Bhadra Dam: ಭದ್ರಾ ಡ್ಯಾಂ ಸುರಕ್ಷತೆಗೆ ಸರ್ಕಾರ ₹100 ಕೋಟಿ ಬಿಡುಗಡೆ ಮಾಡಲೇಬೇಕು-ಒತ್ತಾಯ
ದಾವಣಗೆರೆ, ಜಲೈ, 17: ಭದ್ರಾ ಅಚ್ಚುಕಟ್ಟುದಾರರ ಹಿತ ಕಾಪಾಡಲು ಕೂಡಲೇ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ರೈತರ ಜೀವನಾಡಿ, ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಪುನರ್ವಸು ಮಳೆ ಬಿಟ್ಟುಬಿಡದೇ, ಸುರಿಯುತ್ತಿದೆ. ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ಬೇಸಿಗೆ ಹಂಗಾಮಿನಲ್ಲಿ ಬೀಕರ ಬಿಸಿಲಿನ ತಾಪಮಾನದಿಂದ ಬಸವಳಿದ ರೈತರು ಪ್ರಸ್ತುತ ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಮೀನು ಉಳಿಮೆ ಮಾಡಿಕೊಂಡು ಭತ್ತದ ಬೀಜ ಬಿತ್ತನೆಗೆ ಸಜ್ಜಾಗಿ ಡ್ಯಾಂನ ಒಳಹರಿವಿನ ಪ್ರಮಾಣವನ್ನು ಚಾತಕ ಪಕ್ಷಿಯಂತೆ ನೋಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದೀಗ ಭದ್ರಾ ಡ್ಯಾಂನ ಒಳಹರಿವು 27,839 ಕ್ಯೂಸೆಕ್ ಇದ್ದು, ನೀರಿನ ಮಟ್ಟ 144 ಅಡಿ 7 ಇಂಚು ಇದೆ. 30.142 ಟಿಎಂಸಿಯಷ್ಟು ನೀರಿನ ಸಂಗ್ರಹ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುತ್ತದೆ. ಹೀಗಾಗಿ ಈ ಬಾರಿ ಡ್ಯಾಂ ತುಂಬುತ್ತದೆ ಎಂದು ರೈತರಲ್ಲಿ ಭರವಸೆ ಮೂಡಿದೆ. ಇದರಿಂದ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲು ಅಣಿಯಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ಡ್ಯಾಂನಿಂದ ನೀರು ಹರಿಸಬೇಕೆಂದು ಆಗ್ರಹಿಸಲಾಗಿದೆ.
ಭದ್ರಾ ಡ್ಯಾಂನಲ್ಲಿ ನೀರಿನ ಲಭ್ಯತೆಗೆ ಅನುಸಾರವಾಗಿ ನೀರು ಬಿಡುವ ನಿರ್ಧಾರ ಮಾಡಬೇಕು. ಸ್ಲೂಯಿಸ್ ಗೇಟ್ ಮೂಲಕ ನೀರು ಸೋರಿಕೆಯಾಗುತ್ತಿದೆ. ಸೋರಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಲೂಯಿಸ್ ಭದ್ರತೆ ಬಗ್ಗೆ ಸ್ಪಷ್ಟನೆ ನೀಡಬೇಕು. 1962ರಲ್ಲಿ ಗಾರೆ, ಸುಣ್ಣ ಮತ್ತು ಕಲ್ಲು ಬಳಸಿ ಭದ್ರಾ ಡ್ಯಾಂ ನಿರ್ಮಿಸಲಾಗಿದೆ. ಸಹಜವಾಗಿ ಡ್ಯಾಂನ ತಳಭಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಸೋರಿಕೆ ತಡೆಗಟ್ಟಬೇಕು.
