ಜಿ.ಎಂ.ಸಿದ್ದೇಶ್ವರ ಬರೀ ದುಡ್ಡು ಮಾಡಲಿಕಷ್ಟೇ ಹೆಸರುವಾಸಿ: S.S.ಮಲ್ಲಿಕಾರ್ಜುನ್ ಆರೋಪ
ದಾವಣಗೆರೆ, ಆಗಸ್ಟ್, 29: ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಡುವಿನ ವಾಗ್ಯುದ್ಧ ಮುಂದುವರೆದಿದೆ. ಇದು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮಲ್ಲಿಕಾರ್ಜುನ್ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚು ಮಾತನಾಡದಿದ್ದರೂ ಮಾಜಿ ಶಾಸಕ ಎಸ್. ಎ.ರವೀಂದ್ರನಾಥ್ ಹಾಗೂ ಎಸ್.ಎಸ್.ಎಂ ಸ್ನೇಹಿತರು ಎಂಬ ಮಾತು ಆಡಿದ್ದರು. ಈ ಮಾತಿಗೆ ಸಿಡಿಗುಂಡುಗಳನ್ನು ಸಿಡಿಸಿರುವ ಸಚಿವ ಮಲ್ಲಿಕಾರ್ಜುನ್ ಅವರು, ತಪ್ಪು ಮಾಡಿಲ್ಲವೆಂದರೆ ಆಣೆ ಮಾಡಲಿ ಎಂದು ಸಿದ್ದೇಶ್ವರ ಅವರಿಗೆ ಸವಾಲು ಹಾಕಿದರು.
ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಸದಸ್ಯರಾಗಿ ಮಾತ್ರ ಕಾರ್ಯನಿರ್ವಹಿಸಿದ್ದರೆ, ರಾಜ್ಯಕ್ಕೆ ಸಂಬಂಧಿಸಿದ ಯಾವ ಯೋಜನೆ, ಕಾಮಗಾರಿಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ. ತಾನು ಯಾವುದೇ ತಪ್ಪು ಮಾಡಿಲ್ಲ ಎಂಬ ಬಲವಾದ ನಂಬಿಕೆ ಇದ್ದರೆ ಸಿದ್ದೇಶ್ವರ ಆಣೆ ಮಾಡಲಿ ನೋಡೋಣ. ದಾವಣಗೆರೆಗೆ ಸಿದ್ದೇಶ್ವರ ಅವರು ಕೇವಲ ದುಡ್ಡು ಮಾಡಲು ಬಂದಿರುವುದು. ದುಡ್ಡು ಮಾಡಿಕೊಂಡು ಹೋಗೋದು ಅಷ್ಟೇ ಎಂದು ಛೇಡಿಸಿದರು.

ದಾವಣಗೆರೆ ಸಂಸದ ಜಿ. ಎಂ. ಸಿದ್ದೇಶ್ವರ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜೊತೆ ಸೇರಿಕೊಂಡು ಲೂಟಿ ಹೊಡೆದಿದ್ದಾರೆ. ಮಂಗ ಏನೋ ತಿಂದು ಯಾರಿಗೋ ಒರೆಸಿತ್ತು ಅಂತಾರಲ್ಲಾ ಹಾಗೆ. ಮಂಗ ತಿಂದು ಮ್ಯಾಕೆಗೆ ಒರೆಸಿತ್ತು ಎಂಬ ಗಾದೆಯಂತೆ ಎಲ್ಲವನ್ನೂ ಲೂಟಿ ಹೊಡೆದಿದ್ದಾರೆ. ಎಲ್ಲಾ ತಿಂದು ತೇಗಿ ಬಿಟ್ಟಿದ್ದಾರೆ. ಸ್ಮಾರ್ಟ್ ಸಿಟಿ, ಕುಂದುವಾಡ ಕೆರೆ ಸೇರಿದಂತೆ ವಿವಿಧ ಯೋಜನೆಗಳಲ್ಲಿಯೂ ಇದು ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ಮಾಡಲು ಬಿಡಲಿಲ್ಲ
ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ ಮತ್ತು ರೇಣುಕಾಚಾರ್ಯರ ಮೇಲೆ ಈಗ ಸಿದ್ದೇಶ್ವರ ಎಲ್ಲವನ್ನೂ ಹಾಕಲು ಮುಂದಾಗಿದ್ದಾರೆ. ಸರ್ಕಾರ ಇದ್ದಾಗ ಜಿಲ್ಲೆಯಲ್ಲಿ ಇವರಿಗ್ಯಾರಿಗೂ ಅಧಿಕಾರ ಮಾಡಲು ಬಿಡಲಿಲ್ಲ. ಎಲ್ಲಾ ತಿಂದ ಮೇಲೆ ನಾನು ಮಧ್ಯಪ್ರವೇಶಿಸುವುದಿಲ್ಲ, ನಾನು ಲೋಕಸಭಾ ಸದಸ್ಯ. ಕೇಂದ್ರ ಸರ್ಕಾರದ ಯೋಜನೆಗಳು, ಸಂಸದರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ ಎನ್ನುತ್ತಿದ್ದಾರೆ ಎಂದರು.
