ವೀರಶೈವ ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಬೇಡ, ಸಿಎಂ ಹುದ್ದೆಯೇ ಬೇಕು: ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಅಕ್ಟೋಬರ್, 01: ವೀರಶೈವ ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಹುದ್ದೆ ಬೇಡ, ಮುಖ್ಯಮಂತ್ರಿ ಸ್ಥಾನವೇ ಕೊಡಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕ್ರಮ ಇತ್ತು. ಅಲ್ಲಿ ಶ್ರೀ ಕುಮಾರಸ್ವಾಮಿಗಳ ಪ್ರಶಸ್ತಿ ಪ್ರದಾನ ಮಾಡಿದರು, ಆ ಸಂದರ್ಭದಲ್ಲಿ ವೇದಿಕೆಯ ಮೇಲೆ ಭಾಷಣ ಮಾಡುವಾಗ ಸತ್ಯವನ್ನು ಹೇಳಿದ್ದೇನೆ. ಈಗಲೂ ಅದೇ ಹೇಳುತ್ತೇನೆ. ಮುಖ್ಯವಾದ ಹುದ್ದೆಗಳನ್ನು ಲಿಂಗಾಯತ ಸಮುದಾಯದ ಬಹಳಷ್ಟು ಜನರಿಗೆ ಕೊಟ್ಟಿಲ್ಲ. ಇದರ ಬಗ್ಗೆ ನಾನು ಯಾವುದೇ ಮಂತ್ರಿಗಳ ಬಳಿ ಹೇಳಲು ಹೋಗಿಲ್ಲ ಎಂದರು.

ವೀರಶೈವ ಲಿಂಗಾಯತರಿಗೆ ಡಿಸಿಎಂ ನೀಡುವ ವಿಚಾರ ಮಾತನಾಡಿದ ಶಾಮನೂರು, ಡಿಸಿಎಂ ತಗೊಂಡು ಏನ್ ಮಾಡಬೇಕು. ಆದರೆ ಸಿಎಂ ಆಗಬೇಕು, ಲಿಂಗಾಯತರಿಗೆ ಸಿಎಂ ಸ್ಥಾನ ಸಿಗಬೇಕು, ಯಾವಾಗಲೂ ಸಿಎಂ ಹುದ್ದೆಗೆ ನಮ್ಮ ರೇಸ್ ಇದ್ದೇ ಇರುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತರು ಮೂಲೆಗುಂಪು ಚರ್ಚೆ ವಿಚಾರ ದಾವಣಗೆರೆಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಪುನರುಚ್ಚಿಸಿದ್ದು, ಲಿಂಗಾಯತರಿಗೆ ಸರಿಯಾದ ಸ್ಥಾನಮಾನ ಸಿಗ್ತಿಲ್ಲ. ಲಿಂಗಾಯತ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳೇ ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ಸಮುದಾಯವರಿಗೆ ಮಣೆ ಹಾಕುತ್ತಿದ್ದಾರೆ ಅಂತಾ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶಾಮನೂರು ಶಿವಶಂಕರಪ್ಪ ಅವರು, ನಿಜಲಿಂಗಪ್ಪ, ಜೆ.ಎಚ್.ಪಾಟೇಲರು, ವೀರೇಂದ್ರ ಪಾಟೀಲರು, ಬಿ.ಎಸ್.ಯಡಿಯೂರಪ್ಪ ಅವರೆಲ್ಲರೂ ಇದ್ದಾಗ ಎಲ್ಲರೂ ಚೆನ್ನಾಗಿಯೇ ಇದ್ದರು. ಈಗ ನಮ್ಮವರು ಕಂಗಾಲಾಗಿದ್ದಾರೆ, ಸರ್ಕಾರದ ಆಯಾಕಟ್ಟಿನ ಪ್ರಮುಖ ಹುದ್ದೆಗಳು ನಮ್ಮ ಸಮಾಜದವರಿಗೆ ಕೊಟ್ಟಿಲ್ಲ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮವರಿಗೆ ಅನ್ಯಾಯವಾದ್ರೆ ಸುಮ್ಮನಿರಬೇಕಾ?
ರಾಜ್ಯ ರಾಜಕಾರಣದಲ್ಲಿ ಸೋಲರಿಯದ ಸರದಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ. ಇದುವರೆಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಎಲ್ಲಾ ಚುನಾವಣೆಯಲ್ಲಿ ಗೆದ್ದು ಬಂದಿರುವ ಹಿರಿಯ ನಾಯಕ. ಭಾರತದ ರಾಜಕೀಯ ಇತಿಹಾಸದಲ್ಲಿ 93 ವರ್ಷ ವಯಸ್ಸಿನ ಶಾಸಕರು ಇಷ್ಟೊಂದು ಸಕ್ರಿಯ ರಾಜಕಾರಣದಲ್ಲಿ ಇರುವುದು ಎಸ್.ಎಸ್.ಮಾತ್ರ. ಶಾಮನೂರು ಶಿವಶಂಕರಪ್ಪ ಅವರು ಮಾತನಾಡುವುದು ಕಡಿಮೆ. ಆದರೆ ಮಾತನಾಡಿದರೆ ಅದು ಸಿಡಿಗುಂಡು ಆಗಿರುತ್ತದೆ.