ಹಳೆಯಾದಾಗಿರುವ ಡ್ಯಾಂ ಗೇಟ್‌ಗಳನ್ನು ಸರಿಪಡಿಸಿ, ಗಟ್ಟಿಗೊಳಿಸಬೇಕು. ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆಯ ಕ್ರೇನ್‌ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆಗಳನ್ನು ಸರಿಪಡಿಸಿ, ಭದ್ರಗೊಳಿಸಬೇಕು. ಡ್ಯಾಂನ ಸುತ್ತಲೂ ಬೇಲಿ ನಿರ್ಮಿಸಿ ಸುಭದ್ರತೆ ಕಾಪಾಡಬೇಕು ಎಂದು ಒತ್ತಾಯಿಸಲಾಗಿದೆ.
ಡ್ಯಾಂನ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರದ ಜಲ ಆಯೋಗ ಡ್ಯಾಂನ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆಯಡಿ ಡ್ಯಾಂನ ಸುರಕ್ಷತೆಗೆ ₹100 ಕೋಟಿಗಳ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಈ 100 ಕೋಟಿ ರೂಪಾಯಿ ಬಿಡುಗಡೆ ಮಾಡಲಾರದೆ, ಕರ್ನಾಟಕ ನೀರಾವರಿ ನಿಗಮದ ಮೂಲಕ ಕೇಂದ್ರ ಸರ್ಕಾರಕ್ಕೆ ಮೋರೆ ಹೋಗಿ ಸುಮ್ಮನೆ ಕೈಕಟ್ಟಿ ಕುಳಿತಿದೆ. ಇದು ಸರಿಯಲ್ಲ ಎಂದು ಆಕ್ರೋಶ ಹಿರಹಾಕಿದ್ದಾರೆ.
ಡ್ಯಾಂನ ಉಳಿವಿಗಾಗಿ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಲಾರದಷ್ಟು ಬಡತನ ರಾಜ್ಯ ಸರ್ಕಾರಕ್ಕೆ ಬಂದಿಲ್ಲ. ಆದ್ದರಿಂದ ಕೂಡಲೇ ಹಣ ಬಿಡುಗಡೆ ಮಾಡಿ ಡ್ಯಾಂನ ಸುರಕ್ಷತೆ ಕಾಪಾಡಬೇಕು ಎಂದು ಮನವಿ ಮಾಡಲಾಗಿದೆ.
ಜಿಲ್ಲಾಧಿಕಾರಿ ಹೇಳಿದ್ದೇನು?: ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಂಗಾಧರಸ್ವಾಮಿಯವರು ರೈತರ ಕುಂದು ಕೊರತೆಗಳನ್ನು ಸಮಾಧಾನದಿಂದ ಆಲಿಸಿದರು. ಶಿವಮೊಗ್ಗ ಡಿಸಿ ಮತ್ತು ಐಸಿಸಿ ಅಧ್ಯಕ್ಷರಾದ ಸಚಿವ ಮಧುಬಂಗಾರಪ್ಪನವರನ್ನು ಸಂಪರ್ಕ ಮಾಡಿ, ಶೀಘ್ರ ಐಸಿಸಿ ಸಭೆ ಕರೆಯಲು ಆಗ್ರಹಿಸಲಾಗುವುದು ಎಂದರು. ಈ ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯ ರೈತರು ಭತ್ತ ಬೆಳೆಯಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ.ಸತೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳ್, ಮಾಜಿ ಮೇಯರ್ ಹೆಚ್.ಎನ್.ಗುರುನಾಥ್, ಮಾಜಿ ಎಪಿಎಂಸಿ ಅಧ್ಯಕ್ಷ ಕುಂದುವಾಡ ಗಣೇಶಪ್ಪ, ವಾಟರ್ ಮಂಜುನಾಥ, ಮತ್ತಿ ಪಿ.ಎಂ.ಮಂಜುನಾಥ, ಹೂವಿನಮಡು ಪ್ರಭು, ಮತ್ತೇರ ರೇವಣಸಿದ್ದಪ್ಪ, ಹೆಚ್.ಜಿ.ಮಂಜಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications