ಮಾ. 6ರಂದು ಶಾಸಕರ ಪುತ್ರ ಎಸ್‌.ಎಸ್‌ ಗಣೇಶ್ ಮಾಲೀಕತ್ವದ ಸಕ್ಕರೆ ಕಾರ್ಖಾನೆ ವಿರುದ್ಧ ಪ್ರತಿಭಟನೆ

ಎಸ್. ಎಸ್. ಗಣೇಶರ ಒಡೆತನದ ಕುಕ್ಕುವಾಡ ಗ್ರಾಮದಲ್ಲಿನ ಸಕ್ಕರೆ ಕಾರ್ಖಾನೆಯಿಂದ ಆಗುತ್ತಿರುವ ಪರಿಸರ ಹಾನಿ ಮತ್ತು ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ ರೈತ ಒಕ್ಕೂಟ ಮಾರ್ಚ್ 6ರಂದು ಪ್ರತಿಭಟನೆ ನಡೆಸಲು ಸಜ್ಜಾಗಿದೆ.

ದಾವಣಗೆರೆ, ಮಾರ್ಚ್ 1: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪುತ್ರ ಎಸ್. ಎಸ್. ಗಣೇಶರ ಒಡೆತನದ ಕುಕ್ಕುವಾಡ ಗ್ರಾಮದಲ್ಲಿನ ಸಕ್ಕರೆ ಕಾರ್ಖಾನೆಯಿಂದ ಆಗುತ್ತಿರುವ ಪರಿಸರ ಹಾನಿ ಮತ್ತು ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ ರೈತ ಒಕ್ಕೂಟದ ನೇತೃತ್ವದಲ್ಲಿ ಮಾರ್ಚ್ 6ರಂದು ಬೆಳಿಗ್ಗೆ 10.30ಕ್ಕೆ ಕಾರ್ಖಾನೆಯ ಎದುರು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಸಂಚಾಲಕ ಬಿ. ಎಂ. ಸತೀಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾರ್ಖಾನೆ ವಿರುದ್ಧ ಪ್ರತಿಭಟನೆ ನಡೆಸಿದ್ದೆವು. ಆಗ ಜಿಲ್ಲಾಡಳಿತ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೆ ಈಡೇರಿಲ್ಲ. ಕೇವಲ ನೊಟೀಸ್ ನೀಡಿ ಸುಮ್ಮನೆ ಕುಳಿತಿರುವ ಜಿಲ್ಲಾಡಳಿತ ರೈತರ ಹಿತಾಸಕ್ತಿ ಮರೆತು ಕಾರ್ಖಾನೆ ಮಾಲೀಕರ ಹಿತಾಸಕ್ತಿ ಕಾಪಾಡುತ್ತಿದೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Famers Conduct Protest Against Factory Owned By MLA Shamanur Shivashankarappa Son

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ತ್ಯಾಜ್ಯ ನೀರು ಸಂಗ್ರಹಿಸಿ ಹೋಗಿದ್ದರು. ಆ ಬಳಿಕ ಮಾಲೀಕರಿಗೆ ನೊಟೀಸ್ ನೀಡಿತ್ತು. ಆದರೆ, ಮಾಲೀಕರು ಕಾರ್ಖಾನೆಯ ಕೊಳೆ ನೀರಲ್ಲ, ಅದು ವಸತಿ ಪ್ರದೇಶದ ಕೊಳಚೆ ನೀರು ಎನ್ನುವ ಸಬೂಬು ನೀಡಿದೆ. ಆ ಬಳಿಕ ಸುಮ್ಮನೆ ಇರುವುದು ಯಾಕೆ. ಮೇಲ್ನೋಟಕ್ಕೆ ಕಂಡು ಬಂದರೂ ಕ್ರಮ ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದರು.

ಸಕ್ಕರೆ ಕಾರ್ಖಾನೆ ಚಿಮಣಿಯಿಂದ ಹೊರ ಸೂಸುವ ಹೊಗೆಯ ಬೂದಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಸಕ್ಕರೆ ಕಾರ್ಖಾನೆಯ ತ್ಯಾಜ್ಯ ನೀರನ್ನು ಹಳ್ಳಕ್ಕೆ ಬಿಡಬಾರದು. ಕಾರ್ಖಾನೆ ಆವರಣದಲ್ಲಿ ಇದನ್ನು ಸಂಗ್ರಹಿಸಿ, ಸಂಸ್ಕರಿಸಬೇಕು. ಕಬ್ಬು ಕಟಾವು ಮಾಡಲು ನಿಗಧಿತ ಸಮಯದಲ್ಲಿ ಪರ್ಮಿಟ್ ಕೊಡುತ್ತಿಲ್ಲ. ಇದರಿಂದ ಕಬ್ಬಿನ ತೂಕ ಕಡಿಮೆಯಾಗಿ, ರೈತನಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಬ್ಬಿನ ಟನ್‌ಗೆ 3,100 ರೂ ಕೊಡಬೇಕು: ರೈತರ ಆಗ್ರಹ