ಈಗ ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರ ಸಂಬಂಧ ಸಿಡಿದಿದ್ದೆರುವ ಶಾಮನೂರು ಶಿವಶಂಕರಪ್ಪರು ಹಿರಿಯ ರಾಜಕಾರಣಿ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಅತ್ಯಂತ ಹಿರಿಯ, ಅನುಭವಿ ಶಾಸಕರು. ಸಿಎಂ ಸಿದ್ದರಾಮಯ್ಯರ ವಿರುದ್ಧ ಸ್ಫೋಟಕ ಹೇಳಿಕೆ ನೀಡಿರುವ ಶಾಮನೂರು ಶಿವಶಂಕರಪ್ಪ ಅವರು, ಸಚಿವ ಸ್ಥಾನ ನೀಡಿಕೆ ವಿಚಾರದಲ್ಲಿ ಅನ್ಯಾಯ ಆಗಿದೆ ಎಂದು ನಾನು ಹೇಳಿಲ್ಲ.
ಆದರೆ ನಮ್ಮ ಸಮುದಾಯದ ಅಧಿಕಾರಿಗಳ ಕಡೆಗಣನೆ ಮಾಡಲಾಗಿದೆ. ಅಧಿಕಾರಿಗಳ ನಿಯೋಜನೆ ಹಾಗೂ ಹುದ್ದೆ ಕೊಡುವಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಕೊಡುತ್ತಿಲ್ಲ ಎಂದು ಬಹಿರಂಗವಾಗಿಯೇ ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದ್ದಾರೆ.
ನಮ್ಮ ಸಮಾಜದ ಅಧಿಕಾರಿಗಳ ಕಡೆಗಣನೆ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡುತ್ತೇನೆ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದವರೇ ಹೆಚ್ಚಿದ್ದಾರೆ. ಶಾಸಕರೂ ಹೆಚ್ಚಿದ್ದಾರೆ. ನಾವು ಬೇರೆಯವರ ಸಹಕಾರ ಪಡೆದು ಸರ್ಕಾರ ರಚನೆ ಮಾಡಬಹುದು. ಅಷ್ಟು ಶಕ್ತಿ ನಮಗಿದೆ. ನನಗೇನೂ ಯಾರ ಭಯವಿಲ್ಲ. ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ. ನಾನು ಯಾರಿಗೂ ಹೆದರಬೇಕು ಎಂದೇನಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯರ ವಿರುದ್ಧ ಗುಡುಗಿದ್ದಾರೆ.
ಗೃಹ ಸಚಿವ ಜಿ.ಪರಮೇಶ್ವರ್ ಅವರು ಲಿಂಗಾಯತ ಸಮುದಾಯದ ಅಧಿಕಾರಿಗಳ ಕಡೆಗಣನೆ ಮಾಡಿಲ್ಲ ಎಂಬ ಹೇಳಿಕೆ ನೀಡಿರುವ ಕುರಿತಂತೆ ಖಾರವಾಗಿ ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ ಅವರು, ಜಿ.ಪರಮೇಶ್ವರ್ ಅವರು ಸಚಿವರಾಗಿ ಸರ್ಕಾರದಲ್ಲಿದ್ದಾರೆ. ಹಾಗಾಗಿಯೇ ಅವರು ಹಾಗೆ ಹೇಳುತ್ತಾರೆ. ಹೊರಗೆ ಬರಲಿ, ಅವರೂ ಅವರ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ಸರ್ಕಾರ ಸರಿ ಇಲ್ಲ ಎಂದು ನಾನು ಹೇಳುತ್ತಿಲ್ಲ. ಸರ್ಕಾರದಲ್ಲಿರುವವರು ಸರ್ಕಾರದ ಪರವಾಗಿ ಮಾತನಾಡುತ್ತಾರೆ ಎಂದಷ್ಟೇ ಹೇಳುತ್ತೇನೆ. ವಿರುದ್ಧವಾಗಿರುವವರು ಸತ್ಯ ಹೇಳುತ್ತಾರೆ. ವೀರಶೈವ ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರ ಸಂಬಂಧ ಅಸಮಾಧಾನ ಇರುವುದು ನಿಜ. ಅದಕ್ಕೆ ಬಹಿರಂಗವಾಗಿ ಹೇಳಿದ್ದೇನೆ. ನಮ್ಮವರಿಗೆ ಅನ್ಯಾಯವಾದರೆ ಸುಮ್ಮನೆ ಕೂರಬೇಕಾ? ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕಲ್ವಾ ಎಂದು ಹೇಳಿದರು.
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ಅಧಿಕಾರಿಗಳಿಗೆ ಸಮಸ್ಯೆ ಮಾಡುತ್ತಿದ್ದಾರೆ. ನಮಗೇನೂ ಮಾಡುತ್ತಾರೆ. ಅಧಿಕಾರಿಗಳಿಗೆ ಸಮಸ್ಯೆ ಮಾಡುತ್ತಿದ್ದಾರೆ. ಕಡೆಗಣನೆ ಮಾಡದೇ ಅಧಿಕಾರಿಗಳಿಗೆ ಸೂಕ್ತ ಹುದ್ದೆ ಕೊಡಬೇಕು ಎಂಬುದಷ್ಟೇ ನಮ್ಮ ಒತ್ತಾಯ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.












Click it and Unblock the Notifications