ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿ
ದಾವಣಗೆರೆ, ಮೇ 06 : ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹಾಗೂ ರೈಲ್ವೆ ಬೋರ್ಡ್ ಛೇರ್ಮನ್ ಅವರಿಗೆ ಒತ್ತಾಯಿಸಲಾಗಿದೆ.
ನೈಋತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಮತ್ತು ರೈಲ್ವೆ ಬೋರ್ಡ್ ಛೇರ್ಮನ್ ಅಶ್ವನಿ ಲೋಹನಿ ಅವರಿಗೆ ಪತ್ರ ಬರೆದಿದೆ. ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದಿಂದ ಬೆಂಗಳೂರಿನಿಂದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗ ಮತ್ತು ವಿಜಯಪುರದ ಅಂತರ ಸುಮಾರು 65 ಕಿ.ಮೀ ಕಡಿಮೆಯಾಗಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ರೈಲು ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಬೆಂಗಳೂರಿನಿಂದ ಚಿತ್ರದುರ್ಗದ ಅಂತರ 110 ಕಿ.ಮೀ.ಕಡಿಮೆಯಾಗಲಿದೆ. ಶಿರಾ ಮತ್ತು ಹಿರಿಯೂರಿಗೆ ರೈಲ್ವೆ ಸಂಪರ್ಕ ಸಿಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಮಾರ್ಗದಲ್ಲಿ ಶೇ 50ರಷ್ಟು ರೈಲುಗಳ ಸಂಚಾರ ಕಡಿಮೆಯಾಗಲಿದೆ. ಶಿವಮೊಗ್ಗಕ್ಕೆ ಬೆಂಗಳೂರಿನಿಂದ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು ಓಡಿಸಬಹುದು ಎಂದು ವಿವರಣೆ ನೀಡಿಲಾಗಿದೆ.
ಬಜೆಟ್‌ನಲ್ಲಿ ಘೋಷಣೆ : ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಯೋಜನೆಗೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ 100 ಕೋಟಿ ರೂ. ಘೋಷಣೆ ಮಾಡಿದೆ. ಭೂ ಸ್ವಾಧೀನ ಕಾರ್ಯ ಆರಂಭವಾದರೆ ಯೋಜನೆಗೆ ಚಾಲನೆ ಸಿಕ್ಕಿದಂತಾಗುತ್ತದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವೆ ನೇರ ರೈಲು ಮಾರ್ಗ ಆಗಬೇಕು ಎನ್ನುವುದು ಮೂರು ಜಿಲ್ಲೆಗಳ ಜನರ ದಶಕಗಳ ಕನಸು. ಆರ್ಥಿಕವಾಗಿ ಅಷ್ಟು ಲಾಭದಾಯಕವಲ್ಲ ಎಂಬ ಕಾರಣಕ್ಕೆ ಯೋಜನೆ ಜಾರಿಗೆ ಹಿಂದೇಟು ಹಾಕಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿದೆ.
2018ರ ಜುಲೈನಲ್ಲಿ ರಾಜ್ಯ ಸರ್ಕಾರ 2 ಕೋಟಿ ಅನುದಾನ ಬಿಡುಗಡೆ ಮಾಡಿ ಭೂ ಸ್ವಾಧೀನ ಕಾರ್ಯಕ್ಕೆ ಅಧಿಸೂಚನೆ ಹೊರಡಿಸಿತ್ತು. ದಾವಣಗೆರೆಯಲ್ಲಿ ಸುಮಾರು 237.36 ಎಕರೆ ಜಮೀನು ಯೋಜನೆಗೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಆರಂಭಗೊಂಡರೆ ಬೆಂಗಳೂರು-ವಿಜಯಪುರದ ನಡುವಿನ ಅಂತರ 65 ಕಿ.ಮೀ.ಕಡಿಮೆಯಾಗಲಿದೆ. ಬೆಂಗಳೂರು-ಚಿತ್ರದುರ್ಗ ನಡುವಿನ ಅಂತರ 110 ಕಿ.ಮೀ. ಕಡಿಮೆಯಾಗಲಿದೆ. ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಮಾರ್ಗದ ಒತ್ತಡ ಕಡಿಮೆಯಾಗಲಿದೆ.












Click it and Unblock the Notifications