Durgambika Jatra 2024: ದಾವಣಗೆರೆ ಶಕ್ತಿದೇವತೆ ದುರ್ಗಾಂಬಿಕಾ ದೇವಿ ಜಾತ್ರೆಗೆ ಮುಹೂರ್ತ ಫಿಕ್ಸ್-ಮಾಹಿತಿ ತಿಳಿಯಿರಿ
ದಾವಣಗೆರೆ, ಜನವರಿ, 24: ನಗರದ ಶಕ್ತಿದೇವತೆ ಶಿವಾಜಿನಗರದ ದುರ್ಗಾಂಬಿಕಾ ತಾಯಿ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಮಾರ್ಚ್ 19 ಮತ್ತು 20ರಂದು ಅತ್ಯಂತ ವಿಜೃಂಭಣೆ, ಸಡಗರ, ಸಂಭ್ರಮ ಹಾಗೂ ವೈಭವೋಪೇತವಾಗಿ ನೆರವೇರಿಸಲು ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ತೀರ್ಮಾನಿಸಿದ್ದು, ಈ ಸಂಬಂಧ ಅಧಿಕೃತವಾಗಿ ಘೋಷಿಸಿದೆ.
ದಾವಣಗೆರೆ ನಗರದ ದುಗ್ಗಮ್ಮ ದೇವಸ್ಥಾನದ ಮುಂಭಾಗದ ಪ್ರಸಾದ ನಿಲಯದಲ್ಲಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷರೂ, ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಧರ್ಮದರ್ಶಿ ಗೌಡ್ರು ಚನ್ನಬಸಪ್ಪರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ದುರ್ಗಮ್ಮ ಜಾತ್ರೆ ಅಂದರೆ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿದೆ. ಮಾತ್ರವಲ್ಲ, ಈ ಜಾತ್ರೆಗೆ ಇಡೀ ದಾವಣಗೆರೆಯೇ ಸಜ್ಜಾಗುತ್ತಿದೆ.

ಈ ಜಾತ್ರೆಗೆ ಎಲ್ಲೇ ಇದ್ದರೂ ಜನರು ತಂಡೋಪತಂಡವಾಗಿ ಬರುತ್ತಾರೆ. ವಿದೇಶದಲ್ಲಿ ಇದ್ದರೂ ಸಹ ಈ ಜಾತ್ರೆ ತಪ್ಪಿಸಿಕೊಳ್ಳುವುದಿಲ್ಲ. ಅಷ್ಟು ಖ್ಯಾತಿ ಪಡೆದಿದೆ ಈ ಜಾತ್ರಾ ಮಹೋತ್ಸವ. ಶಾಮನೂರು ಶಿವಶಂಕರಪ್ಪರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾತ್ರಾ ಮಹೋತ್ಸವದ ಕುರಿತಂತೆ ಸುದೀರ್ಘವಾಗಿ ಚರ್ಚಿಸಲಾಯಿತು. ಅಂತಿಮವಾಗಿ ಮಾರ್ಚ್ 19 ಹಾಗೂ 20ರಂದು ಅದ್ಧೂರಿಯಾಗಿ ಆಚರಣೆ ಮಾಡಲು ಒಮ್ಮತದಿಂದ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ, ದೇವಸ್ಥಾನದ ಪುರೋಹಿತರಾದ ನಾಗರಾಜ್ ಜೋಯಿಸ್ ಅವರು ದಿನಾಂಕ ಘೋಷಿಸಿದರು. ಬರುವ ಫೆಬ್ರುವರಿ 13ರಂದು ಬೆಳಗ್ಗೆ 11ಗಂಟೆಗೆ ಹಂದರ ಕಂಬ ಪೂಜೆಯ ಮೂಲಕ ಹಬ್ಬಕ್ಕೆ ಚಾಲನೆ ಸಿಗಲಿದೆ.