ಕಬ್ಬು ನಾಟಿ ಮಾಡಿದ 10 ರಿಂದ 11 ತಿಂಗಳೊಳಗೆ ಪರ್ಮಿಟ್ ಕೊಡಬೇಕು. ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುವ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚಳವಾಗಿದೆ. ಈ ವೆಚ್ಚ ಕಬ್ಬಿನ ಬೆಲೆಯ ಅರ್ಧದಷ್ಟು ಆಗಿದೆ. ಇದರಿಂದ ಕಬ್ಬು ಬೆಳೆದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಯಂತ್ರಗಳ ಮೂಲಕ ಕಬ್ಬು ಕಟಾವು ಮಾಡಿ, ಕಾರ್ಖಾನೆಗೆ ಸಾಗಿಸುವ ಜವಾಬ್ದಾರಿಯನ್ನು ಕಾರ್ಖಾನೆ ಆಡಳಿತ ಮಂಡಳಿ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

Famers Conduct Protest Against Factory Owned By MLA Shamanur Shivashankarappa Son

ಕಬ್ಬಿನ ಟನ್ ಗೆ 3100 ರೂ., ಕೊಡಬೇಕು ಎಂದು ರಾಜ್ಯ ಸರ್ಕಾರ ನಿಗದಿ ಪಡಿಸಿದೆ. ಆದರೆ ಈ ಕಾರ್ಖಾನೆಯಲ್ಲಿ ಟನ್ನಿಗೆ 2821 ರೂ., ಮಾತ್ರ ಕೊಡಲಾಗುತ್ತಿದೆ. ಇದು ಟನ್‌ಗೆ 279 ರೂಪಾಯಿ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಬಹಳ ಅನ್ಯಾಯವಾಗುತ್ತಿದೆ. ಈ ಹಂಗಾಮಿನಲ್ಲಿ ಸರ್ಕಾರ ನಿಗದಿಪಡಿಸಿರುವ ಬೆಲೆ 3100 ರೂ., ತಕ್ಷಣದಿಂದ ಕೊಡಬೇಕು. ಈಗಾಗಲೇ ಕಬ್ಬು ಸರಬರಾಜು ಮಾಡಿರುವ ರೈತರಿಗೂ 279 ರೂಪಾಯಿ ಬಿಡುಗಡೆ ಮಾಡಬೇಕು ಎಂದು ಬಿ. ಎಂ. ಸತೀಶ್ ಒತ್ತಾಯಿಸಿದರು.

ಕಬ್ಬು ಸರಬರಾಜು ಮಾಡಿ, 2 ತಿಂಗಳಾದರೂ ಅಂತಿಮ ಬಿಲ್ ಪಾವತಿಸಿಲ್ಲ. ರಾಜ್ಯ ಸರ್ಕಾರದ ಆದೇಶದಂತೆ ಕಬ್ಬು ಸರಬರಾಜು ಮಾಡಿದ 14 ದಿನಗಳೊಳಗೆ ರೈತರಿಗೆ ಪೂರ್ಣ ಹಣ ಪಾವತಿಸಬೇಕು. ಕಾರ್ಖಾನೆಯಲ್ಲಿ ಷೇರುಹೊಂದಿರುವ ರೈತರಿಗೆ ಲಾಭಾಂಶ ಕೊಡಬೇಕು ಮತ್ತು ಷೇರು ವರ್ಗಾವಣೆ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಹೇಳಿದರು.

ಕಾರ್ಖಾನೆ ಆವರಣದ ಕಚೇರಿಯಲ್ಲಿ ಷೇರು ವರ್ಗಾವಣೆ ಪ್ರಕ್ರಿಯೆ ನಡೆಯಬೇಕು. ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಕನಿಷ್ಠವೇತನ ಕಾಯ್ದೆ ಅನ್ವಯ ವೇತನವನ್ನು ಸಮಯಕ್ಕೆ ಸರಿಯಾಗಿ ಕೊಡಬೇಕು. ಸಕ್ಕರೆ ಕಾರ್ಖಾನೆಯವರು ವಿದ್ಯುತ್ ಅವಘಡಗಳಿಂದ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದು ಸುಟ್ಟಿರುವ ಕಬ್ಬನ್ನು ಖರೀದಿಸುವಾಗ ತೂಕದಲ್ಲಿ ಟನ್ ಒಂದಕ್ಕೆ 250 ಕೆ.ಜಿ ಕಡಿತಗೊಳಿಸಿ, ಲೆಕ್ಕ ಮಾಡುತ್ತಾರೆ. ಇದು ಬೆಂಕಿಗೆ ಆಹುತಿಯಾದ ಬೆಳೆಯಿಂದ ತೀವ್ರ ನಷ್ಟ ಅನುಭವಿಸಿದ ರೈತನ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಆದ್ದರಿಂದ ಸುಟ್ಟ ಕಬ್ಬಿನ ನೈಜ ತೂಕ ಪರಿಗಣಿಸಿ ಲೆಕ್ಕ ಮಾಡಿ, ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಕುರಿತು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಜಿಲ್ಲಾಡಳಿತ ಕಬ್ಬು ಬೆಳೆಯುವ ರೈತರಿಗೆ ಟಿಸಿಗಳನ್ನು ಕೂಡಲೇ ವಿತರಿಸಬೇಕು. ಅಲ್ಲದೇ ರೈತರ ವಿವಿಧ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+