ಮಧ್ಯಪ್ರವೇಶಿಸಿಯೇ ಇಲ್ಲ ಎನ್ನುವುದಾದರೆ ಆಣೆ ಮಾಡಲಿ. ಸುಖಾಸುಮ್ಮನೆ ಅವರು, ಇವರ ಮೇಲೆ ಯಾಕೆ ಹಾಕಬೇಕು. ಅವರು ಮಾಡಿದ ತಪ್ಪು ಇದೆ ಎಂದು ಒಪ್ಪಿಕೊಂಡತಾಯ್ತು ಅಲ್ವಾ ಎಂದು ಹೇಳಿದರು.
ಹೇಳುತ್ತಾ ಹೋದರೆ ಸಾಕಷ್ಟು ವಿಚಾರಗಳಿವೆ. ಈಗಾಗಲೇ ಜಿಲ್ಲೆಯಲ್ಲಿ ಮೂವರು ಶಾಸಕರಾಗಿದ್ದವರು ಸೋತಿದ್ದಾರೆ. ಈಗ ಮೂವರನ್ನು ತೆಗೆದು ಹಾಗಿದೆ. ಚುನಾವಣೆಗೆ ಮುನ್ನ ಇನ್ನು ಯಾರ್ಯಾರನ್ನು ತೆಗೆಯುತ್ತಾರೋ ಏನೋ ಗೊತ್ತಿಲ್ಲ. ಏನಾಗುತ್ತದೆ ಎಂಬುದನ್ನು ಮುಂದೆ ನೋಡೋಣ ಎಂದು ಹೇಳಿದರು.
ಇನ್ನು ದಾವಣಗೆರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಲು ಕಾರಣ ನಾವು. ಸ್ಮಾರ್ಟ್ ಸಿಟಿ ನಾವು ತಂದಿದ್ದು ಎಂದು ಹೇಳಿಕೊಳ್ಳಲು ಜಿ.ಎಂ. ಸಿದ್ದೇಶ್ವರ ಅವರಿಗೆ ನಾಚಿಕೆಯಾಗೋದಿಲ್ವಾ. ಒಂದು ಏನಾದರೂ ಪ್ರಯತ್ನ ಇದೆಯಾ ಅವರದ್ದು. ಸ್ಮಾರ್ಟ್ ಸಿಟಿ ತಂದಿದ್ದು ಕಾಂಗ್ರೆಸ್‌ನವರು. 2016-17ರಲ್ಲಿ ಜಾರಿಗೆ ತಂದೆವು. ದೇಶದಲ್ಲಿ ಸ್ಮಾರ್ಟ್ ಸಿಟಿ ವಿಭಾಗದಲ್ಲಿ 9ನೇ ಸ್ಥಾನದಲ್ಲಿದ್ದೆವು. ಈಗ ಎಷ್ಟನೇ ಸ್ಥಾನದಲ್ಲಿದ್ದೇವೆ ಎಂದರು.
ಎಲ್ಲೆಲ್ಲಿ ಲೂಟಿ ಹೊಡೆಯಬೇಕೋ ಅಲ್ಲೆಲ್ಲಾ ಲೂಟಿ ಹೊಡೆದಿದ್ದಾರೆ. ಸ್ವಚ್ಛತೆ ಎಂಬುದನ್ನೇ ಕಾಪಾಡಿಲ್ಲ. ಯಾವ ಯೋಜನೆ ಎಲ್ಲಿ ಜಾರಿಗೊಳಿಸಬೇಕು ಎಂಬುದರ ಬಗ್ಗೆ ನಿಖರತೆ ಇಲ್ಲ. ಎಲ್ಲವನ್ನೂ ಅವರ ಕಾಲೇಜಿಗೆ ಹಾಕಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ರವೀಂದ್ರನಾಥ್‌ಗೆ ಇರೋ ತೂಕ ಸಿದ್ದೇಶ್ವರಗಿಲ್ಲ
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಸಂಬಂಧದಲ್ಲಿ ನನಗೆ ಅಣ್ಣ ಆಗಬೇಕು. ಏಕವಚನದಲ್ಲಿಯೇ ಸಿದ್ದೇಶ್ವರ ಅವರನ್ನು ಸಂಭೋದಿಸಿ ಅವನೂ ನನಗೆ ಸಂಬಂಧಿಕನೇ. ಇಬ್ಬರ ನಡವಳಿಕೆಯಲ್ಲಿ ಭಾರೀ ವ್ಯತ್ಯಾಸ ಇದೆ. ರವೀಂದ್ರನಾಥ್ ಅವರಿಗೆ ಇರುವ ತೂಕ ಸಿದ್ದೇಶ್ವರ ಅವರಿಗಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿಶ್ಲೇಷಿಸಿದರು.