ಮಾರ್ಚ್ 17ರಂದು ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ರಾತ್ರಿ 8ಗಂಟೆಗೆ ಕಂಕಣಧಾರಣೆ, ನಂತರ ಕೋಣದೊಂದಿಗೆ ನಗರದಲ್ಲಿ ಸಾರುವುದು, 18, 19ರಂದು ದೇವಿಗೆ ವಿಶೇಷ ಅಲಂಕಾರ, ಭಕ್ತಿ ಸಮರ್ಪಣೆ, 20ರಂದು ಮುಂಜಾನೆ ಚರಗ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಪ್ರತಿ ವರ್ಷದಂತೆ ಕುರಿಕಾಳಗ, ಕುಸ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕುರಿ ಕಾಳಗದ ವೇಳೆ ಈ ಹಿಂದೆ ಜಗಳ, ಗಲಾಟೆ ನಡೆದಿದ್ದು, ಈ ಕಾರಣಕ್ಕೆ ಕುರಿ ಕಾಳಗ ನಡೆಸುವಂತಿಲ್ಲ ಎಂದು ಸಮಿತಿಯವರು ಹೇಳುತ್ತಿದ್ದಂತೆ ಇದಕ್ಕೆ ಆಕ್ಷೇಪ ವ್ಯಕ್ತವಾಯಿತು. ಕುರಿ ಕಾಳಗಕ್ಕೆ ಈಗಾಗಲೇ ಯುವಕರು ಸೇರಿದಂತೆ ಹಲವರು ಈಗಾಗಲೇ ಸಜ್ಜಾಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕುರಿಗಳನ್ನು ಕಾಳಗಕ್ಕೆ ತಯಾರು ಮಾಡಿದ್ದಾರೆ. ಹಾಗಾಗಿ, ಕುರಿ ಕಾಳಗ ಬೇಡ ಎಂದರೆ ಕುಸ್ತಿ ಕಾಳಗವೂ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಡ, ಹಾಗಾಗಿ, ಸರಳವಾಗಿ ಆಚರಿಸಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿಯಿತು. ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣವೂ ನಿರ್ಮಾಣವಾಯಿತು. ವಾದ- ವಿವಾದ, ವಾಗ್ವಾದವೂ ಜರುಗಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಶಾಮನೂರು ಶಿವಶಂಕರಪ್ಪ ಅವರು ಪ್ರತಿ ವರ್ಷ ನಡೆಸುವ ಜಾತ್ರೆಯಂತೆ ಎಲ್ಲಾ ಕಾರ್ಯಕ್ರಮಗಳು ಮುಂದುವರೆಯಲಿ, ಯಾವುದೇ ಬದಲಾವಣೆ ಮಾಡುವುದು ಬೇಡ. ಕುರಿಕಾಳಗಕ್ಕೆ ಯುವಕರು ಆಸೆಪಡುತ್ತಿದ್ದು, ಅದನ್ನು ನಡೆಸೋಣ ಎಂದು ಹೇಳುತ್ತಿದ್ದಂತೆ ಯುವಕರು ಸುಮ್ಮನಾದರು.
ಇನ್ನೂ ಬಿಲ್ಡಿಂಗ್ ನಿರ್ಮಾಣ ವಿಚಾರಕ್ಕೆ ಶಾಮನೂರು ಶಿವಶಂಕರಪ್ಪ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್ ನಡುವೆ ವಾಗ್ವಾದ ಉಂಟಾಯಿತು. ಮೂರುವರೆ ಲಕ್ಷಕ್ಕೆ ಐವತ್ತು ಲಕ್ಷ ರೂಪಾಯಿ ಜಿಎಸ್‌ಟಿ ಕಟ್ಟಿದ್ದೀರಿ, ರೇಣುಕಾ ಮಂದಿರ ನಿರ್ಮಾಣಕ್ಕೆ ಜಿಎಸ್‌ಟಿ ಯಾಜೆ ಹಾಕಿಲ್ಲ ಎಂದು ಅಥಣಿ ವೀರಣ್ಣನವರನ್ನೂ ಪ್ರಶ್ನೆ ಮಾಡಿದ ಘಟನೆಯೂ ನಡೆಯಿತು.
ಈ ವೇಳೆಯೂ ವಾಗ್ವಾದ ಉಂಟಾಯಿತು. ಕಮಿಟಿ ಸಭೆಯಲ್ಲಿ ಲೆಕ್ಕ ತಿಳಿಸಲಾಗುವುದು ಎಂದು ಅವಸರದಲ್ಲೇ ಸಭೆ ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಮೇಯರ್ ವಿನಾಯಕ್ ಪೈಲ್ವಾನ್, ಉಪಮೇಯರ್ ಯಶೋಧ ಹೆಗ್ಗಪ್ಪ ಸೇರಿದಂತೆ ಹಿರಿಯ ಮುಖಂಡರು, ಸಮಿತಿಯವರು, ಯುವಕರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.











Click it and Unblock the Notifications