ಕಲ್ಲ ಹಾವಿಗೆ ಹಾಲೆರೆಯಬೇಡಿ; ಅದನ್ನೇ ಮಕ್ಕಳಿಗೆ ಕೊಡಿ: ಜಯಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ, ಆಗಸ್ಟ್ 1: ಇನ್ನೇನು ನಾಗರಪಂಚಮಿ ಹಬ್ಬ ಹತ್ತಿರವಾಗುತ್ತಿದೆ. ಶ್ರಾವಣ ಮಾಸದಲ್ಲಿನ ಈ ಹಬ್ಬದಲ್ಲಿ ಕಲ್ಲಿನ ನಾಗರ ಹಾವಿಗೆ ಹಾಲೆರೆಯುವ ಪದ್ಧತಿ ಎಲ್ಲೆಲ್ಲೂ ನಡೆಯುತ್ತದೆ. ಕೆಲವರು ಹುತ್ತಕ್ಕೆ ಹಾಲೆರೆಯುತ್ತಾರೆ. ಆದರೆ ಹಾಲನ್ನು ಹೀಗೆ ಸುಮ್ಮನೆ ಸುರಿದು ವ್ಯರ್ಥ ಮಾಡುವ ಬದಲು ಮಕ್ಕಳಿಗೆ ನೀಡಿ ಎಂದು ದಾವಣಗೆರೆಯಲ್ಲಿ ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.
ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ ಬಿಜಿಎಂ ಶಾಲೆಯಲ್ಲಿ "ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು' ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
"ಕೆಲವೇ ದಿನಗಳಲ್ಲಿ ನಾಗರ ಪಂಚಮಿ ಹಬ್ಬ ಬರುತ್ತಿದೆ. ಆಗ ಲಕ್ಷಾಂತರ ಲೀಟರ್ ಹಾಲನ್ನು ನಾಗರ ಮೂರ್ತಿಗಳಿಗೆ, ಹುತ್ತಗಳಿಗೆ ಎರೆದು ವ್ಯರ್ಥ ಮಾಡುತ್ತೀರಿ. ಆದರೆ ಹಾಗೆ ಮಾಡಬೇಡಿ. ಅದನ್ನೇ ಮಕ್ಕಳಿಗೆ ನೀಡಿ. ಮಕ್ಕಳು ಅದನ್ನು ಸದೃಢವಾಗಿ ಬೆಳೆಯುತ್ತಾರೆ" ಎಂದು ಸಲಹೆ ನೀಡಿದ್ದಾರೆ.

"ಹುತ್ತಕ್ಕೆ ಹಾಲು ಎರೆಯುವುದರಿಂದ ಹಾವುಗಳು ಸಾವನ್ನಪ್ಪುವ ಘಟನೆಗಳೂ ನಡೆದಿವೆ. ಆದ್ದರಿಂದ ಕೇವಲ ಪೂಜೆ ಸಲ್ಲಿಸಿ, ಬೇಡಿಕೊಳ್ಳಿ. ಅದೇ ಹಾಲನ್ನು ಮಕ್ಕಳಿಗೆ ವಿತರಣೆ ಮಾಡುವುದರ ಮೂಲಕ ಹಬ್ಬ ಆಚರಿಸಿ" ಎಂದು ಕರೆ ನೀಡಿದರು. ಶಾಲೆಯ ಮಕ್ಕಳಿಗೆ ಹಾಲು ಹಾಗೂ ಬನ್ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.












Click it and Unblock the Notifications