, ಸವಿತಾ ನಾಯಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.












Click it and Unblock the Notifications