ದುಗ್ಗಮ್ಮನ ಜಾತ್ರೆಯಲ್ಲಿ ಬಾಡೂಟಕ್ಕೆ ಬೆಣ್ಣೆ ನಗರಿ ರೆಡಿ, ಕೋಣ ಬಲಿ ನಡೆಯದಂತೆ ಕಟ್ಟೆಚ್ಚರ
ದಾವಣಗೆರೆ, ಮಾರ್ಚ್ 03: ದಾವಣಗೆರೆಯಲ್ಲಿ ಇದೀಗ ಬೆಣ್ಣೆದೋಸೆ ವಾಸನೆಗಿಂತ ಮಾಂಸಾಹಾರದ ವಾಸನೆಯೇ ಮೂಗಿಗೆ ರಾಚುತ್ತಿದೆ. ದುಗ್ಗಮ್ಮ ಜಾತ್ರೆಯ ಪ್ರಯುಕ್ತ ಎಲ್ಲೆಡೆ ಮಾಂಸಾಹಾರದ ಘಮ ತುಂಬಿಕೊಂಡಿದೆ. ಮನೆಗೊಂದರಂತೆ ಕುರಿಯನ್ನು ದುಗ್ಗಮ್ಮನ ಹಬ್ಬಕ್ಕೆಂದೇ ಮೀಸಲಿರಿಸಿದ್ದಾರೆ.
ಎರಡು ವರ್ಷಕ್ಕೊಮ್ಮೆ ದಾವಣಗೆರೆ ನಗರದಲ್ಲಿ ನಡೆಯುವ ದುಗ್ಗಮ್ಮ ಜಾತ್ರೆ ಮಧ್ಯ ಕರ್ನಾಟಕದಲ್ಲೇ ಫೇಮಸ್ಸು. ಬಲು ಜೋರಾಗಿ ನಡೆಯುವ ಈ ಜಾತ್ರೆಯಲ್ಲಿ ಮನೆಗೊಂದು, ಎರಡರಂತೆ ಕುರಿ, ಕೋಳಿಗಳು ಬಲಿ ಬೀಳುತ್ತವೆ ಎಂದು ಅಂದಾಜಿಸಲಾಗಿದೆ. ಆದರೆ ದೇವಿಯ ಮುಂದೆ ಈ ಬಾರಿ ಕೋಣ ಬಲಿ ಕೊಡುವ ಹಾಗಿಲ್ಲ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ದೇವಸ್ಥಾನ ಸಮಿತಿ ಕೂಡ ಪ್ರಾಣಿ ಬಲಿ ಮಾಡಲ್ಲ, ಬದಲಿಗೆ ಕೋಣದ ರಕ್ತವನ್ನು ಸಿರಿಂಜ್ ಮೂಲಕ ತೆಗೆದು ಚರಗಕ್ಕೆ ಹಾಕಿ ಕೋಣವನ್ನು ಬಿಡಲಾಗುತ್ತದೆ ಎಂದು ಹೇಳಿದೆ. ಕೋಣವನ್ನು ಜಿಲ್ಲಾಡಳಿತದ ಮೂಲಕ ಪೊಲೀಸರಿಗೆ ಒಪ್ಪಿಸುತ್ತೇವೆ ಎಂದು ಧರ್ಮದರ್ಶಿ ವೀರಭದ್ರಪ್ಪ ತಿಳಿಸಿದ್ದಾರೆ.

ಈಗಾಗಲೇ ಕೋಣ ಸಾರುವ ಕಾರ್ಯಕ್ರಮ ನಡೆದಿದೆ. ಗಾಂಧಿನಗರದಿಂದ ಮೆರವಣಿಗೆಯಲ್ಲಿ ಕೋಣವನ್ನು ತರಲಾಯಿತು. ಶಾಮನೂರು ಮನೆ, ಗೌಡ್ರ ಕಳಸಪ್ಪನವರ ಮನೆ, ಗೌಡ್ರ ಅಜ್ಜಪ್ಪನವರ ಮನೆ, ರಾಮಜ್ಜಪ್ಪರ ವೆಂಕಟೇಶಪ್ಪರ ಮನೆ, ದೇವರಹಟ್ಟಿ ಗೌಡರ ಮನೆ ಹೀಗೆ ಐದು ಮನೆಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು, ಆರತಿ ಎತ್ತಿಸಿಕೊಂಡು ದೇವಸ್ಥಾನಕ್ಕೆ ಬರಲಾಯಿತು. ಕೋಣವನ್ನು ಕೂಡಿ ಹಾಕಿ ಬೀಗ ಹಾಕಲಾಯಿತು. ಅದರ ಕೀಲಿಯನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವ ದಯಾನಂದ ಸ್ವಾಮಿಜಿ, ಹೈ ಕೋರ್ಟ್ ಆದೇಶದನ್ವಯ ಪ್ರಾಣಿ ಬಲಿ ತಡೆಗಟ್ಟಬೇಕಿದೆ, ದೇವಸ್ಥಾನ, ಮಠಗಳು ಪಾವಿತ್ರತೆ ಕಾಪಾಡುವ ಸ್ಥಳಗಳು. ಇಲ್ಲಿಯೂ ಬಲಿಯಾದರೆ ಹೇಗೆ? ಹೀಗಾಗಿ ಈ ಸ್ಥಳಗಳಲ್ಲಾದರೂ ಪ್ರಾಣಿ ಬಲಿ ನಡೆಯಕೂಡದು, ಈ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಬಾರಿ ದೇವಿಯ ಮುಂದೆ ಕೋಣ ಬಲಿಯನ್ನು ತಡೆಯಲಾಗಿತ್ತು, ಬಳಿಕ ಬೇರೊಂದು ಪ್ರದೇಶದಲ್ಲಿ ಇನ್ನೊಂದು ಕೋಣವನ್ನು ಬಲಿ ನಡೆಸಲಾಗಿತ್ತು. ಆದರೆ ಈ ಬಾರಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ದೇವಸ್ಥಾನ ಮುಂಭಾಗ ಬಲಿಗಳು, ಮೌಢ್ಯಾಚರಣೆಗಳು ನಡೆದರೆ ದೇವಸ್ಥಾನ ಮುಜುರಾಯಿ ಇಲಾಖೆಗೆ ಸೇರಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಆದರೆ ಜನರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮನೆ ಮುಂದೆ ಕುರಿಗಳನ್ನು ಕಟ್ಟಿ ಹಬ್ಬಕ್ಕೆ ಸಿದ್ಧರಾಗಿದ್ದಾರೆ.












Click it and Unblock the Notifications