ರವೀಂದ್ರನಾಥ್ ಅವರು ನನಗೆ ಸಿದ್ದೇಶ್ವರಗಿಂತ ಮೊದಲೇ ಪರಿಚಯ. ನನಗೆ ಅಣ್ಣ ಆಗಬೇಕು. ಸಿದ್ದೇಶ್ವರ ಹಾಗೂ ರವೀಂದ್ರನಾಥ್ ಇಬ್ಬರೂ ನನಗೆ ಸಂಬಂಧಿಕರೇ. ರವೀಂದ್ರನಾಥ್ ಅವರಿಗೂ ಸಿದ್ದೇಶ್ವರರಿಗೂ ಬಹಳ ವ್ಯತ್ಯಾಸ ಇದೆ. ಪ್ರತಿಯೊಂದು ವಿಚಾರಗಳಲ್ಲಿಯೂ ಅಷ್ಟೇ. ಅವರ ತೂಕ ಸಿದ್ದೇಶ್ವರಗೆ ಬರೋಲ್ಲ. ಪಾಪ ರವೀಂದ್ರನಾಥ್ ಅವರಿಗೆ ಮೈಯಲ್ಲಿ ಹುಷಾರಿರಲಿಲ್ಲ. ಆದರೂ ಶ್ರಮ ಪಟ್ಟಿದ್ದಾರೆ. ಹೋರಾಟದಿಂದ ಮೇಲೆ ಬಂದವರು. ಹಾಗಾಗಿ, ಅವರಿಗೆ ಬೆಲೆ ಇದೆ. ನಮಗೂ ಅವರ ಬಗ್ಗೆ ಗೌರವವಿದೆ. ಅದನ್ನು ಬಿಟ್ಟು ರವೀಂದ್ರನಾಥ್ ಹಾಗೂ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದರೆ ಅರ್ಥವೇನು? ಎಂದು ಪ್ರಶ್ನಿಸಿದರು.
ರವೀಂದ್ರನಾಥ್ ಯಾವಾಗ ನನಗೆ ತೊಂದರೆ ಕೊಟ್ಟಿದ್ದಾರೆ. ಚೌಕಿಪೇಟೆಯಲ್ಲಿ ಅಂಗಡಿಯಿತ್ತು. ನಾನು ಕುಳಿತುಕೊಳ್ಳುತ್ತಿದ್ದೆ. ಆವಾಗಿನಿಂದಲೇ ಅವರನ್ನು ಬಲ್ಲೆ. ಒಬ್ಬರೇ ಹೋರಾಟ ಮಾಡಿಕೊಂಡು ರಾಜಕೀಯವಾಗಿ ಮೇಲೆ ಬಂದವರು. ಆ ವೇಳೆಯಲ್ಲಿಯೂ ಬಲ್ಲೆ. ರವೀಂದ್ರನಾಥ್ ಅವರು ನಾನು ಸ್ನೇಹಿತರು. ಯಾಕೆ ಸ್ನೇಹ ಇರಬಾರದಾ ಎಂದು ಹೇಳಿದರು.
ಹೊನ್ನಾಳಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು ನನ್ನ ಮನೆಗೆ ಬಂದು ಮಾತನಾಡಿಸಿದ್ದು ಇದೇ ಮೊದಲು. ಮನೆಗೆ ಬಂದು ಮಾತನಾಡಿದರೆ ಬೇಡ ಎನ್ನಲೇ. ಮಾತನಾಡಿಸಲೇಬೇಕಲ್ವಾ. ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕು ಬರಪೀಡಿತ ಎಂದು ಘೋಷಿಸಲು ಮನವಿ ಸಲ್ಲಿಸಲು ಬಂದಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ನನ್ನನ್ನು ಭೇಟಿ ಮಾಡಿದ್ದರು ಅಷ್ಟೇ. ಅವರ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೇನೂ ಗೊತ್ತು ಎಂದು ಹೇಳಿದರು.
ನಾನು ಜ್ಯೋತಿಷಿ ಅಲ್ಲ
ಡಿಸೆಂಬರ್‌ಗೆ ಲೋಕಸಭೆ ಚುನಾವಣೆ ನಡೆಯಬಹುದು ಎಂದು ಹೇಳಲು ನಾನು ಜ್ಯೋತಿಷಿ ಅಲ್ಲ, ಜ್ಯೋತಿಷ್ಯವೂ ಗೊತ್ತಿಲ್ಲ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಏನಾದರೂ ಮಾಹಿತಿ ಇರಬಹುದು. ಆಂತರಿಕವಾಗಿ ಗೊತ್ತಾಗಿರಬಹುದು ಎಂದರು. ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏನೇನೋ ಹೇಳುತ್ತಿರುತ್ತಾರೆ. ಇನ್ನೊಬ್ಬರ ಮೇಲೆ ಹೇಳುತ್ತಲೇ ಇರುತ್ತಾರೆ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.












Click it and Unblock the Notifications